Feb 16, 2026 Languages : ಕನ್ನಡ | English

ಗುಜರಾತ್ ವಿರುದ್ಧ ಸೇಡು ತೀರಿಸಿಕೊಳ್ಳಲು ಸಜ್ಜಾದ ದೆಹಲಿ ಕ್ಯಾಪಿಟಲ್ಸ್ - ಇಂದು ಮಹತ್ವದ ಕಾದಾಟ!!

ಮಹಿಳಾ ಪ್ರೀಮಿಯರ್ ಲೀಗ್‌ನ ನಾಲ್ಕನೇ ಆವೃತ್ತಿ ರೋಚಕ ಘಟ್ಟದತ್ತ ಸಾಗುತ್ತಿದೆ. ಮಂಗಳವಾರ ನಡೆಯಲಿರುವ ಮಹತ್ವದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಗುಜರಾತ್ ಜೈಂಟ್ಸ್ ತಂಡಗಳು ಮುಖಾಮುಖಿಯಾಗಲಿವೆ. ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿರುವ ಡೆಲ್ಲಿ, ಸೇಡು ತೀರಿಸಿಕೊಳ್ಳಲು ಸಜ್ಜಾಗಿದೆ. ಈ ಪಂದ್ಯದಲ್ಲಿ ಜಯ ಸಾಧಿಸಿದ ತಂಡ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಲಿದ್ದು, ಮುಂದಿನ ಹಂತಕ್ಕೆ ಹತ್ತಿರವಾಗಲಿದೆ.

ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕಾಗಿ ಡೆಲ್ಲಿ-ಗುಜರಾತ್ ಪೈಪೋಟಿ
ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕಾಗಿ ಡೆಲ್ಲಿ-ಗುಜರಾತ್ ಪೈಪೋಟಿ

ಹೌದು, ಡೆಲ್ಲಿ ಕ್ಯಾಪಿಟಲ್ಸ್ ಈಗಾಗಲೇ ಆರು ಪಂದ್ಯಗಳಲ್ಲಿ ಮೂರು ಜಯ, ಮೂರು ಸೋಲು ಕಂಡು 6 ಅಂಕಗಳನ್ನು ಕಲೆಹಾಕಿದೆ. ಗುಜರಾತ್ ಜೈಂಟ್ಸ್ ಕೂಡ ಇದೇ ಸ್ಥಿತಿಯಲ್ಲಿದ್ದು, ಈ ಪಂದ್ಯದಲ್ಲಿ ಗೆಲುವು ಸಾಧಿಸಿದ ತಂಡ 8 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಬಡ್ತಿ ಪಡೆಯಲಿದೆ. ಲೀಗ್ ಹಂತದಲ್ಲಿ ಇರುವುದು ಎರಡನೇ ಮುಖಾಮುಖಿ. ಮೊದಲ ಕಾದಾಟದಲ್ಲಿ ಗುಜರಾತ್ 20 ಓವರ್‌ಗಳಲ್ಲಿ 209 ರನ್‌ ಕಲೆಹಾಕಿ ಭರ್ಜರಿ ಪ್ರದರ್ಶನ ನೀಡಿತ್ತು. ಗುರಿ ಬೆನ್ನಟ್ಟಿದ ಡೆಲ್ಲಿ 105 ರನ್‌ಗಳಲ್ಲೇ ಸಿಮಿತಗೊಂಡು ಸೋಲು ಕಂಡಿತ್ತು. ಈ ಬಾರಿ ಡೆಲ್ಲಿ ತಂಡ ಸೇಡು ತೀರಿಸಿಕೊಳ್ಳಲು ತಂತ್ರ ರೂಪಿಸಿದೆ ಎನ್ನಲಾಗುತ್ತಿದೆ. 

ಡೆಲ್ಲಿ ತಂಡದಲ್ಲಿ ಸ್ಟಾರ್ ಆಟಗಾರ್ತಿಯರ ದಂಡೇ ಇದೆ. ಆರಂಭಿಕ ಆಟಗಾರ್ತಿ 'ಲಿಜೆಲ್ ಲೀ' ಉತ್ತಮ ಲಯದಲ್ಲಿದ್ದಾರೆ. ನಾಯಕಿ 'ಜೆಮಿಮಾ ರೊಡ್ರಿಗಸ್' ಹಾಗೂ ಶಫಾಲಿ ವರ್ಮಾ ಎದುರಾಳಿಗಳಿಗೆ ಸವಾಲು ಹಾಕಲು ಸಜ್ಜಾಗಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಗರಿಷ್ಠ ವಿಕೆಟ್ ಪಡೆದಿರುವ ನಂದಿನಿ ಶರ್ಮಾ ತಂಡಕ್ಕೆ ಬಲ ನೀಡಲಿದ್ದಾರೆ.

ಗುಜರಾತ್ ಜೈಂಟ್ಸ್ ತಂಡ ವಿದೇಶಿ ಆಟಗಾರರ ಮೇಲೆ ಹೆಚ್ಚಿನ ಅವಲಂಬನೆ ಹೊಂದಿದೆ. ಸೋಫಿ ಡಿವೈನ್ ಹಾಗೂ ನಾಯಕಿ ಆಶ್ಲೇ ಗಾರ್ಡ್ನರ್ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಕಮಾಲ್ ಪ್ರದರ್ಶನ ನೀಡಬೇಕಿದೆ. ಉಳಿದಂತೆ ಬೌಲರ್‌ಗಳು ಶಿಸ್ತುಬದ್ಧ ದಾಳಿ ನಡೆಸುವುದು ತಂಡದ ಗೆಲುವಿಗೆ ಅಗತ್ಯ.

ಪಿಚ್ ವರದಿ ಪ್ರಕಾರ, ವಡೋದರಾದ ಕೋಟಂಬಿ ಕ್ರೀಡಾಂಗಣ ನಿಧಾನಗತಿಯ ಪಿಚ್ ಆಗಿದ್ದು, ಬ್ಯಾಟರ್‌ಗಳಿಗೆ ಸವಾಲು ನೀಡಲಿದೆ. ಎರಡನೇ ಇನಿಂಗ್ಸ್ ವೇಳೆ ಇಬ್ಬನಿ ಬೀಳುವ ಸಾಧ್ಯತೆ ಇರುವುದರಿಂದ ಟಾಸ್ ಮಹತ್ವದ ಪಾತ್ರ ವಹಿಸಲಿದೆ.

ಗುಜರಾತ್ ಜೈಂಟ್ಸ್ ಸಂಭಾವ್ಯ ತಂಡದಲ್ಲಿ ಬೆತ್ ಮೂನಿ, ಸೋಫಿ ಡಿವೈನ್, ಡ್ಯಾನಿ ವ್ಯಾಟ್-ಹೋಡ್ಜ್, ಅನುಷ್ಕಾ ಶರ್ಮಾ, ಆಶ್ಲೇ ಗಾರ್ಡ್ನರ್ (ನಾಯಕಿ), ಕನಿಕಾ ಅಹುಜಾ, ಭಾರತಿ ಫುಲ್ಮಾಲಿ, ಕಾಶ್ವಿ ಗೌತಮ್, ಹ್ಯಾಪಿ ಕುಮಾರಿ, ರೇಣುಕಾ ಸಿಂಗ್ ಹಾಗೂ ರಾಜೇಶ್ವರಿ ಗಾಯಕ್ವಾಡ್ ಇದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಶಫಾಲಿ ವರ್ಮಾ, ಲಿಜೆಲ್ ಲೀ, ಜೆಮಿಮಾ ರೊಡ್ರಿಗಸ್ (ನಾಯಕಿ), ಲಾರಾ ವೊಲ್ವಾರ್ಡ್, ಮರಿಜಾನ್ ಕಪ್, ನಿಕಿ ಪ್ರಸಾದ್, ಚಿನೆಲ್ ಹೆನ್ರಿ, ಮಿನ್ನು ಮಣಿ, ಸ್ನೇಹ್ ರಾಣಾ, ಶ್ರೀ ಚರಣಿ ಹಾಗೂ ನಂದಿನಿ ಇದ್ದಾರೆ.

ಈ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ವೀಕ್ಷಿಸಬಹುದಾಗಿದೆ. ಆನ್‌ಲೈನ್‌ನಲ್ಲಿ ಜಿಯೋಹಾಟ್‌ಸ್ಟಾರ್‌ನಲ್ಲಿ ಲೈವ್ ಪ್ರಸಾರ ಲಭ್ಯ. ಪಂದ್ಯ ಸಂಜೆ 7.30ಕ್ಕೆ ಆರಂಭವಾಗಲಿದ್ದು, ಟಾಸ್ ಪಂದ್ಯಕ್ಕೂ ಅರ್ಧಗಂಟೆ ಮುಂಚಿತವಾಗಿ ನಡೆಯಲಿದೆ. 

Latest News