Mar 27, 2026 Languages : ಕನ್ನಡ | English

ಮೆಗಾ ಫ್ಯಾಮಿಲಿಗೆ ಎಂಟ್ರಿ ಕೊಟ್ಟ ಶಿವರಾಮ್ ಮತ್ತು ಅನ್ವೀರಾ ದೇವಿ: ರಾಮ್ ಚರಣ್ ಮಕ್ಕಳ ಹೆಸರಿನ ಅರ್ಥ ಇಲ್ಲಿದೆ.

ಟಾಲಿವುಡ್‌ನ ‘ಗ್ಲೋಬಲ್ ಸ್ಟಾರ್’ ರಾಮ್ ಚರಣ್ ಮತ್ತು ಪತ್ನಿ ಉಪಾಸನಾ ಕೊನಿಡೆಲ ಅವರ ಮನೆಯಲ್ಲಿ ಈಗ ಹಬ್ಬದ ವಾತಾವರಣ. ಮೆಗಾ ಕುಟುಂಬಕ್ಕೆ ಇತ್ತೀಚೆಗಷ್ಟೇ ಹೊಸ ಅತಿಥಿಗಳಾಗಿ ಆಗಮಿಸಿದ್ದ ಅವಳಿ ಮಕ್ಕಳಿಗೆ (Twins) ಈಗ ಅಧಿಕೃತವಾಗಿ ನಾಮಕರಣ ಮಾಡಲಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ಮಕ್ಕಳ ಹೆಸರುಗಳು ಸಖತ್ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಮೆಗಾ ಮೊಮ್ಮಕ್ಕಳಿಗೆ ಶುಭಾಶಯ ತಿಳಿಸುತ್ತಿದ್ದಾರೆ.

ರಾಮ್ ಚರಣ್-ಉಪಾಸನಾ ದಂಪತಿ ಅವಳಿ ಮಕ್ಕಳಿಗೆ ನಾಮಕರಣ
ರಾಮ್ ಚರಣ್-ಉಪಾಸನಾ ದಂಪತಿ ಅವಳಿ ಮಕ್ಕಳಿಗೆ ನಾಮಕರಣ

ಮೆಗಾಸ್ಟಾರ್ ಚಿರಂಜೀವಿ ಅವರ ನಿವಾಸದಲ್ಲಿ ಅತ್ಯಂತ ಸಾಂಪ್ರದಾಯಿಕವಾಗಿ ಮತ್ತು ಅದ್ದೂರಿಯಾಗಿ ನಾಮಕರಣ ಸಮಾರಂಭ ನಡೆದಿದೆ. ಕುಟುಂಬದ ಆಪ್ತರು ಹಾಗೂ ಗಣ್ಯರ ಸಮ್ಮುಖದಲ್ಲಿ ರಾಮ್ ಚರಣ್ ಮತ್ತು ಉಪಾಸನಾ ತಮ್ಮ ಮುದ್ದಾದ ಗಂಡು ಮತ್ತು ಹೆಣ್ಣು ಮಗುವಿಗೆ ಸುಂದರವಾದ ಹೆಸರನ್ನು ಇಟ್ಟಿದ್ದಾರೆ. ಈ ದಂಪತಿ ತಮ್ಮ ಗಂಡು ಮಗುವಿಗೆ ‘ಶಿವರಾಮ್’ (Shivram) ಎಂದು ಹೆಸರಿಟ್ಟರೆ, ಹೆಣ್ಣು ಮಗುವಿಗೆ ‘ಅನ್ವೀರಾ ದೇವಿ’ (Anveera Devi) ಎಂದು ನಾಮಕರಣ ಮಾಡಿದ್ದಾರೆ.

ಹೆಸರುಗಳ ಹಿಂದಿನ ವಿಶೇಷ ಅರ್ಥ
ಮೆಗಾ ದಂಪತಿ ಆಯ್ಕೆ ಮಾಡಿರುವ ಈ ಹೆಸರುಗಳು ಕೇವಲ ಸುಂದರವಷ್ಟೇ ಅಲ್ಲ, ಆಳವಾದ ಅರ್ಥವನ್ನೂ ಹೊಂದಿವೆ.

ಶಿವರಾಮ್: ಈ ಹೆಸರಿನಲ್ಲಿ ಚಿರಂಜೀವಿ ಅವರ ಮೂಲ ಹೆಸರಾದ ಶಿವಶಂಕರ ವರಪ್ರಸಾದ್ ಅವರ 'ಶಿವ' ಹಾಗೂ ರಾಮ್ ಚರಣ್ ಅವರ ಹೆಸರಿನಲ್ಲಿರುವ 'ರಾಮ್' ಎರಡೂ ಸೇರಿವೆ. ಇದು ತಾತ ಮತ್ತು ತಂದೆಯ ಹೆಸರಿನ ಸುಂದರ ಸಮ್ಮಿಲನ ಎಂದು ಅಭಿಮಾನಿಗಳು ಕೊಂಡಾಡುತ್ತಿದ್ದಾರೆ.

ಅನ್ವೀರಾ ದೇವಿ: ಹೆಣ್ಣು ಮಗುವಿನ ಈ ಹೆಸರು ಶಕ್ತಿ ದೇವತೆಯ ಸಂಕೇತವಾಗಿದೆ. ಇದು ದೈವಿಕ ಶಕ್ತಿ ಮತ್ತು ಜ್ಞಾನವನ್ನು ಸೂಚಿಸುವ ವಿಶಿಷ್ಟ ಹೆಸರಾಗಿದೆ.

2023 ರಲ್ಲಿ ರಾಮ್ ಚರಣ್ ದಂಪತಿಗೆ ‘ಕ್ಲಿನ್ ಕಾರಾ’ (Klin Kaara) ಎಂಬ ಮಗಳು ಜನಿಸಿದ್ದಳು. ಈಗ ಅವಳಿ ಮಕ್ಕಳ ಆಗಮನದಿಂದ ಮೆಗಾ ಕುಟುಂಬದ ಸಂತೋಷ ಇಮ್ಮಡಿಯಾಗಿದೆ. ಕ್ಲಿನ್ ಕಾರಾಗೆ ಈಗ ಒಬ್ಬ ತಮ್ಮ ಮತ್ತು ತಂಗಿಯ ಸಾಥ್ ಸಿಕ್ಕಂತಾಗಿದೆ. ಚಿರಂಜೀವಿ ಅವರು ಕೂಡ ತಮ್ಮ ಮೊಮ್ಮಕ್ಕಳ ಜೊತೆ ಸಮಯ ಕಳೆಯುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳ ಮನ ಗೆಲ್ಲುತ್ತಿವೆ. 

ರಾಮ್ ಚರಣ್ ಅವರ ವೃತ್ತಿಜೀವನವು ಈಗ ಉತ್ತುಂಗದಲ್ಲಿದ್ದು, ವೈಯಕ್ತಿಕ ಜೀವನದಲ್ಲೂ ಈ ಮಕ್ಕಳ ಆಗಮನ ಅವರಿಗೆ ಅದೃಷ್ಟ ತಂದಿದೆ ಎಂದು ಹೇಳಲಾಗುತ್ತಿದೆ. ಸದ್ಯಕ್ಕೆ ಮೆಗಾ ಅಭಿಮಾನಿಗಳು 'ಶಿವರಾಮ್' ಮತ್ತು 'ಅನ್ವೀರಾ' ಎಂಬ ಹೆಸರುಗಳನ್ನು ಹ್ಯಾಶ್‌ಟ್ಯಾಗ್ ಮಾಡುವ ಮೂಲಕ ಟ್ರೆಂಡ್ ಸೃಷ್ಟಿಸುತ್ತಿದ್ದಾರೆ.

Latest News