Apr 17, 2026 Languages : ಕನ್ನಡ | English

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ 'ನಮ್ಮ ಮೆಟ್ರೋ' ಓಡಾಟ ತಡರಾತ್ರಿವರೆಗೂ - ಕಳ್ಳರ ಮೇಲೆ ಸಿಸಿಬಿ ಹದ್ದಿನ ಕಣ್ಣು!!

ಬೆಂಗಳೂರಿನ ಕ್ರಿಕೆಟ್ ಪ್ರೇಮಿಗಳಿಗೆ ಇಂದು ಹಬ್ಬದ ದಿನ. ಐಪಿಎಲ್‌ನ ಎರಡು ಬಲಿಷ್ಠ ತಂಡಗಳಾದ ಆರ್​ಸಿಬಿ (RCB) ಮತ್ತು ಸಿಎಸ್​ಕೆ (CSK) ಮುಖಾಮುಖಿಯಾಗುತ್ತಿವೆ. ಸ್ಟೇಡಿಯಂನತ್ತ ಅಭಿಮಾನಿಗಳ ದಂಡೇ ಹರಿದು ಬರುತ್ತಿದೆ. ಆದರೆ, ಪಂದ್ಯದ ಸಂಭ್ರಮದ ನಡುವೆ ಕಳ್ಳಕಾಕರ ಕಾಟ ತಪ್ಪಿಸಲು ಬೆಂಗಳೂರು ಪೊಲೀಸರು ಈ ಬಾರಿ ಫುಲ್ ಅಲರ್ಟ್ ಆಗಿದ್ದಾರೆ.

ನಕಲಿ ಟಿಕೆಟ್ ಮತ್ತು ಬೆಟ್ಟಿಂಗ್ ದಂಧೆಗೆ ಸಿಸಿಬಿ ಬ್ರೇಕ್
ನಕಲಿ ಟಿಕೆಟ್ ಮತ್ತು ಬೆಟ್ಟಿಂಗ್ ದಂಧೆಗೆ ಸಿಸಿಬಿ ಬ್ರೇಕ್

8 ಮಂದಿ ಪೊಲೀಸ್ ವಶಕ್ಕೆ!

ಪಂದ್ಯ ಶುರುವಾಗುವ ಮೊದಲೇ ಸ್ಟೇಡಿಯಂ ಸುತ್ತಮುತ್ತ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ 8 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದರಲ್ಲಿ ನಾಲ್ವರು ಜಾರ್ಖಂಡ್ ಮೂಲದವರು ಎಂದು ತಿಳಿದುಬಂದಿದೆ. ಇವರ ಬಳಿ ಟಿಕೆಟ್ ಇದೆಯೇ? ಇಲ್ಲಿಗೆ ಬಂದ ಉದ್ದೇಶವೇನು? ಎಂಬ ಬಗ್ಗೆ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಕ್ರೀಡಾಂಗಣದ ಒಳಗೆ ಹೋಗುವ ಪ್ರತಿಯೊಬ್ಬರನ್ನೂ ಕೂಲಂಕಷವಾಗಿ ತಪಾಸಣೆ ಮಾಡಿದ ನಂತರವೇ ಬಿಡಲಾಗುತ್ತಿದೆ.

ನಿಮಗೆ ನೆನಪಿರಬಹುದು, ಕಳೆದ ಮಾರ್ಚ್ 28 ರಂದು ನಡೆದ ಆರ್​​ಸಿಬಿ-ಸನ್​ರೈಸರ್ಸ್ ಪಂದ್ಯದ ವೇಳೆ ಅಭಿಮಾನಿಗಳು ಮೈಮರೆತು ಮ್ಯಾಚ್ ನೋಡುತ್ತಿದ್ದರೆ, ಅತ್ತ ಕಳ್ಳರ ಗ್ಯಾಂಗ್ ಕೈಚಳಕ ತೋರಿಸಿತ್ತು. ಒಂದಲ್ಲ ಎರಡಲ್ಲ, ಬರೋಬ್ಬರಿ 72 ಮೊಬೈಲ್​​ಗಳನ್ನು ಸದ್ದಿಲ್ಲದೆ ದೋಚಿದ್ದರು! ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 9 ಮಂದಿ ಅಪ್ರಾಪ್ತರು ಸೇರಿದಂತೆ 13 ಜನರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಈ ಕಳ್ಳರ ಗ್ಯಾಂಗ್ ಜಾರ್ಖಂಡ್‌ನಿಂದಲೇ ಬೆಂಗಳೂರಿಗೆ ಬಂದಿತ್ತು ಎನ್ನಲಾಗಿದೆ.

ಈ ಹಳೆ ಘಟನೆಯಿಂದ ಪಾಠ ಕಲಿತಿರುವ ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್, "ಪಿಕ್ ಪಾಕೆಟ್ ಅಥವಾ ಕಳ್ಳತನ ಮಾಡಿದರೆ ಕಠಿಣ ಕ್ರಮ ಗ್ಯಾರಂಟಿ" ಎಂದು ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.

ಪೊಲೀಸ್ ಕಾವಲು: ಸುಮಾರು 2,300 ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ. ಸಿಸಿಬಿ ಪೊಲೀಸರು ಕೂಡ ನಕಲಿ ಟಿಕೆಟ್ ಮಾರಾಟ ಮತ್ತು ಬೆಟ್ಟಿಂಗ್ ದಂಧೆಯ ಮೇಲೆ ಕಣ್ಣಿಟ್ಟಿದ್ದಾರೆ.

ನಮ್ಮ ಮೆಟ್ರೋ: ಪಂದ್ಯ ಮುಗಿಯುವುದು ತಡವಾಗುವುದರಿಂದ ಅಭಿಮಾನಿಗಳ ಅನುಕೂಲಕ್ಕಾಗಿ ಇವತ್ತು ರಾತ್ರಿ 2 ಗಂಟೆಯವರೆಗೂ ಮೆಟ್ರೋ ರೈಲು ಸಂಚಾರವಿರಲಿದೆ.

ಬಿಎಂಟಿಸಿ ಬಸ್: ಜನಸಂದಣಿ ನಿಯಂತ್ರಿಸಲು ಬಿಎಂಟಿಸಿಯಿಂದ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ.

ನಿರ್ಬಂಧ: ಟಿಕೆಟ್ ಇಲ್ಲದವರು ಸ್ಟೇಡಿಯಂ ಸಮೀಪ ಸುಮ್ಮನೆ ಓಡಾಡುವಂತಿಲ್ಲ. ಭದ್ರತೆಯ ದೃಷ್ಟಿಯಿಂದ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ.

ಪಂದ್ಯದ ಖುಷಿಯಲ್ಲಿ ನಿಮ್ಮ ಬ್ಯಾಗ್ ಮತ್ತು ಮೊಬೈಲ್ ಕಡೆ ಒಂದು ಕಣ್ಣಿರಲಿ. ಯಾರಾದರೂ ಅನುಮಾನಾಸ್ಪದವಾಗಿ ಕಂಡುಬಂದರೆ ಕೂಡಲೇ ಹತ್ತಿರದ ಪೊಲೀಸರಿಗೆ ಮಾಹಿತಿ ನೀಡಿ. ಟಿಕೆಟ್ ಇಲ್ಲದವರು ಸ್ಟೇಡಿಯಂ ಹತ್ತಿರ ಬಂದು ಟ್ರಾಫಿಕ್ ಜಾಮ್ ಮಾಡಬೇಡಿ ಎಂದು ಪೊಲೀಸರು ಮನವಿ ಮಾಡಿದ್ದಾರೆ.

ಮೈದಾನದಲ್ಲಿ ವಿರಾಟ್ ಕೊಹ್ಲಿ ಮತ್ತು ಧೋನಿ ಅಬ್ಬರ ನೋಡಲು ಫ್ಯಾನ್ಸ್ ರೆಡಿಯಾಗಿದ್ದರೆ, ಅತ್ತ ಸ್ಟೇಡಿಯಂ ಹೊರಗಡೆ ಕಳ್ಳರನ್ನು ಹಿಡಿಯಲು ಪೊಲೀಸರು ರೆಡಿಯಾಗಿದ್ದಾರೆ. ನಿಮ್ಮ ನೆಚ್ಚಿನ ತಂಡಕ್ಕೆ ಚಿಯರ್ ಮಾಡಿ, ಸುರಕ್ಷಿತವಾಗಿ ಮನೆಗೆ ಮರಳಿ!

Latest News