ಐಪಿಎಲ್ ಅಂದ್ರೆನೇ ಸಂಭ್ರಮ, ಅದರಲ್ಲೂ ಆರ್ಸಿಬಿ ಮತ್ತು ಸಿಎಸ್ಕೆ ಮುಖಾಮುಖಿ ಅಂದ್ರೆ ಅದು ಬರಿ ಪಂದ್ಯವಲ್ಲ, ಅಭಿಮಾನಿಗಳ ಪಾಲಿಗೆ ಎಮೋಷನ್! ಇಂದು (ಏಪ್ರಿಲ್ 5) ಬೆಂಗಳೂರಿನ ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಐಪಿಎಲ್ ಸೀಸನ್-19ರ ಈ ಬಿಗ್ ಫೈಟ್ ನಡೆಯಲಿದ್ದು, ಯಾರು ಗೆಲ್ಲಬಹುದು ಅನ್ನೋ ಲೆಕ್ಕಾಚಾರ ಶುರುವಾಗಿದೆ.
ಇಂದಿನ ಪಂದ್ಯದಲ್ಲಿ ಅಂಕಿಅಂಶಗಳನ್ನು ನೋಡಿದರೆ ನಮ್ಮ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಗೆಲ್ಲುವ ಚಾನ್ಸ್ 60.9% ಇದೆ ಎನ್ನಲಾಗುತ್ತಿದೆ. ಇದಕ್ಕೆ ಕಾರಣವೂ ಇದೆ. ಕಳೆದ ಸೀಸನ್‌ನ ಚಾಂಪಿಯನ್ ಆಗಿರೋ ಆರ್ಸಿಬಿ, ಈ ಸಲದ ಮೊದಲ ಮ್ಯಾಚ್‌ನಲ್ಲೇ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಅಕ್ಷರಶಃ ಧೂಳಿಪಟ ಮಾಡಿ 6 ವಿಕೆಟ್‌ಗಳ ಗೆಲುವು ಸಾಧಿಸಿದೆ. ಆ ಕಡೆ ಸಿಎಸ್ಕೆ ನೋಡಿದರೆ, ರಾಜಸ್ಥಾನ್ ಮತ್ತು ಪಂಜಾಬ್ ವಿರುದ್ಧ ಸೋತು ಸ್ವಲ್ಪ ಕಂಗೆಟ್ಟಿದೆ. ಹಾಗಾಗಿ ಹೋಮ್ ಗ್ರೌಂಡ್‌ನಲ್ಲಿ ಆರ್ಸಿಬಿ ಆರ್ಭಟ ಜೋರಾಗಿರುವ ಸಾಧ್ಯತೆ ಇದೆ.
ಮುಖಾಮುಖಿ ಇತಿಹಾಸ
ಐಪಿಎಲ್ ಇತಿಹಾಸದಲ್ಲಿ ಒಟ್ಟು 35 ಬಾರಿ ಈ ಎರಡು ತಂಡಗಳು ಸೆಣಸಾಡಿವೆ.
- CSK ಗೆಲುವು: 21
- RCB ಗೆಲುವು: 13
ಒಂದು ಪಂದ್ಯ ಮಳೆಯಿಂದ ರದ್ದಾಗಿತ್ತು.
ಒಟ್ಟಾರೆ ರೆಕಾರ್ಡ್‌ನಲ್ಲಿ ಚೆನ್ನೈ ಮುಂದಿದ್ದರೂ, ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮಾತ್ರ ಲೆಕ್ಕಾಚಾರ ಬೇರೆನೇ ಇರುತ್ತೆ. ಇಲ್ಲಿ ನಡೆದಿರುವ 11 ಪಂದ್ಯಗಳಲ್ಲಿ ಆರ್ಸಿಬಿ 6 ಬಾರಿ ಗೆದ್ದಿದ್ದರೆ, ಸಿಎಸ್ಕೆ 5 ಬಾರಿ ಗೆದ್ದಿದೆ. ಅಂದ್ರೆ ಬೆಂಗಳೂರಿನಲ್ಲಿ ಇಬ್ಬರ ನಡುವೆ ಕತ್ತುಕತ್ತಿನ ಫೈಟ್ ಗ್ಯಾರಂಟಿ!
ಪಿಚ್ ಮತ್ತು ಟಾಸ್ ಮ್ಯಾಜಿಕ್
ಚಿನ್ನಸ್ವಾಮಿ ಸ್ಟೇಡಿಯಂ ಬ್ಯಾಟರ್‌ಗಳ ಪಾಲಿಗೆ ಸ್ವರ್ಗ. ಇಲ್ಲಿ ಬೌಂಡರಿಗಳು ಚಿಕ್ಕದಾಗಿರೋದ್ರಿಂದ ರನ್ ಮಳೆ ಸುರಿಯೋದು ಪಕ್ಕಾ. ಟಾಸ್ ಗೆದ್ದವರು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡು, ನಂತರ ಚೇಸಿಂಗ್ ಮಾಡುವುದು ಇಲ್ಲಿನ ಸಕ್ಸೆಸ್ ಮಂತ್ರ.
ಧೋನಿ ಅಲಭ್ಯತೆ: ಸಿಎಸ್ಕೆ ಅಭಿಮಾನಿಗಳಿಗೆ ಇದು ಬೇಸರದ ಸುದ್ದಿ. ಎಂ.ಎಸ್. ಧೋನಿ ಗಾಯದ ಸಮಸ್ಯೆಯಿಂದಾಗಿ ಇಂದಿನ ಪಂದ್ಯ ಆಡುವುದು ಅನುಮಾನ ಎನ್ನಲಾಗುತ್ತಿದೆ. ಇದು ಚೆನ್ನೈ ತಂಡದ ಆತ್ಮವಿಶ್ವಾಸಕ್ಕೆ ಸ್ವಲ್ಪ ಹೊಡೆತ ನೀಡಬಹುದು.
ಕಿಂಗ್ ಕೊಹ್ಲಿ ಅಬ್ಬರ: ವಿರಾಟ್ ಕೊಹ್ಲಿ ಕಳೆದ ಪಂದ್ಯದಲ್ಲೇ ಅಜೇಯ ಅರ್ಧಶತಕ ಬಾರಿಸಿ "ನಾನು ಫಾರ್ಮ್‌ನಲ್ಲಿದ್ದೇನೆ" ಅಂತ ತೋರಿಸಿಕೊಟ್ಟಿದ್ದಾರೆ. ಇನ್ನು ಬೌಲಿಂಗ್‌ನಲ್ಲಿ ಹೊಸ ಸೆನ್ಸೇಷನ್ ಜೇಕಬ್ ಡಫಿ ಪವರ್‌ಪ್ಲೇನಲ್ಲಿ ವಿಕೆಟ್ ಕಿಳೋಕೆ ರೆಡಿಯಾಗಿದ್ದಾರೆ.
ಗಮನಿಸಬೇಕಾದ ಆಟಗಾರರು
RCB: ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಟಿಮ್ ಡೇವಿಡ್ ಮತ್ತು ಜೇಕಬ್ ಡಫಿ.
CSK: ರುತುರಾಜ್ ಗಾಯಕ್ವಾಡ್, ಶಿವಂ ದುಬೆ ಮತ್ತು ನೂರ್ ಅಹಮದ್ (ಸಂಜು ಸ್ಯಾಮ್ಸನ್ ಕೂಡ ಸಿಎಸ್ಕೆಯಲ್ಲಿ ಗಮನ ಸೆಳೆಯಲಿದ್ದಾರೆ).
ಸದ್ಯದ ಲಯ, ತವರು ಮೈದಾನದ ಸಪೋರ್ಟ್ ಮತ್ತು ವಿರಾಟ್ ಕೊಹ್ಲಿ ಅವರ ಭರ್ಜರಿ ಫಾರ್ಮ್ ನೋಡುತ್ತಿದ್ದರೆ, ಇಂದು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ 'ಆರ್ಸಿಬಿ' ವಿಜಯ ಪತಾಕೆ ಹಾರಿಸೋದು ಬಹುತೇಕ ಖಚಿತ ಎನ್ನುತ್ತಿವೆ ಕ್ರಿಕೆಟ್ ಲೆಕ್ಕಾಚಾರಗಳು.