ಐಪಿಎಲ್ 2026ರ ಮೂರನೇ ಪಂದ್ಯಕ್ಕೆ ಅಸ್ಸಾಂನ ಗುವಾಹಟಿ ಸಜ್ಜಾಗಿದೆ. ಈ ಬಾರಿ ಕೇವಲ ಪಂದ್ಯವಷ್ಟೇ ಅಲ್ಲ, ಭಾವನೆಗಳ ಆಟವೂ ಜೋರಾಗಿದೆ. ಯಾಕಂದ್ರೆ, ಇಷ್ಟು ವರ್ಷ ಸಿಎಸ್‌ಕೆಯಲ್ಲಿದ್ದ ರವೀಂದ್ರ ಜಡೇಜಾ ಈಗ ರಾಜಸ್ಥಾನ ರಾಯಲ್ಸ್ ಜರ್ಸಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತ ರಾಜಸ್ಥಾನದ ಕ್ಯಾಪ್ಟನ್ ಆಗಿದ್ದ ಸಂಜು ಸ್ಯಾಮ್ಸನ್ ಈಗ ಸಿಎಸ್‌ಕೆ ಪಾಳಯ ಸೇರಿಕೊಂಡಿದ್ದಾರೆ. ಈ ಅದಲು-ಬದಲು ಈ ಬಾರಿಯ ಪಂದ್ಯಕ್ಕೆ ಸಖತ್ ಕಿಕ್ ನೀಡಿದೆ.
ಪಿಚ್ ರಿಪೋರ್ಟ್ ಹೇಗಿದೆ?
ಗುವಾಹಟಿ ಬರ್ಸಾಪಾರ ಕ್ರಿಕೆಟ್ ಸ್ಟೇಡಿಯಂ ಬ್ಯಾಟರ್‌ಗಳ ಸ್ವರ್ಗ ಅಂತಾನೇ ಫೇಮಸ್. ಇಲ್ಲಿನ ಪಿಚ್‌ನಲ್ಲಿ ಚೆಂಡು ಬ್ಯಾಟಿಗೆ ತುಂಬಾ ಚೆನ್ನಾಗಿ ಬರುತ್ತದೆ, ಹಾಗಾಗಿ ಬೌಂಡರಿಗಳ ಮಳೆ ಸುರಿಯುವುದು ಗ್ಯಾರಂಟಿ. ಆದರೆ ಸಂಜೆಯ ಪಂದ್ಯವಾಗಿರುವುದರಿಂದ 'ಡ್ಯೂ ಫ್ಯಾಕ್ಟರ್' (ಇಬ್ಬನಿ) ದೊಡ್ಡ ಪಾತ್ರ ವಹಿಸಲಿದೆ. ಎರಡನೇ ಇನ್ನಿಂಗ್ಸ್‌ನಲ್ಲಿ ಬೌಲಿಂಗ್ ಮಾಡುವುದು ಕಷ್ಟವಾಗುವುದರಿಂದ, ಟಾಸ್ ಗೆದ್ದ ನಾಯಕ ಕಣ್ಣು ಮುಚ್ಚಿ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಳ್ಳುವುದು ಖಚಿತ. ಸ್ಕೋರ್ 180 ದಾಟಿದರೂ ಇಲ್ಲಿ ಚೇಸಿಂಗ್ ಮಾಡುವುದು ಸುಲಭ.
ರಾಜಸ್ಥಾನ ರಾಯಲ್ಸ್ (RR) ತಂಡದ ಸಮಾಚಾರ
ಹೋಮ್ ಬಾಯ್ ರಿಯಾನ್ ಪರಾಗ್ ಈ ಬಾರಿ ರಾಜಸ್ಥಾನ ರಾಯಲ್ಸ್ ತಂಡವನ್ನು ಮುನ್ನಡೆಸುತ್ತಿರುವುದು ವಿಶೇಷ. ಗುವಾಹಟಿ ಅಭಿಮಾನಿಗಳ ಪೂರ್ಣ ಬೆಂಬಲ ಈ ಲೋಕಲ್ ಹೀರೋಗೆ ಇರಲಿದೆ. ಯಶಸ್ವಿ ಜೈಸ್ವಾಲ್ ಮತ್ತು ಹೊಸ ಪ್ರತಿಭೆ ವೈಭವ್ ಸೂರ್ಯವಂಶಿ ಅವರ ಮೇಲೆ ಓಪನಿಂಗ್ ಜವಾಬ್ದಾರಿ ಇದೆ. ಆಲ್‌ರೌಂಡರ್ ಆಗಿ ರವೀಂದ್ರ ಜಡೇಜಾ ಅವರ ಸೇರ್ಪಡೆ ತಂಡಕ್ಕೆ ದೊಡ್ಡ ಬಲ ತಂದಿದೆ. ಬೌಲಿಂಗ್‌ನಲ್ಲಿ ಜೋಫ್ರಾ ಆರ್ಚರ್ ಮತ್ತು ರವಿ ಬಿಷ್ಣೋಯ್ ಅವರ ಮೇಲೆ ನಿರೀಕ್ಷೆ ಹೆಚ್ಚಿದೆ.
ಸಂಭವನೀಯ ಪ್ಲೇಯಿಂಗ್ 11: ಯಶಸ್ವಿ ಜೈಸ್ವಾಲ್, ವೈಭವ್ ಸೂರ್ಯವಂಶಿ, ರಿಯಾನ್ ಪರಾಗ್ (C), ಶಿಮ್ರಾನ್ ಹೆಟ್ಮೆಯರ್, ರವೀಂದ್ರ ಜಡೇಜಾ, ಧ್ರುವ್ ಜುರೆಲ್ (WK), ಜೋಫ್ರಾ ಆರ್ಚರ್, ರವಿ ಬಿಷ್ಣೋಯ್, ಸಂದೀಪ್ ಶರ್ಮಾ, ತುಷಾರ್ ದೇಶಪಾಂಡೆ, ನಾಂದ್ರೆ ಬರ್ಗರ್.
ಚೆನ್ನೈ ಸೂಪರ್ ಕಿಂಗ್ಸ್ (CSK) ಸಿದ್ಧತೆ
ಸಿಎಸ್‌ಕೆ ತಂಡಕ್ಕೆ ಈ ಬಾರಿ ಅತಿ ದೊಡ್ಡ ಹೊಡೆತ ಬಿದ್ದಿರೋದು ಎಂ.ಎಸ್. ಧೋನಿ ಅವರ ಗಾಯದ ಸಮಸ್ಯೆಯಿಂದ. ಮಾಹಿ ಆರಂಭದ ಕೆಲವು ಪಂದ್ಯಗಳಿಗೆ ಅಲಭ್ಯರಾಗಿರುವುದರಿಂದ ತಂಡದ ಅನುಭವ ಸ್ವಲ್ಪ ಕಡಿಮೆ ಎನಿಸಬಹುದು. ಆದರೆ ಸಂಜು ಸ್ಯಾಮ್ಸನ್ ಅವರ ಆಗಮನ ವಿಕೆಟ್ ಕೀಪಿಂಗ್ ಮತ್ತು ಬ್ಯಾಟಿಂಗ್‌ಗೆ ಶಕ್ತಿ ತುಂಬಿದೆ. ರುತುರಾಜ್ ಗಾಯಕ್ವಾಡ್ ನಾಯಕತ್ವದಲ್ಲಿ ತಂಡವು ಯುವ ಮತ್ತು ಅನುಭವಿ ಆಟಗಾರರ ಮಿಶ್ರಣದೊಂದಿಗೆ ಕಣಕ್ಕಿಳಿಯುತ್ತಿದೆ.
ಸಂಭವನೀಯ ಪ್ಲೇಯಿಂಗ್ 11: ರುತುರಾಜ್ ಗಾಯಕ್ವಾಡ್ (C), ಆಯುಷ್ ಮ್ಹಾತ್ರೆ, ಸಂಜು ಸ್ಯಾಮ್ಸನ್ (WK), ಶಿವಂ ದುಬೆ, ಮ್ಯಾಟ್ ಶಾರ್ಟ್, ಕಾರ್ತಿಕ್ ಶರ್ಮಾ, ಜೇಮಿ ಓವರ್ಟನ್, ನೂರ್ ಅಹ್ಮದ್, ಮ್ಯಾಟ್ ಹೆನ್ರಿ, ಖಲೀಲ್ ಅಹ್ಮದ್, ಅನ್ಶುಲ್ ಕಾಂಬೋಜ್.
ಹವಾಮಾನ ವರದಿ
ಗೌಹಾಟಿಯಲ್ಲಿ ಮಳೆಯ ಭೀತಿ ಸ್ವಲ್ಪ ಮಟ್ಟಿಗಿದೆ. ಪಂದ್ಯದ ಸಮಯದಲ್ಲಿ ಮೋಡ ಕವಿದ ವಾತಾವರಣವಿರಲಿದ್ದು, ಸಣ್ಣ ಮಟ್ಟದ ತುಂತುರು ಮಳೆಯಾಗುವ ಸಾಧ್ಯತೆ ಇದೆ. ಆದರೆ ಪೂರ್ಣ ಪ್ರಮಾಣದ ಪಂದ್ಯ ನಡೆಯುವ ನಿರೀಕ್ಷೆಯಿದೆ. ಇದು ಬಲಿಷ್ಠ ಬ್ಯಾಟಿಂಗ್ ಮತ್ತು ಬೌಲಿಂಗ್ ಪಡೆಗಳ ನಡುವಿನ ಕಾದಾಟ. ಹಳದಿ ಜರ್ಸಿಯಲ್ಲಿ ಸಂಜು ಮತ್ತು ನೀಲಿ-ಗುಲಾಬಿ ಜರ್ಸಿಯಲ್ಲಿ ಜಡೇಜಾ ಅವರನ್ನು ನೋಡುವುದೇ ಕಣ್ಣಿಗೆ ಹಬ್ಬ. ನೀವೇನಂತೀರಾ? ಇವತ್ತು ಗೆಲುವು ಯಾರದ್ದು?