ಕೆಜಿಎಫ್ ಚಾಪ್ಟರ್ 2 ಮೂಲಕ ಇಡೀ ವಿಶ್ವವನ್ನೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದ ರಾಕಿಂಗ್ ಸ್ಟಾರ್ ಯಶ್, ಈಗ 'ಟಾಕ್ಸಿಕ್' ಸಿನಿಮಾ ಮೂಲಕ ಅಬ್ಬರಿಸಲು ರೆಡಿಯಾಗುತ್ತಿದ್ದಾರೆ. ಸದ್ಯ ಅಮೆರಿಕದ ಲಾಸ್ ವೇಗಾಸ್‌ನಲ್ಲಿ ನಡೆಯುತ್ತಿರುವ 'ಕಾಮಿಕ್‌ಕಾನ್ 2026'ರಲ್ಲಿ ಭಾಗವಹಿಸಿರುವ ಯಶ್, ತಮ್ಮ ಮುಂದಿನ ಸಿನಿಮಾಗಳ ಬಗ್ಗೆ ಆಸಕ್ತಿದಾಯಕ ವಿಷಯಗಳನ್ನು ಹಂಚಿಕೊಂಡಿದ್ದಾರೆ.
ಯಶ್ ಮತ್ತು ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರು 'ರಾಮಾಯಣ' ಸಿನಿಮಾದ ಪ್ರಚಾರಕ್ಕಾಗಿ ಅಮೆರಿಕಕ್ಕೆ ಹೋಗಿದ್ದಾರೆ. ಕಾಮಿಕ್‌ಕಾನ್‌ನ ಮೊದಲ ದಿನವೇ ಗ್ರ್ಯಾಂಡ್ ಆಗಿ ಎಂಟ್ರಿ ಕೊಟ್ಟ ಯಶ್, ಅಲ್ಲಿನ ಮೀಡಿಯಾಗಳ ಜೊತೆ ಮಾತನಾಡುವಾಗ 'ಟಾಕ್ಸಿಕ್' ಬಗ್ಗೆಯೂ ಅಪ್‌ಡೇಟ್ ನೀಡಿದ್ದಾರೆ. "ಟಾಕ್ಸಿಕ್ ಸಿನಿಮಾ ಕಣ್ಣಿಗೆ ಹಬ್ಬದಂತೆ ಇರಲಿದ್ದು, ಪ್ರೇಕ್ಷಕರಿಗೆ ಹೊಸ ರೀತಿಯ ಅನುಭವ ನೀಡಲಿದೆ" ಎಂದು ಯಶ್ ಭರವಸೆ ನೀಡಿದ್ದಾರೆ.
ಸಿನಿಮಾ ಬಗ್ಗೆ ಮಾತನಾಡಿದ ಯಶ್, "ಟಾಕ್ಸಿಕ್ ಸಿನಿಮಾ ಇಂಗ್ಲಿಷ್‌ನಲ್ಲಿಯೂ ಶೂಟ್ ಆಗಿದೆ. ಇದು ಮೇಲ್ನೋಟಕ್ಕೆ ಆಕ್ಷನ್ ಮತ್ತು ಗ್ಯಾಂಗ್‌ಸ್ಟರ್ ಸಿನಿಮಾ ಅನ್ಸುತ್ತೆ, ಆದ್ರೆ ಇದರ ಹಿಂದೆ ತುಂಬಾ ಲೇಯರ್‌ಗಳಿವೆಯಂತೆ. ಇದರಲ್ಲಿ ಮಾನವ ಜೀವನದ ಸೈಕಾಲಜಿ ಬಗ್ಗೆ ಇಂಟರೆಸ್ಟಿಂಗ್ ವಿಷಯಗಳಿವೆ. ಒಂದು ಡಾರ್ಕ್ ಕ್ಯಾರೆಕ್ಟರ್ ಅನ್ನು ಹೇಗೆ ತೋರಿಸಬಹುದು ಅನ್ನೋದನ್ನ ಈ ಸಿನಿಮಾದಲ್ಲಿ ವಿಭಿನ್ನವಾಗಿ ಪ್ರಯತ್ನಿಸಲಾಗಿದೆ" ಎಂದಿದ್ದಾರೆ. ಗೀತು ಮೋಹನ್ ದಾಸ್ ಅವರ ನಿರ್ದೇಶನವು ಗ್ಯಾಂಗ್‌ಸ್ಟರ್ ಸಿನಿಮಾಗಳಿಗೆ ಹೊಸ ಆಯಾಮ ನೀಡಲಿದೆ ಅನ್ನೋದು ಯಶ್ ಮಾತು.
ಭಾರತೀಯ ಸಿನಿಮಾ ರಂಗದ ಬೆಳವಣಿಗೆಯ ಬಗ್ಗೆ ಮಾತನಾಡಿದ ಯಶ್, "ಭಾರತ ಅಂದ್ರೆ ಅದೊಂದು ಅದ್ಭುತ ಲೋಕ. ಇಲ್ಲಿ ಪ್ರತಿ ನೂರು ಕಿಲೋಮೀಟರ್‌ಗೆ ಭಾಷೆ ಮತ್ತು ಸಂಸ್ಕೃತಿ ಬದಲಾಗುತ್ತೆ. ಡಬ್ಬಿಂಗ್ ಮತ್ತು ಪ್ಯಾನ್-ಇಂಡಿಯಾ ಸಿನಿಮಾಗಳು ನಮ್ಮನ್ನೆಲ್ಲಾ ಒಂದು ಮಾಡಿದೆ. ಟಾಕ್ಸಿಕ್ ಸಿನಿಮಾ ಭಾರತೀಯ ಸೊಗಡನ್ನು ಉಳಿಸಿಕೊಂಡೇ ಜಾಗತಿಕ ಮಟ್ಟದ ಪ್ರೇಕ್ಷಕರಿಗೆ ಇಷ್ಟವಾಗುವಂತೆ ಸಿದ್ಧವಾಗುತ್ತಿದೆ" ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.
ಈ ಸಿನಿಮಾದಲ್ಲಿ ಯಶ್ ಜೊತೆ ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ನಮ್ಮ ಕನ್ನಡದ ಬೆಡಗಿ ರುಕ್ಮಿಣಿ ವಸಂತ್ ಮತ್ತು ತಾರಾ ಸುತಾರಿಯಾ ನಟಿಸುತ್ತಿದ್ದಾರೆ. ಯಶ್ ಅವರ 'ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್' ಮತ್ತು 'ಕೆವಿಎನ್ ಪ್ರೊಡಕ್ಷನ್ಸ್' ಈ ಸಿನಿಮಾವನ್ನು ಜಂಟಿಯಾಗಿ ನಿರ್ಮಾಣ ಮಾಡುತ್ತಿವೆ.
ಮೊದಲು ಮಾರ್ಚ್ 19ಕ್ಕೆ ಸಿನಿಮಾ ರಿಲೀಸ್ ಆಗುತ್ತೆ ಅಂತ ಫ್ಯಾನ್ಸ್ ಕಾಯುತ್ತಿದ್ದರು. ಆದರೆ, ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧದ ಕಾರಣದಿಂದಾಗಿ ಸಿನಿಮಾದ ರಿಲೀಸ್ ಡೇಟ್ ಸ್ವಲ್ಪ ಮುಂದಕ್ಕೆ ಹೋಗಿದೆ. ಈಗ ಸಿಕ್ಕಿರುವ ಲೇಟೆಸ್ಟ್ ಮಾಹಿತಿ ಪ್ರಕಾರ, 'ಟಾಕ್ಸಿಕ್' ಸಿನಿಮಾ ಜೂನ್ 4, 2026 ರಂದು ವಿಶ್ವಾದ್ಯಂತ ಅದ್ಧೂರಿಯಾಗಿ ತೆರೆಗೆ ಬರಲಿದೆ.
ಸುಮಾರು ನಾಲ್ಕು ವರ್ಷಗಳ ನಂತರ ರಾಕಿಂಗ್ ಸ್ಟಾರ್ ಸ್ಕ್ರೀನ್ ಮೇಲೆ ಬರ್ತಿರೋದ್ರಿಂದ ಅಭಿಮಾನಿಗಳ ನಿರೀಕ್ಷೆ ಆಕಾಶ ಮುಟ್ಟಿದೆ. ಯಶ್ ಹೇಳಿದಂತೆ ಇದು ಕೇವಲ 'ವಿಷುವಲ್ ಟ್ರೀಟ್' ಆಗಿರುತ್ತಾ ಅಥವಾ ಕೆಜಿಎಫ್ ದಾಖಲೆಗಳನ್ನೆಲ್ಲಾ ಧೂಳಿಪಟ ಮಾಡುತ್ತಾ? ಅನ್ನೋದನ್ನ ನೋಡಲು ಇಡೀ ವಿಶ್ವವೇ ಕಾಯುತ್ತಿದೆ.