ನಮಗೆ 5 ಬಾರಿ ಚಾಂಪಿಯನ್ ಅನ್ನೋ ಹಮ್ಮುಗೆಯಿಲ್ಲ - ಸಿಎಸ್‌ಕೆ ಡ್ರೆಸ್ಸಿಂಗ್ ರೂಮ್ ಗುಟ್ಟು ಬಿಚ್ಚಿಟ್ಟ ಸಂಜು ಸ್ಯಾಮ್ಸನ್!!

ಐಪಿಎಲ್ 2026ರ ಹಂಗಾಮಿಗೆ ಕ್ಷಣಗಣನೆ ಶುರುವಾಗಿದೆ. ಈ ಬಾರಿ ಎಲ್ಲರ ಕಣ್ಣು ಇರೋದು ಸಂಜು ಸ್ಯಾಮ್ಸನ್ ಮೇಲೆ. ಯಾಕಂದ್ರೆ, ಇಷ್ಟು ವರ್ಷ ರಾಜಸ್ಥಾನ ರಾಯಲ್ಸ್ ತಂಡದ ನಾಯಕನಾಗಿ ಮಿಂಚಿದ್ದ ಸಂಜು, ಈಗ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ಹಳದಿ ಜರ್ಸಿ ತೊಟ್ಟಿದ್ದಾರೆ. ರಾಜಸ್ಥಾನ ವಿರುದ್ಧದ ಮೊದಲ ಪಂದ್ಯಕ್ಕೂ ಮುನ್ನ ಸಂಜು, ಸಿಎಸ್‌ಕೆ ತಂಡದ ಡ್ರೆಸ್ಸಿಂಗ್ ರೂಮ್ ವಾತಾವರಣ ಹೇಗಿದೆ ಅನ್ನೋದರ ಬಗ್ಗೆ ಅನ್-ಫಿಲ್ಟರ್ಡ್ ಆಗಿ ಮಾತನಾಡಿದ್ದಾರೆ.

ನಮಗೆ 5 ಬಾರಿ ಚಾಂಪಿಯನ್ ಅನ್ನೋ ಹಮ್ಮುಗೆಯಿಲ್ಲ -  ಸಿಎಸ್‌ಕೆ ಡ್ರೆಸ್ಸಿಂಗ್ ರೂಮ್ ಗುಟ್ಟು ಬಿಚ್ಚಿಟ್ಟ ಸಂಜು ಸ್ಯಾಮ್ಸನ್!! | Photo Credit: https://x.com/ChennaiIPL
ನಮಗೆ 5 ಬಾರಿ ಚಾಂಪಿಯನ್ ಅನ್ನೋ ಹಮ್ಮುಗೆಯಿಲ್ಲ - ಸಿಎಸ್‌ಕೆ ಡ್ರೆಸ್ಸಿಂಗ್ ರೂಮ್ ಗುಟ್ಟು ಬಿಚ್ಚಿಟ್ಟ ಸಂಜು ಸ್ಯಾಮ್ಸನ್!! | Photo Credit: https://x.com/ChennaiIPL

ಸಿಎಸ್‌ಕೆ ಫ್ರಾಂಚೈಸಿ ಹಂಚಿಕೊಂಡಿರುವ ವಿಡಿಯೋದಲ್ಲಿ ಮಾತನಾಡಿದ ಸಂಜು, "ಒಂದು ಚಾಂಪಿಯನ್ ತಂಡದ ಭಾಗವಾಗಿರೋದು ತುಂಬಾ ಖುಷಿ ತಂದಿದೆ. ಇಲ್ಲಿ ಕಲಿಯೋದು ಮತ್ತು ಗಮನಿಸೋದು ತುಂಬಾ ಇದೆ. ನಾನು ವೈಯಕ್ತಿಕವಾಗಿ ತುಂಬಾ ಶಾಂತ ಸ್ವಭಾವದವನು, ಸಿಎಸ್‌ಕೆ ತಂಡದ ಸಂಸ್ಕೃತಿಯೂ ಹಾಗೆಯೇ ಇದೆ. ನಾವೆಲ್ಲರೂ ತುಂಬಾ ಕೂಲ್ ಆಗಿ ಇರುತ್ತೇವೆ, ಆದರೆ ಮೈದಾನಕ್ಕಿಳಿದು ಬಿಸಿನೆಸ್ (ಆಟ) ಶುರು ಮಾಡಿದ್ರೆ ಸಾಕು, ನಮ್ಮ ನೂರಕ್ಕೆ ನೂರರಷ್ಟು ಶ್ರಮ ಹಾಕುತ್ತೇವೆ," ಎಂದು ಹೇಳಿದ್ದಾರೆ.

ಸಂಜು ಅವರಿಗೆ ಸಿಎಸ್‌ಕೆ ತಂಡದಲ್ಲಿ ಅತಿ ಹೆಚ್ಚು ಇಷ್ಟವಾಗಿದ್ದು ಅಲ್ಲಿನ ಸರಳತೆ. ಸಿಎಸ್‌ಕೆ ತಂಡ ಐದು ಬಾರಿ ಐಪಿಎಲ್ ಟ್ರೋಫಿ ಗೆದ್ದಿರಬಹುದು, ಆದರೆ ಡ್ರೆಸ್ಸಿಂಗ್ ರೂಮ್‌ನಲ್ಲಿ ಯಾರೂ ಕೂಡ 'ನಾವು 5 ಬಾರಿ ಚಾಂಪಿಯನ್ಸ್' ಅನ್ನೋ ಹಮ್ಮುಗೆಯಿಂದ ಓಡಾಡುವುದಿಲ್ಲವಂತೆ. "ಫ್ರಾಂಚೈಸಿಯ ಇತಿಹಾಸ ಮತ್ತು ಸಾಧನೆಯ ಭಾರ ಎಲ್ಲೂ ಕಾಣಿಸುವುದಿಲ್ಲ. ಬದಲಾಗಿ ಎಲ್ಲರೂ ತುಂಬಾ ಕಾಮ್ ಆಗಿ, ತಮ್ಮ ಕೆಲಸದ ಮೇಲೆ ಗಮನ ಹರಿಸುತ್ತಾರೆ. ಈ ಗುಣ ನನಗೂ ತುಂಬಾ ಹತ್ತಿರವಾದುದು," ಎಂದು ಸಂಜು ಅಭಿಪ್ರಾಯಪಟ್ಟಿದ್ದಾರೆ.

ವಿಶೇಷ ಅಂದ್ರೆ, ಸಂಜು ಸ್ಯಾಮ್ಸನ್ ಈ ಸೀಸನ್‌ನ ಮೊದಲ ಪಂದ್ಯವನ್ನೇ ತಮ್ಮ ಹಳೆಯ ತಂಡವಾದ ರಾಜಸ್ಥಾನ ರಾಯಲ್ಸ್ ವಿರುದ್ಧ ಆಡಬೇಕಿದೆ. ಹದಿಹರೆಯದಿಂದಲೂ ಬೆಳೆದ ತಂಡವನ್ನು ಬಿಟ್ಟು ಹೊಸ ತಂಡಕ್ಕೆ ಹೊಂದಿಕೊಳ್ಳುವುದು ಸವಾಲೇ ಸರಿ. ಆದರೆ, ಸಂಜು ಈಗಾಗಲೇ ಸಿಎಸ್‌ಕೆ ತಂಡದ 'ಕಾಮ್ ಅಂಡ್ ಕಂಪೋಸ್ಡ್' ಪರಿಸರಕ್ಕೆ ಅಡ್ಜಸ್ಟ್ ಆಗಿದ್ದಾರೆ ಅನ್ನೋದು ಅವರ ಮಾತಿನಲ್ಲೇ ಗೊತ್ತಾಗುತ್ತಿದೆ.

ಧೋನಿ ಅಲಭ್ಯತೆಯ ನಡುವೆ, ಸಂಜು ಸ್ಯಾಮ್ಸನ್ ಅವರಂತಹ ಅನುಭವವಿರುವ ಆಟಗಾರ ತಂಡಕ್ಕೆ ಸೇರ್ಪಡೆಯಾಗಿರುವುದು ಸಿಎಸ್‌ಕೆ ಬಲವನ್ನು ಹೆಚ್ಚಿಸಿದೆ. ಗುವಾಹಟಿಯಲ್ಲಿ ನಡೆಯಲಿರುವ ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ ಸಂಜು ಯಾವ ರೀತಿ ಅಬ್ಬರಿಸಲಿದ್ದಾರೆ ಅನ್ನೋದು ಈಗ ಕುತೂಹಲದ ವಿಷಯ. ಸಂಜು ಅವರ ಈ ಹೊಸ ಇನ್ನಿಂಗ್ಸ್ ಮತ್ತು ಅವರ ಶಾಂತ ಸ್ವಭಾವದ ಆಟ ಸಿಎಸ್‌ಕೆಗೆ ಮತ್ತೊಂದು ಟ್ರೋಫಿ ತಂದುಕೊಡಲಿ ಅನ್ನೋದೇ ಅಭಿಮಾನಿಗಳ ಆಶಯ.

Latest News