ಐಪಿಎಲ್ ಅಂದ್ರೆನೇ ಅಲ್ಲಿ ದಾಖಲೆಗಳ ಸುರಿಮಳೆ. ಆದ್ರೆ ಕಳೆದ 13 ವರ್ಷಗಳಿಂದ ಒಬ್ಬನೇ ಒಬ್ಬ ಕಿಲಾಡಿ ಬರೆದ ದಾಖಲೆಯನ್ನ ಮುರಿಯೋಕೆ ಯಾರ ಕೈಯಲ್ಲೂ ಆಗಿಲ್ಲ. ಹೌದು, ನಾವು ಹೇಳ್ತಿರೋದು 'ಯೂನಿವರ್ಸ್ ಬಾಸ್' ಕ್ರಿಸ್ ಗೇಲ್ ಬಗ್ಗೆ. 2013ರಲ್ಲಿ ಪುಣೆ ವಾರಿಯರ್ಸ್ ವಿರುದ್ಧ ಗೇಲ್ ಸಿಡಿಸಿದ ಆ 175 ರನ್‌ಗಳ ಅಬ್ಬರ ಇವತ್ತಿಗೂ ಐಪಿಎಲ್ ಇತಿಹಾಸದ ಮೈಲಿಗಲ್ಲು. ಆದ್ರೆ ಇವಾಗ ಆ ದಾಖಲೆಯ ಸಿಂಹಾಸನ ಅಲುಗಾಡ್ತಿದೆ. ಅದಕ್ಕೆ ಕಾರಣ ಕೇವಲ 15 ವರ್ಷದ ಪೋರ ವೈಭವ್ ಸೂರ್ಯವಂಶಿ.
ಐಪಿಎಲ್ ಅಖಾಡಕ್ಕೆ ಎಂಟ್ರಿ ಕೊಟ್ಟಿರೋ ಈ ಪುಟ್ಟ ಹುಡುಗ, ಗೇಲ್ ದಾಖಲೆ ಮಾತ್ರವಲ್ಲ, ಟಿ20 ಕ್ರಿಕೆಟ್‌ನಲ್ಲಿ ಯಾರೂ ಮಾಡದ 'ದ್ವಿಶತಕ'ದ ದಾಖಲೆ ಬರೀತಾನೆ ಅಂತ ಅವರ ಕೋಚ್ ಭವಿಷ್ಯ ನುಡಿದಿದ್ದಾರೆ. ಇದು ಕೇಳೋಕೆ ಅಸಾಧ್ಯ ಅನಿಸಿದ್ರೂ, ವೈಭವ್ ಆಟದ ಶೈಲಿ ನೋಡಿದ್ರೆ ಏನೂ ಬೇಕಾದ್ರೂ ಆಗಬಹುದು ಅನ್ನೋದು ಕ್ರಿಕೆಟ್ ಪ್ರೇಮಿಗಳ ಮಾತು.
ಇತ್ತೀಚೆಗೆ ನಡೆದ 'ನಮನ್ ಪ್ರಶಸ್ತಿ' ಸಮಾರಂಭದಲ್ಲಿ ವೈಭವ್ ಸೂರ್ಯವಂಶಿಗೆ ಈ ದಾಖಲೆಯ ಬಗ್ಗೆ ಪ್ರಶ್ನೆ ಕೇಳಲಾಗಿತ್ತು. ಅದಕ್ಕೆ ಅವರು ತುಂಬಾ ಕೂಲ್ ಆಗಿ ಉತ್ತರಿಸಿದ್ದಾರೆ. "ನನಗೆ ಕ್ರಿಸ್ ಗೇಲ್ ಅವರ ಆ 175 ರನ್ ದಾಖಲೆಯ ಬಗ್ಗೆ ಅಷ್ಟೊಂದು ಡೀಟೇಲ್ಸ್ ಗೊತ್ತಿಲ್ಲ. ಆದ್ರೆ ನಾನು ಮೈದಾನಕ್ಕೆ ಇಳಿದ್ರೆ ಸಾಕು, ತಂಡಕ್ಕೆ ದೊಡ್ಡ ಮೊತ್ತ ತಂದುಕೊಡಬೇಕು ಅನ್ನೋದೇ ನನ್ನ ಗುರಿ," ಅಂತ ಆತ್ಮವಿಶ್ವಾಸದಿಂದ ಹೇಳಿದ್ದಾರೆ. ಅಂದ್ರೆ, ಈ ಹುಡುಗನಿಗೆ ದಾಖಲೆಗಳಿಗಿಂತ ರನ್ ಹೊಡೆಯೋದರ ಮೇಲೆಯೇ ಕಣ್ಣು ಜಾಸ್ತಿ ಇದೆ.
ವೈಭವ್ ಅವರ ಮಾತಿಗೆ ಇನ್ನಷ್ಟು ಪುಷ್ಠಿ ನೀಡುವಂತೆ ಅವರ ಕೋಚ್ ಮನೀಶ್ ಓಜಾ ಒಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ. 'ವೈಭವ್ ಕೇವಲ ಕ್ರಿಸ್ ಗೇಲ್ ಅವರ 175 ರನ್ ದಾಖಲೆಯನ್ನ ಮುರಿಯೋದು ಅಷ್ಟೇ ಅಲ್ಲ, ಐಪಿಎಲ್ ಇತಿಹಾಸದಲ್ಲೇ ಮೊದಲ ಬಾರಿಗೆ 200 ರನ್ ಹೊಡೆದು ಹೊಸ ಹಿಸ್ಟರಿ ಕ್ರಿಯೇಟ್ ಮಾಡ್ತಾನೆ,' ಅಂತ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈ ಋತುವಿನಲ್ಲಿ ವೈಭವ್ ಫುಲ್ ಫಾರ್ಮ್‌ನಲ್ಲಿದ್ದಾರೆ. ಅವರ ಬ್ಯಾಟಿಂಗ್ ಸ್ಟೈಲ್ ನೋಡಿದ್ರೆ ಯಾವುದೇ ಒಬ್ಬ ಸೀನಿಯರ್ ಪ್ಲೇಯರ್‌ಗೂ ಕಮ್ಮಿ ಇಲ್ಲದ ಹಾಗಿದೆ. ಹೀಗಾಗಿಯೇ ಕೋಚ್ ಅವರು ಈ 2026ರ ಐಪಿಎಲ್ ಆವೃತ್ತಿಯಲ್ಲಿ ವೈಭವ್ ಯಾವುದಾದ್ರೂ ಒಂದು ಮ್ಯಾಚ್‌ನಲ್ಲಿ 200 ರನ್ ಗಡಿ ದಾಟೋದು ಪಕ್ಕಾ ಅಂತ ಹೇಳ್ತಿದ್ದಾರೆ.
ಯೋಚನೆ ಮಾಡಿ, ನಾವು 15 ವರ್ಷ ಇದ್ದಾಗ ಸ್ಕೂಲ್ ಬ್ಯಾಗ್ ಹೊತ್ತುಕೊಂಡು ಓಡಾಡ್ತಿದ್ವಿ. ಆದ್ರೆ ವೈಭವ್ ಈ ಚಿಕ್ಕ ವಯಸ್ಸಿನಲ್ಲೇ ಐಪಿಎಲ್‌ನಂತಹ ದೊಡ್ಡ ಸ್ಟೇಜ್‌ನಲ್ಲಿ ಆಡೋಕೆ ರೆಡಿಯಾಗಿದ್ದಾರೆ. ಅವರು ಬ್ಯಾಟಿಂಗ್ ಮಾಡೋ ರೀತಿ ಹಿರಿಯ ಆಟಗಾರರನ್ನೂ ಬೆರಗುಗೊಳಿಸಿದೆ. ಅವರಲ್ಲಿರೋ ಆ ವೇಗ, ಬೌಲರ್‌ಗಳನ್ನ ಎದುರಿಸೋ ಧೈರ್ಯ ನೋಡಿದ್ರೆ ಗೇಲ್ ದಾಖಲೆ ಮುರಿಯೋದು ದೊಡ್ಡ ವಿಷಯವೇ ಅಲ್ಲ ಅನಿಸುತ್ತೆ. ಟಿ20 ಕ್ರಿಕೆಟ್‌ನಲ್ಲಿ ಇದುವರೆಗೂ ಯಾರೂ 200 ರನ್ ಹೊಡೆದಿಲ್ಲ. ಒಂದ್ವೇಳೆ ಈ 15 ವರ್ಷದ ಹುಡುಗ ಆ ಮ್ಯಾಜಿಕ್ ಮಾಡಿದ್ರೆ, ಅದು ಕ್ರಿಕೆಟ್ ಲೋಕದ ಎಂಟನೇ ಅದ್ಭುತವೇ ಸರಿ.
ಕ್ರಿಕೆಟ್ ಅಂದ್ರೆನೇ ಅನಿಶ್ಚಿತತೆ. ಇಲ್ಲಿ ಯಾವಾಗ ಬೇಕಾದ್ರೂ ಏನೂ ಆಗಬಹುದು. ಕ್ರಿಸ್ ಗೇಲ್ ಅವರ ಆ ಅಸಾಧ್ಯದ ದಾಖಲೆಯನ್ನು ಈ ವೈಭವ್ ಸೂರ್ಯವಂಶಿ ಪುಡಿಪುಡಿ ಮಾಡ್ತಾರಾ? ಆ 200 ರನ್‌ಗಳ ಮಿಂಚಿನ ಆಟವನ್ನು ನಾವು ಈ ಬಾರಿ ನೋಡ್ತೀವಾ? ಅನ್ನೋದಕ್ಕೆ ನಾವು ಕಾಯಲೇಬೇಕು.