ಈ ಸಲ ಕಪ್ ನಮ್ದೆ' ಅಲ್ಲ, 'ಈಗಲೂ ಕಪ್ ನಮ್ದೆ - ಇತಿಹಾಸ ಬರೆದು ಸತತ 2ನೇ ಬಾರಿ ಐಪಿಎಲ್ ಮುಡಿಗೇರಿಸಿಕೊಂಡ RCB!!

"ಈ ಸಲ ಕಪ್ ನಮ್ದೆ" ಅನ್ನೋ ಸ್ಲೋಗನ್ ಈಗ ಕೇವಲ ಕನಸಲ್ಲ, ಸತತ ಎರಡನೇ ಬಾರಿಗೆ ನನಸಾಗಿದೆ! ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಐಪಿಎಲ್ ಇತಿಹಾಸದಲ್ಲೇ ಹಿಂದೆಂದೂ ಮಾಡದ ಅತಿ ದೊಡ್ಡ ಸಾಧನೆ ಮಾಡಿ ಇತಿಹಾಸದ ಪುಟ ಸೇರಿದೆ. ಕೇವಲ ಕಪ್ ಗೆಲ್ಲೋದು ಮಾತ್ರವಲ್ಲ, ಗೆದ್ದ ಕಪ್ಪನ್ನು ತನ್ನಲ್ಲೇ ಉಳಿಸಿಕೊಂಡು ಬ್ಯಾಕ್-ಟು-ಬ್ಯಾಕ್ ಚಾಂಪಿಯನ್ ಪಟ್ಟ ಅಲಂಕರಿಸಿದೆ.

ಅಹಮದಾಬಾದ್‌ನಲ್ಲಿ ಬೆಂಗಳೂರು ಹುಡುಗರ ಅಬ್ಬರ
ಅಹಮದಾಬಾದ್‌ನಲ್ಲಿ ಬೆಂಗಳೂರು ಹುಡುಗರ ಅಬ್ಬರ

ಐಪಿಎಲ್ ಇತಿಹಾಸದಲ್ಲಿ ಈ ಹಿಂದೆ ಚೆನ್ನೈ ಸೂಪರ್ ಕಿಂಗ್ಸ್ (CSK) ಮತ್ತು ಮುಂಬೈ ಇಂಡಿಯನ್ಸ್ (MI) ತಂಡಗಳು ಮಾತ್ರ ಸತತವಾಗಿ ಟ್ರೋಫಿ ಗೆದ್ದು ದಾಖಲೆ ಬರೆದಿದ್ದವು. ಈಗ ಆ ಬಲಿಷ್ಠ ತಂಡಗಳ ಸಾಲಿಗೆ ನಮ್ಮ ಆರ್‌ಸಿಬಿ ಕೂಡ ಹೆಮ್ಮೆಯಿಂದ ಸೇರಿಕೊಂಡಿದೆ. ಈ ಮೂಲಕ ಸತತ ಎರಡು ಬಾರಿ ಐಪಿಎಲ್ ಟ್ರೋಫಿ ಗೆದ್ದ ಮೂರನೇ ತಂಡ ಅನ್ನೋ ಹೆಗ್ಗಳಿಕೆಗೆ ಬೆಂಗಳೂರು ಪಾತ್ರವಾಗಿದೆ.

ಅಹಮದಾಬಾದ್‌ನಲ್ಲಿ ಆರ್‌ಸಿಬಿ ಅಬ್ಬರ!

ಅಹಮದಾಬಾದ್‌ನ ಬೃಹತ್ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಹೈವೋಲ್ಟೇಜ್ ಫೈನಲ್ ಪಂದ್ಯದಲ್ಲಿ ರಜತ್ ಪಾಟೀದಾರ್ ನೇತೃತ್ವದ ಆರ್‌ಸಿಬಿ ತಂಡ, ಗುಜರಾತ್ ಟೈಟಾನ್ಸ್ ವಿರುದ್ಧ ಭರ್ಜರಿ 5 ವಿಕೆಟ್‌ಗಳ ಜಯ ಸಾಧಿಸಿತು. ಸ್ಟೇಡಿಯಂ ತುಂಬಿದ್ದ ಲಕ್ಷಾಂತರ ಅಭಿಮಾನಿಗಳ ಸಮ್ಮುಖದಲ್ಲಿ ಆರ್‌ಸಿಬಿ ಮತ್ತೊಮ್ಮೆ ಪ್ರಶಸ್ತಿ ಮುಡಿಗೇರಿಸಿಕೊಂಡು ಸಂಭ್ರಮಿಸಿತು.

ಪಂದ್ಯದಲ್ಲಿ ಟಾಸ್ ಗೆದ್ದ ಆರ್‌ಸಿಬಿ ನಾಯಕ ರಜತ್ ಪಾಟೀದಾರ್ ಮೊದಲು ಬೌಲಿಂಗ್ ಆಯ್ದುಕೊಂಡರು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಬೇಕಾಗಿ ಬಂದ ಶುಭಮನ್ ಗಿಲ್ ನೇತೃತ್ವದ ಗುಜರಾತ್ ಟೈಟಾನ್ಸ್ ತಂಡಕ್ಕೆ ಆರ್‌ಸಿಬಿ ಬೌಲರ್‌ಗಳು ಆರಂಭದಲ್ಲೇ ಶಾಕ್ ನೀಡಿದರು. ನಿಖರ ಲೈನ್ ಅಂಡ್ ಲೆನ್ತ್ ಬೌಲಿಂಗ್ ಪ್ರದರ್ಶಿಸಿದ ಬೆಂಗಳೂರು ಬೌಲರ್‌ಗಳ ಆರ್ಭಟಕ್ಕೆ ಗುಜರಾತ್ ಬ್ಯಾಟರ್‌ಗಳು ರನ್ ಗಳಿಸಲು ತಡಕಾಡಿದರು.

ಅಂತಿಮವಾಗಿ ಗುಜರಾತ್ ಟೈಟಾನ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 155 ರನ್ ಗಳಿಸಲಷ್ಟೇ ಶಕ್ತವಾಯಿತು. ಆರ್‌ಸಿಬಿಗೆ ಫೈನಲ್ ಪಂದ್ಯ ಗೆದ್ದು ಚಾಂಪಿಯನ್ ಆಗಲು 156 ರನ್‌ಗಳ ಸಾಧಾರಣ ಗುರಿ ಸಿಕ್ಕಿತು.

ಕಿಂಗ್ ಕೊಹ್ಲಿ ಅಜೇಯ ಆಟ; ಪಂದ್ಯ ಶ್ರೇಷ್ಠ ಪ್ರಶಸ್ತಿ!

156 ರನ್‌ಗಳ ಗುರಿ ಬೆನ್ನಟ್ಟಿದ ಆರ್‌ಸಿಬಿ ತಂಡಕ್ಕೆ ಆರಂಭದಲ್ಲೇ ಸಣ್ಣ ಆಘಾತ ಎದುರಾದರೂ, ಕ್ರೀಸ್‌ಗೆ ಬಂದ ರನ್ ಮಷಿನ್ ವಿರಾಟ್ ಕೊಹ್ಲಿ ಇಡೀ ಪಂದ್ಯದ ಜವಾಬ್ದಾರಿಯನ್ನು ತಮ್ಮ ಹೆಗಲಿಗೆ ಹೊತ್ತುಕೊಂಡರು. ಗುಜರಾತ್ ಬೌಲರ್‌ಗಳನ್ನು ಮೈದಾನದ ಮೂಲೆ ಮೂಲೆಗೂ ಅಟ್ಟಿದ ಕಿಂಗ್ ಕೊಹ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದರು.

ಅಂತಿಮವಾಗಿ ಆರ್‌ಸಿಬಿ ಇನ್ನು 2 ಓವರ್‌ಗಳು ಬಾಕಿ ಇರುವಂತೆಯೇ, ಅಂದರೆ 18 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 156 ರನ್ ಗಳಿಸಿ ವಿಜಯದ ನಗೆ ಬೀರಿದೆ. ಜವಾಬ್ದಾರಿಯುತ ಆಟ ಆಡಿದ ವಿರಾಟ್ ಕೊಹ್ಲಿ ಕೇವಲ ಔಟಾಗದೆ 75 ರನ್ ಚಚ್ಚಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಇವರ ಈ ಮ್ಯಾಚ್ ವಿನ್ನಿಂಗ್ ಪ್ರದರ್ಶನಕ್ಕೆ 'ಪಂದ್ಯಶ್ರೇಷ್ಠ' (Man of the Match) ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಫ್ಯಾನ್ಸ್ ಫುಲ್ ಖುಷ್, ಸೋಶಿಯಲ್ ಮೀಡಿಯಾದಲ್ಲಿ ಹಬ್ಬ!

ಆರ್‌ಸಿಬಿ ಸತತ ಎರಡನೇ ಬಾರಿ ಕಪ್ ಗೆಲ್ಲುತ್ತಿದ್ದಂತೆ ಇಡೀ ಬೆಂಗಳೂರು ನಗರದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ಬೆಂಗಳೂರಿನ ಎಂ.ಚಿನ್ನಸ್ವಾಮಿ ಸ್ಟೇಡಿಯಂ ಸುತ್ತಮುತ್ತ ಹಾಗೂ ಇಡೀ ಕರ್ನಾಟಕದಾದ್ಯಂತ ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸುತ್ತಿದ್ದಾರೆ. "ಈ ಸಲ ಕಪ್ ನಮ್ದೆ ಅನ್ನೋ ಕಾಲ ಹೋಗಿ, 'ಈಗಲೂ ಕಪ್ ನಮ್ದೆ' ಅನ್ನೋ ರೇಂಜ್‌ಗೆ ಆರ್‌ಸಿಬಿ ಬೆಳೆದು ನಿಂತಿದೆ" ಎಂದು ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಮೀಮ್ಸ್ ಹಾಗೂ ಪೋಸ್ಟ್‌ಗಳ ಮೂಲಕ ಸಂಭ್ರಮ ಹಂಚಿಕೊಳ್ಳುತ್ತಿದ್ದಾರೆ.

ಯಾವಾಗಲೂ ಟ್ರೋಫಿ ಗೆಲ್ಲಲ್ಲ ಅಂತ ಟ್ರೋಲ್ ಮಾಡ್ತಿದ್ದವರಿಗೆ ಆರ್‌ಸಿಬಿ ಬ್ಯಾಕ್-ಟು-ಬ್ಯಾಕ್ ಎರಡು ಕಪ್ ಗೆದ್ದು ಬ್ಯಾಟ್‌ನಿಂದಲೇ ಖಡಕ್ ಉತ್ತರ ನೀಡಿದೆ. ರಜತ್ ಪಾಟೀದಾರ್ ಕ್ಯಾಪ್ಟನ್ಸಿ ಮತ್ತು ವಿರಾಟ್ ಕೊಹ್ಲಿ ಅವರ ಅದ್ಭುತ ಫಾರ್ಮ್ ಆರ್‌ಸಿಬಿಯನ್ನು ಇತಿಹಾಸದ ಪುಟಗಳಲ್ಲಿ ರಾಜನಂತೆ ಕೂರಿಸಿದೆ.

Latest News