ಐಪಿಎಲ್ ಹಬ್ಬ ಶುರುವಾಗೋಕೆ ಇನ್ನು ಕೇವಲ 6 ದಿನ ಬಾಕಿ ಇದೆ. ಎಲ್ಲಾ ಟೀಮ್‌ಗಳು ಫುಲ್ ಜೋಶ್‌ನಲ್ಲಿ ಪ್ರಾಕ್ಟೀಸ್ ಮಾಡ್ತಿವೆ. ಆದ್ರೆ, ಮುಂಬೈ ಇಂಡಿಯನ್ಸ್ ಅಭಿಮಾನಿಗಳಿಗೆ ಮಾತ್ರ ಒಂದು ಸಣ್ಣ ಆತಂಕ ಶುರುವಾಗಿದೆ. ಯಾಕಂದ್ರೆ, ಆ ತಂಡದ ಮೇನ್ ಅಸ್ತ್ರ ಜಸ್ಪ್ರೀತ್ ಬುಮ್ರಾ ಇನ್ನು ಮುಂಬೈ ಕ್ಯಾಂಪ್ ಸೇರಿಕೊಂಡಿಲ್ಲ.
ಇತ್ತೀಚೆಗಷ್ಟೇ ಮುಗಿದ 2026ರ ಟಿ20 ವಿಶ್ವಕಪ್‌ನಲ್ಲಿ ಬುಮ್ರಾ ಬೆಂಕಿ ಪರ್ಫಾರ್ಮೆನ್ಸ್ ಕೊಟ್ಟಿದ್ರು. ಸೆಮಿಫೈನಲ್ ಮತ್ತು ಫೈನಲ್‌ನಲ್ಲಿ ಎದುರಾಳಿಗಳನ್ನ ಕಟ್ಟಿಹಾಕಿ ಭಾರತಕ್ಕೆ ಜಯ ತಂದುಕೊಟ್ಟಿದ್ದ ಇವರನ್ನ ನೋಡಿದ್ರೆ, ಈ ಬಾರಿಯ ಐಪಿಎಲ್‌ನಲ್ಲೂ ಅದೇ ಮ್ಯಾಜಿಕ್ ಮಾಡ್ತಾರೆ ಅನ್ನೋ ನಂಬಿಕೆ ಇತ್ತು. ಆದ್ರೆ, ವಿಶ್ವಕಪ್ ಮುಗಿದು 2 ವಾರ ಆದ್ರೂ ಬುಮ್ರಾ ಇನ್ನು ಮುಂಬೈಗೆ ಹೋಗಿಲ್ಲ. ಬದಲಾಗಿ, ಅವರು ಈಗ ನಮ್ಮ ಬೆಂಗಳೂರಿನಲ್ಲಿರೋ ಬಿಸಿಸಿಐ 'ಸೆಂಟರ್ ಆಫ್ ಎಕ್ಸಲೆನ್ಸ್' ನಲ್ಲಿದ್ದಾರೆ ಅನ್ನೋ ಸುದ್ದಿ ಸಿಕ್ಕಿದೆ.
ಬುಮ್ರಾ ಬೆಂಗಳೂರಿಗೆ ಬಂದಿರೋದು ಯಾಕೆ ಅನ್ನೋದು ಇನ್ನು ಪಕ್ಕಾ ಆಗಿಲ್ಲ. ಟಿ20 ವಿಶ್ವಕಪ್ ಸಮಯದಲ್ಲಿ ಅವರು ಫುಲ್ ಫಿಟ್ ಆಗಿಯೇ ಕಂಡಿದ್ರು. ಆದ್ರೆ, ಬುಮ್ರಾ ಅಂದ್ರೆ ಅದು ಬಿಸಿಸಿಐ ಪಾಲಿನ ದೊಡ್ಡ ಆಸ್ತಿ. ಹಾಗಾಗಿ, ಐಪಿಎಲ್‌ನಂತಹ ದೊಡ್ಡ ಟೂರ್ನಿಗೂ ಮುನ್ನ ಅವರಿಗೆ ಯಾವುದೇ ತೊಂದರೆ ಆಗಬಾರದು ಅಂತ ಬಿಸಿಸಿಐ ಮುನ್ನೆಚ್ಚರಿಕೆ ಕ್ರಮವಾಗಿ ಅವರ ಫಿಟ್ನೆಸ್ ಚೆಕ್ ಮಾಡ್ತಿರಬಹುದು ಎನ್ನಲಾಗುತ್ತಿದೆ. ಕಳೆದ ಬಾರಿ ಕೂಡ ಅವರಿಗೆ ಬೆನ್ನುನೋವಿನ ಸಮಸ್ಯೆ ಇತ್ತು, ಹಾಗಾಗಿ ಈ ಬಾರಿ ರಿಿಸ್ಕ್ ತಗೊಳ್ಳೋಕೆ ಯಾರಿಗೂ ಇಷ್ಟವಿಲ್ಲ.
ಕೆಲವು ದಿನಗಳ ಹಿಂದೆ ಮುಂಬೈ ಇಂಡಿಯನ್ಸ್ ಕೋಚ್ ಮಹೇಲಾ ಜಯವರ್ಧನೆ ಅವರು, "ಟಿ20 ವಿಶ್ವಕಪ್ ಆಡಿದ ನಮ್ಮ ಆಟಗಾರರಿಗೆ ಸ್ವಲ್ಪ ಬ್ರೇಕ್ ಕೊಟ್ಟಿದ್ದೀವಿ. ಮಾರ್ಚ್ 22ರ ಹೊತ್ತಿಗೆ ಅವರೆಲ್ಲಾ ತಂಡವನ್ನ ಸೇರ್ತಾರೆ" ಅಂತ ಹೇಳಿದ್ರು. ಆದ್ರೆ ಮಾರ್ಚ್ 22 ದಾಟಿದ್ರೂ ಬುಮ್ರಾ ಕಾಣಿಸಿಕೊಂಡಿಲ್ಲ. ಇದು ಮುಂಬೈ ಇಂಡಿಯನ್ಸ್ ಮ್ಯಾನೇಜ್‌ಮೆಂಟ್‌ಗೆ ಸ್ವಲ್ಪ ತಲೆನೋವು ತಂದಿರೋದಂತೂ ನಿಜ.
ಮುಂಬೈ ಇಂಡಿಯನ್ಸ್ ಈ ಬಾರಿ 6ನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ. ವಾಂಖೆಡೆ ಸ್ಟೇಡಿಯಂನಲ್ಲಿ ಕೆಕೆಆರ್ ವಿರುದ್ಧ ಮೊದಲ ಪಂದ್ಯ ಆಡೋಕೆ ರೆಡಿಯಾಗ್ತಿದೆ. ಬುಮ್ರಾ ತಂಡದಲ್ಲಿದ್ರೆ ಆ ಬೌಲಿಂಗ್ ಲೈನ್‌ಅಪ್‌ಗೆ ಬರೋ ಶಕ್ತಿಯೇ ಬೇರೆ. 2025ರ ಸೀಸನ್‌ನಲ್ಲಿ ಬುಮ್ರಾ ಮೊದಲ 4 ಪಂದ್ಯ ಮಿಸ್ ಮಾಡ್ಕೊಂಡಿದ್ರು. ಈ ಬಾರಿ ಹಾಗಾಗಬಾರದು ಅನ್ನೋದು ಅಭಿಮಾನಿಗಳ ಪ್ರಾರ್ಥನೆ.
ಬುಮ್ರಾ ಅವರು ಕೇವಲ ಮುಂಬೈಗಷ್ಟೇ ಅಲ್ಲ, ಭಾರತ ತಂಡಕ್ಕೂ ಬಹಳ ಮುಖ್ಯ. ಬೆಂಗಳೂರಿನಲ್ಲಿ ಇರೋದು ಕೇವಲ ಮುನ್ನೆಚ್ಚರಿಕೆಗಾಗಿಯೇ ಆಗಿರಲಿ ಅಂತ ಆಶಿಸೋಣ. ಒಂದು ವೇಳೆ ಎಲ್ಲವೂ ಪ್ಲಾನ್ ಪ್ರಕಾರ ನಡೆದ್ರೆ, ಇನ್ನು 2-3 ದಿನಗಳಲ್ಲಿ ಬುಮ್ರಾ ಮುಂಬೈ ಹಾದಿ ಹಿಡಿಯಲಿದ್ದಾರೆ. ಯಾರ್ಕರ್ ಕಿಂಗ್ ಪ್ಲೇಯಿಂಗ್ ಲೆವೆನ್‌ನಲ್ಲಿ ಇರ್ತಾರಾ ಇಲ್ವಾ ಅನ್ನೋದೇ ಈಗ ಸದ್ಯದ ಮಿಲಿಯನ್ ಡಾಲರ್ ಪ್ರಶ್ನೆ.