ಬಿಗ್ ಬಾಸ್ ಕನ್ನಡದ 12ನೇ ಆವೃತ್ತಿ ತನ್ನ ಅಂತಿಮ ಘಟ್ಟಕ್ಕೆ ತಲುಪಿದ್ದು, ಅಭಿಮಾನಿಗಳಲ್ಲಿ ಕುತೂಹಲ ಮತ್ತು ಸಂಭ್ರಮ ಹೆಚ್ಚಾಗಿದೆ. ನಾಳೆ ಮಧ್ಯರಾತ್ರಿ ವಿನ್ನರ್ ಯಾರೆಂದು ಅವರ ಹೆಸರನ್ನು ಘೋಷಿಸಲಾಗಲಿದ್ದು, ಈ ಘಟ್ಟದತ್ತ ಎಲ್ಲರ ಕಣ್ಣುಗಳು ನೆಟ್ಟಿವೆ ಎಂದು ಹೇಳಬಹುದು. ನಿರೂಪಕ ಕಿಚ್ಚ ಸುದೀಪ್ ಅವರು ಫೈನಲ್ ಸಂಚಿಕೆಗೆ ಮುನ್ನ ಸ್ಪರ್ಧಿಗಳಿಗೆ ವಿನ್ನರ್ ಪಡೆದ ವೋಟುಗಳ ಅಂಕಿ ಅಂಶವನ್ನು ತೋರಿಸಿದರು. ಅದರಲ್ಲಿ ವಿನ್ನರ್‌ಗೆ ಸಿಕ್ಕಿರುವ ಮತಗಳ ಸಂಖ್ಯೆ ಬರೋಬ್ಬರಿ 37 ಕೋಟಿಗೂ ಹೆಚ್ಚು.
ಇದು ಬಿಗ್ ಬಾಸ್ ಇತಿಹಾಸದಲ್ಲೇ ದಾಖಲೆ ಮಟ್ಟದ ಮತಗಳಾಗಿದ್ದು, ವಿನ್ನರ್ ಮತ್ತು ರನ್ನರ್ ನಡುವೆ ಅಂತರ ಅತಿ ಕಡಿಮೆ ಎಂದು ಸುದೀಪ್ ಸ್ಪಷ್ಟಪಡಿಸಿದರು. ಕಳೆದ ಆವೃತ್ತಿಯಲ್ಲಿ ಹನುಮಂತ ವಿನ್ನರ್ ಆಗಿ 5 ಕೋಟಿಗೂ ಹೆಚ್ಚು ಮತಗಳನ್ನು ಪಡೆದಿದ್ದರು. ಆದರೆ ಈ ಬಾರಿ ಯಾರೂ ಮುಟ್ಟಲಾಗದಂತ ದಾಖಲೆ ಸೃಷ್ಟಿಯಾಗಿದೆ. ಟಾಪ್ 6ರಲ್ಲಿ ಅಶ್ವಿನಿ ಗೌಡ, ಗಿಲ್ಲಿ ನಟ, ರಘು, ಧನುಷ್, ರಕ್ಷಿತಾ ಮತ್ತು ಕಾವ್ಯ ಇದ್ದಾರೆ. ಇವರಲ್ಲಿ ಇಂದು ಇಬ್ಬರು ಹೊರಬರುವ ಸಾಧ್ಯತೆ ಇದ್ದು, ನಾಳಿನ ಫೈನಲ್ ಸಂಚಿಕೆಯಲ್ಲಿ ಯಾರ್ಯಾರು ಉಳಿಯುತ್ತಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ.
ಊಹಾಪೋಹಗಳ ಪ್ರಕಾರ ಗಿಲ್ಲಿ ನಟ, ರಕ್ಷಿತಾ ಮತ್ತು ಅಶ್ವಿನಿ ಗೌಡ ಟಾಪ್ 3ರಲ್ಲಿ ಇರಬಹುದು ಎಂಬ ನಿರೀಕ್ಷೆ ಇದೆ. ಅಂತಿಮವಾಗಿ ಗಿಲ್ಲಿ ನಟ ಮತ್ತು ರಕ್ಷಿತಾ ನಡುವೆ ನೇರ ಹಣಾಹಣಿ ನಡೆಯುವ ಸಾಧ್ಯತೆಗಳೂ ಹೆಚ್ಚಾಗಿವೆ. ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳ ಪ್ರಚಾರಗಳು ತೀವ್ರಗೊಂಡಿದ್ದು, ಗಿಲ್ಲಿ ನಟನ ಪರ ಅಭಿಮಾನಿಗಳು ಭಾರೀ ಪ್ರಚಾರ ನಡೆಸುತ್ತಿದ್ದಾರೆ. “ಗೆದ್ದು ಬಾ ಗಿಲ್ಲಿ” ಎಂಬ ಘೋಷಣೆಗಳು ಎಲ್ಲೆಡೆ ಮೊಳಗುತ್ತಿವೆ. ಮತ್ತೊಂದೆಡೆ, ಕರಾವಳಿ ಪ್ರದೇಶದ ಅಭಿಮಾನಿಗಳು ರಕ್ಷಿತಾ ಪರವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಮತಗಳನ್ನು ಹಾಕುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ಈ ಬಾರಿ ಬಿಗ್ ಬಾಸ್ ಕನ್ನಡದ ಫೈನಲ್ ಕೇವಲ ಸ್ಪರ್ಧಿಗಳ ನಡುವೆ ನಡೆಯುವ ಹಣಾಹಣಿಯಲ್ಲ, ಅಭಿಮಾನಿಗಳ ಭಾವನೆಗಳ ಹೋರಾಟವೂ ಆಗಿದೆ. ಪ್ರತಿಯೊಬ್ಬ ಸ್ಪರ್ಧಿಯೂ ತಮ್ಮದೇ ಆದ ಶಕ್ತಿ, ವ್ಯಕ್ತಿತ್ವ ಮತ್ತು ಅಭಿಮಾನಿ ನೆಲೆಯನ್ನು ಹೊಂದಿದ್ದು, ಅಂತಿಮ ಘಟ್ಟದಲ್ಲಿ ಯಾರಿಗೆ ಜಯ ಸಿಗುತ್ತದೆ ಎಂಬುದು ನಾಳೆಯ ಘೋಷಣೆಯವರೆಗೂ ರಹಸ್ಯವಾಗಿಯೇ ಉಳಿಯಲಿದೆ. ಒಟ್ಟಿನಲ್ಲಿ, ಬಿಗ್ ಬಾಸ್ ಕನ್ನಡ ಸೀಸನ್ 12 ಫೈನಲ್ ಅಭಿಮಾನಿಗಳಿಗೆ ಭಾರೀ ಉತ್ಸಾಹ, ಕುತೂಹಲ ಮತ್ತು ಸಂಭ್ರಮವನ್ನು ತಂದಿದೆ. ದಾಖಲೆ ಮಟ್ಟದ ಮತಗಳು, ಟಾಪ್ 6ರ ಸ್ಪರ್ಧಿಗಳ ಹೋರಾಟ ಮತ್ತು ಅಭಿಮಾನಿಗಳ ಪ್ರಚಾರ ಎಲ್ಲಾ ಈ ಬಾರಿ ಬಿಗ್ ಬಾಸ್ ಫೈನಲ್ ಅನ್ನು ಇನ್ನಷ್ಟು ವಿಶೇಷವಾಗಿಸಿದೆ. ಇದರ ನಡುವೆ ಎಲ್ಲರೂ ಗಿಲ್ಲಿನೆ ಗೆಲ್ಲೋದು ಅಂತಿದ್ದಾರೆ. ಇನ್ನೂ ಕೆಲ ಬಿಗ್ಬಾಸ್ ವೀಕ್ಷಕರು ಗಿಲ್ಲಿ ರನ್ನರ್ ಅಪ್ ಸ್ಥಾನಕ್ಕೆ ಖುಷಿ ಪಡಬೇಕು, ವಿನ್ನರ್ ಆಗಲ್ಲ ಅಂತಿದ್ದಾರೆ. ಮುಂದೇನಾಗುತ್ತದೆಯೋ ನಾಳೆವರೆಗೂ ಕಾದು ನೋಡಬೇಕು.