ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ಮಗ ಅಂದ ತಕ್ಷಣ ಎಲ್ಲವೂ ಸುಲಭವಾಗಿ ಸಿಗುತ್ತೆ ಅಂದುಕೊಂಡರೆ ಅದು ತಪ್ಪು. ಸಚಿನ್ ಪುತ್ರ ಅರ್ಜುನ್ ತೆಂಡೂಲ್ಕರ್ ಅವರ ಕ್ರಿಕೆಟ್ ಜೀವನ ಸದ್ಯ ಅಷ್ಟೇನೂ ಸುಗಮವಾಗಿ ಸಾಗುತ್ತಿಲ್ಲ. ಮುಂಬೈ ರಣಜಿ ತಂಡದಲ್ಲಿ ಅವಕಾಶ ಸಿಗದೆ ಗೋವಾ ತಂಡಕ್ಕೆ ವಲಸೆ ಹೋದ ಇವರು, ಈಗ ಐಪಿಎಲ್‌ನಲ್ಲೂ ದೊಡ್ಡ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾರೆ. ಸುಮಾರು ಮೂರು ವರ್ಷಗಳ ಕಾಲ ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದರೂ ಆಡುವ ಅವಕಾಶ ಸಿಗದೆ ಬೇಸತ್ತ ಅರ್ಜುನ್, ಈಗ ಲಖನೌ ಸೂಪರ್ ಜೈಂಟ್ಸ್ (LSG) ತಂಡಕ್ಕೆ ಸೇರ್ಪಡೆಯಾಗಿದ್ದಾರೆ.
ಇತ್ತೀಚೆಗೆ ಶುಭಂಕರ್ ಮಿಶ್ರಾ ಅವರ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ಅರ್ಜುನ್ ತೆಂಡೂಲ್ಕರ್, ತಮ್ಮ ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ. "ನೀವು ಮುಂಬೈ ಇಂಡಿಯನ್ಸ್ ಪರ ಆಡಿದ ಕೆಲವು ಪಂದ್ಯಗಳಲ್ಲಿ ಚೆನ್ನಾಗಿ ಬೌಲಿಂಗ್ ಮಾಡಿದ್ದೀರಿ, ನಿಮ್ಮ ಸ್ವಿಂಗ್ ಕೂಡ ಅದ್ಭುತವಾಗಿತ್ತು. ನಿಮಗೆ ಹೆಚ್ಚಿನ ಅವಕಾಶ ಸಿಗಬೇಕಿತ್ತು ಅಂತ ಅನಿಸುತ್ತಿತ್ತಾ?" ಎಂದು ಕೇಳಿದ ಪ್ರಶ್ನೆಗೆ ಅರ್ಜುನ್ ನೇರವಾಗಿ ಉತ್ತರಿಸಿದ್ದಾರೆ.
"ಯಾರಿಗೆ ತಾನೇ ಆ ರೀತಿ ಅನಿಸುವುದಿಲ್ಲ ಹೇಳಿ? ಯಾರೂ ಕೂಡ ಸುಮ್ಮನೆ ಬೆಂಚ್ ಮೇಲೆ ಕುಳಿತುಕೊಳ್ಳಲು ಬಯಸುವುದಿಲ್ಲ. ನಾವೆಲ್ಲರೂ ಕಷ್ಟಪಟ್ಟು ಪ್ರಾಕ್ಟೀಸ್ ಮಾಡೋದು ಮೈದಾನಕ್ಕಿಳಿದು ಪ್ರದರ್ಶನ ನೀಡಲು ಮಾತ್ರ" ಎಂದು ಹೇಳುವ ಮೂಲಕ ಮುಂಬೈ ತಂಡದಲ್ಲಿ ತಮಗೆ ಸರಿಯಾದ ಅವಕಾಶ ಸಿಗಲಿಲ್ಲ ಎಂಬ ನೋವನ್ನು ಪರೋಕ್ಷವಾಗಿ ಹೊರಹಾಕಿದ್ದಾರೆ.
ಅರ್ಜುನ್ ಕೇವಲ ಬೌಲರ್ ಮಾತ್ರವಲ್ಲ, ಅವರು ಉತ್ತಮವಾಗಿ ಬ್ಯಾಟಿಂಗ್ ಕೂಡ ಮಾಡಬಲ್ಲರು. ಈ ಬಾರಿ ಲಖನೌ ತಂಡದ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟರ್ ಆಗಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. "ಟಿ20 ಎಂದರೆ ಯಾರಾದರೂ ಯಾರನ್ನಾದರೂ ಸೋಲಿಸಬಹುದಾದ ಆಟ. ನಮ್ಮ ಲಖನೌ ತಂಡದ ಮಧ್ಯಮ ಕ್ರಮಾಂಕ ತುಂಬಾ ಶಕ್ತಿಶಾಲಿಯಾಗಿದೆ. ಈ ಸೀಸನ್‌ನಲ್ಲಿ ನಾವು ಉತ್ತಮ ಪ್ರದರ್ಶನ ನೀಡುವ ವಿಶ್ವಾಸ ನನಗಿದೆ" ಎಂದು ಅವರು ಹೇಳಿದ್ದಾರೆ. ಇತ್ತೀಚೆಗೆ ನಾಯಕ ರಿಷಬ್ ಪಂತ್ ಅವರೊಂದಿಗೆ ಭಾರವಾದ ಬ್ಯಾಟ್ ಬಳಸುವ ಬಗ್ಗೆ ಅರ್ಜುನ್ ನಡೆಸಿದ ಚರ್ಚೆಯ ವಿಡಿಯೋ ಕೂಡ ಸಖತ್ ವೈರಲ್ ಆಗಿತ್ತು.
ಐಪಿಎಲ್‌ನಲ್ಲಿ ಈಗ ಚರ್ಚೆಯಲ್ಲಿರುವ 'ಇಂಪ್ಯಾಕ್ಟ್ ಪ್ಲೇಯರ್' ನಿಯಮದ ಬಗ್ಗೆ ಅರ್ಜುನ್ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. "ಅಂತರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಅಥವಾ ಬೇರೆ ಯಾವುದೇ ಲೀಗ್‌ಗಳಲ್ಲಿ ಈ ನಿಯಮ ಇಲ್ಲ. ಹಾಗಾಗಿ ಐಪಿಎಲ್‌ನಲ್ಲೂ 11 ಜನರನ್ನು ಮಾತ್ರ ಆರಿಸಿ ಆಟವಾಡಿಸುವುದು ಸರಿ. ವೈಯಕ್ತಿಕವಾಗಿ ನಾನು ಈ ನಿಯಮವನ್ನು ವಿರೋಧಿಸುತ್ತೇನೆ" ಎಂದಿದ್ದಾರೆ. ಈಗಾಗಲೇ ರೋಹಿತ್ ಶರ್ಮಾ ಮತ್ತು ಅಕ್ಷರ್ ಪಟೇಲ್ ಅವರಂತಹ ಹಿರಿಯ ಆಟಗಾರರು ಕೂಡ ಈ ನಿಯಮ ಆಲ್‌ರೌಂಡರ್‌ಗಳ ಬೆಳವಣಿಗೆಗೆ ಮಾರಕ ಎಂದು ವಿರೋಧ ವ್ಯಕ್ತಪಡಿಸಿರುವುದು ಇಲ್ಲಿ ಗಮನಾರ್ಹ.
Naam Arjun hai... 🎯 pic.twitter.com/x7h1nZTPBv
— Lucknow Super Giants (@LucknowIPL) March 17, 2026
ಅರ್ಜುನ್ ತೆಂಡೂಲ್ಕರ್ ಈವರೆಗೆ ಮುಂಬೈ ಪರ ಆಡಿದ 5 ಪಂದ್ಯಗಳಿಂದ 3 ವಿಕೆಟ್ ಪಡೆದಿದ್ದಾರೆ. ಇತ್ತೀಚೆಗಷ್ಟೇ ಅವರು ಸಾನಿಯಾ ಚಾಂದೋಕ್ ಅವರೊಂದಿಗೆ ವಿವಾಹ ಜೀವನಕ್ಕೆ ಕಾಲಿಟ್ಟಿದ್ದಾರೆ. ವೈಯಕ್ತಿಕ ಜೀವನದಲ್ಲಿ ಹೊಸ ಆರಂಭ ಮಾಡಿರುವ ಅರ್ಜುನ್, ಈಗ ಲಖನೌ ತಂಡದ ಪರವಾಗಿ ಐಪಿಎಲ್ ಮೈದಾನದಲ್ಲಿ ಅಬ್ಬರಿಸಲು ಸಜ್ಜಾಗುತ್ತಿದ್ದಾರೆ. ತಂದೆಯ ಹೆಸರಿನ ನೆರಳಿನಿಂದ ಹೊರಬಂದು ಸ್ವಂತ ಸಾಮರ್ಥ್ಯದ ಮೇಲೆ ಗುರುತಿಸಿಕೊಳ್ಳಲು ಹವಣಿಸುತ್ತಿರುವ ಅರ್ಜುನ್‌ಗೆ ಈ ಬಾರಿ ಲಖನೌ ತಂಡದಲ್ಲಿ ಅದೃಷ್ಟ ಒಲಿಯುತ್ತಾ? ಕಾದು ನೋಡೋಣ. ಅವರ ಪರಿಶ್ರಮಕ್ಕೆ ತಕ್ಕಂತೆ ಈ ಸೀಸನ್‌ನಲ್ಲಿ ಹೆಚ್ಚಿನ ಪಂದ್ಯಗಳನ್ನು ಆಡುವ ಅವಕಾಶ ಸಿಗಲಿ ಎಂಬುದು ಅಭಿಮಾನಿಗಳ ಹಾರೈಕೆ.