LSG vs CSK: ಮಾರ್ಷ್ ಅಬ್ಬರಕ್ಕೆ ಧೂಳೀಪಟವಾದ ಸಿಎಸ್‌ಕೆ - ಚೆನ್ನೈ ಮುಂದಿನ 2 ಪಂದ್ಯ ಗೆದ್ರೂ ಪ್ಲೇಆಫ್ ಚಾನ್ಸ್ ಇಲ್ವಾ?

ಐಪಿಎಲ್ 2026ರ ಕ್ರೇಜ್ ದಿನದಿಂದ ದಿನಕ್ಕೆ ಸಖತ್ ರಂಗೇರುತ್ತಿದೆ. ಇತ್ತೀಚೆಗೆ ನಡೆದ 59ನೇ ಪಂದ್ಯದಲ್ಲಂತೂ ಲಖನೌ ಸೂಪರ್ ಜಯಂಟ್ಸ್ (LSG) ತಂಡ, ಐದು ಬಾರಿಯ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ (CSK) ವಿರುದ್ಧ 7 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿದೆ. ಲಖನೌದ ಏಕನಾ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮಿಚೆಲ್ ಮಾರ್ಷ್ ಸಿಡಿಸಿದ ಬಿರುಗಾಳಿ ಅರ್ಧಶತಕದ ನೆರವಿನಿಂದ ಲಖನೌ ಈಸಿ ಗೆಲುವು ತನ್ನದಾಗಿಸಿಕೊಂಡಿತು. ಈ ಸೋಲಿನಿಂದಾಗಿ ಸಿಎಸ್‌ಕೆ ತಂಡದ ಪ್ಲೇಆಫ್ ಹಾದಿ ಈಗ ಕಂಪ್ಲೀಟ್ ಕಠಿಣವಾಗಿದ್ದು, ಮುಂದಿನ ಎರಡೂ ಪಂದ್ಯಗಳನ್ನು ಗೆಲ್ಲಲೇಬೇಕಾದ ಅನಿವಾರ್ಯತೆಗೆ ಸಿಲುಕಿದೆ.

ಐಪಿಎಲ್ 2026: ಲಖನೌ ಅಂಗಳದಲ್ಲಿ ಚೆನ್ನೈ ಸೋಲು; | Photo Credit: bcci.tv
ಐಪಿಎಲ್ 2026: ಲಖನೌ ಅಂಗಳದಲ್ಲಿ ಚೆನ್ನೈ ಸೋಲು; | Photo Credit: bcci.tv

ಪಂದ್ಯದ ಶಾರ್ಟ್ ಸ್ಕೋರ್‌ಕಾರ್ಡ್

ಚೆನ್ನೈ ಸೂಪರ್ ಕಿಂಗ್ಸ್: 20 ಓವರ್‌ಗಳಲ್ಲಿ 187/5 (ಕಾರ್ತಿಕ್ ಶರ್ಮಾ 71, ಶಿವಂ ದುಬೆ 32*, ಆಕಾಶ್ ಸಿಂಗ್ 3/26)

ಲಖನೌ ಸೂಪರ್ ಜಯಂಟ್ಸ್: 16.4 ಓವರ್‌ಗಳಲ್ಲಿ 188/3 (ಮಿಚೆಲ್ ಮಾರ್ಷ್ 90, ಜೋಶ್ ಇಂಗ್ಲಿಸ್ 36, ಮುಕೇಶ್ ಚೌಧರಿ 1/24)

ಲಖನೌ ಅಂಗಳದಲ್ಲಿ ಚೆನ್ನೈಗೆ ಆರಂಭಿಕ ಆಘಾತ!

ಟಾಸ್ ಗೆದ್ದ ಲಖನೌ ತಂಡದ ನಾಯಕ ಮೊದಲು ಬೌಲಿಂಗ್ ಆಯ್ದುಕೊಂಡರು. ಪ್ಲೇಆಫ್ ರೇಸ್‌ನಲ್ಲಿ ಮುನ್ನಡೆಯಲು ಈ ಪಂದ್ಯ ಸಿಎಸ್‌ಕೆಗೆ ತುಂಬಾ ಮುಖ್ಯವಾಗಿತ್ತು. ಆದರೆ, ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈಗೆ ಆರಂಭದಲ್ಲೇ ಅದೃಷ್ಟ ಕೈಕೊಟ್ಟಿತು. ಕ್ಯಾಪ್ಟನ್ ಋತುರಾಜ್ ಗಾಯಕ್ವಾಡ್, ಸಂಜು ಸ್ಯಾಮ್ಸನ್ ಮತ್ತು ಕಳೆದ ಮ್ಯಾಚ್‌ನ ಹೀರೋ ಆಗಿದ್ದ ಉರ್ವಿಲ್ ಪಟೇಲ್ (ಕೇವಲ 6 ರನ್) ಪೆವಿಲಿಯನ್ ಸೇರಿಕೊಂಡರು. ಲಖನೌ ಬೌಲರ್ ಆಕಾಶ್ ಸಿಂಗ್ ತಮ್ಮ ಕಟಕಿಂಗ್ ಬೌಲಿಂಗ್ ಮೂಲಕ ಸಿಎಸ್‌ಕೆ ಬ್ಯಾಟರ್‌ಗಳನ್ನು ನಡುಗಿಸಿದರು. ಕೇವಲ 52 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡ ಚೆನ್ನೈ ತೀವ್ರ ಸಂಕಷ್ಟಕ್ಕೆ ಸಿಲುಕಿತು.

ಕಾರ್ತಿಕ್ ಶರ್ಮಾ-ಶಿವಂ ದುಬೆ ಜವಾಬ್ದಾರಿಯುತ ಆಟ

ಮೂರು ಪ್ರಮುಖ ವಿಕೆಟ್ ಉರುಳಿದಾಗ ಕ್ರೀಸ್‌ಗೆ ಬಂದ ಯುವ ಆಟಗಾರ ಕಾರ್ತಿಕ್ ಶರ್ಮಾ ಪಂದ್ಯದ ಚಿತ್ರಣವನ್ನೇ ಬದಲಾಯಿಸಿದರು. ಲಖನೌ ಬೌಲರ್‌ಗಳನ್ನು ಸಿಕ್ಸರ್, ಬೌಂಡರಿಗಳ ಮೂಲಕ ಚಚ್ಚಿದ ಕಾರ್ತಿಕ್ ಕೇವಲ 35 ಎಸೆತಗಳಲ್ಲಿ ಹಾಫ್ ಸೆಂಚುರಿ ಪೂರೈಸಿದರು. ಅದರಲ್ಲೂ ಮೊಹಮ್ಮದ್ ಶಮಿ ಎಸೆದ 14ನೇ ಓವರ್‌ನಲ್ಲಿ ಅವರು ಹೊಡೆದ ಸಿಕ್ಸರ್ ಸಖತ್ ಹೈಲೈಟ್ ಆಗಿತ್ತು. ಒಟ್ಟು 42 ಎಸೆತ ಎದುರಿಸಿದ ಕಾರ್ತಿಕ್ 71 ರನ್ ಬಾರಿಸಿ ಔಟಾದರು.

ಕೊನೆಯ ಓವರ್‌ಗಳಲ್ಲಿ ಡೇವಾಲ್ಡ್ ಬ್ರೇವಿಸ್ (25) ಮತ್ತು ಸಿಕ್ಸರ್ ಕಿಂಗ್ ಶಿವಂ ದುಬೆ (16 ಎಸೆತಗಳಲ್ಲಿ 32*) ಅಬ್ಬರಿಸಿದ್ದರಿಂದ, ಚೆನ್ನೈ ತಂಡ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 187 ರನ್‌ಗಳ ಗೌರವಾನ್ವಿತ ಮತ್ತು ಸವಾಲಿನ ಮೊತ್ತ ಕಲೆಹಾಕಿತು. ಲಖನೌ ಪರ ಆಕಾಶ್ ಸಿಂಗ್ 26 ರನ್ ನೀಡಿ 3 ವಿಕೆಟ್ ಕಿತ್ತರು.

ಮಿಚೆಲ್ ಮಾರ್ಷ್ ಬಿರುಗಾಳಿ ಬ್ಯಾಟಿಂಗ್; ಪಂದ್ಯ ಫಿನಿಶ್!

188 ರನ್‌ಗಳ ಬಿಗ್ ಟಾರ್ಗೆಟ್ ಬೆನ್ನಟ್ಟಿದ ಲಖನೌ ತಂಡಕ್ಕೆ ಮಿಚೆಲ್ ಮಾರ್ಷ್ ಸಿಡಿಲಬ್ಬರದ ಆರಂಭ ಒದಗಿಸಿದರು. ಪವರ್‌ಪ್ಲೇನಲ್ಲೇ ಚೆನ್ನೈ ಬೌಲರ್‌ಗಳ ಲೈನ್‌ ಅಂಡ್ ಲೆಂಗ್ತ್ ಕೆಡಿಸಿದ ಮಾರ್ಷ್, ಮೈದಾನದ ಮೂಲೆ ಮೂಲೆಗೂ ಚೆಂಡನ್ನು ಅಟ್ಟಿದರು. ಕೇವಲ 38 ಎಸೆತಗಳನ್ನು ಎದುರಿಸಿದ ಅವರು 9 ಬೌಂಡರಿ ಹಾಗೂ 7 ಭೀಕರ ಸಿಕ್ಸರ್‌ಗಳ ನೆರವಿನಿಂದ ಭರ್ಜರಿ 90 ರನ್ ಚಚ್ಚಿದರು. ಜೋಶ್ ಇಂಗ್ಲಿಸ್ (36) ಜೊತೆಗೂಡಿ ಮೊದಲ ವಿಕೆಟ್‌ಗೆ ಇವರು ಹಾಕಿಕೊಟ್ಟ ಪ್ಲಾಟ್‌ಫಾರ್ಮ್ ಲಖನೌ ಗೆಲುವನ್ನು ಸುಲಭವಾಗಿಸಿತು.

ಮಾರ್ಷ್ ಔಟಾದ ಮೇಲೂ ಲಖನೌ ರನ್ ವೇಗ ಕಡಿಮೆ ಆಗಲಿಲ್ಲ. ಕೊನೆಯಲ್ಲಿ ಬಂದ ನಿಕೋಲಸ್ ಪೂರನ್ ಕೇವಲ 17 ಎಸೆತಗಳಲ್ಲಿ 32 ರನ್ ಬಾರಿಸಿ ಇನ್ನೂ 20 ಎಸೆತಗಳು ಬಾಕಿ ಇರುವಂತೆಯೇ ತಂಡವನ್ನು ಗೆಲುವಿನ ದಡ ಸೇರಿಸಿದರು. ಲಖನೌ 16.4 ಓವರ್‌ಗಳಲ್ಲೇ 3 ವಿಕೆಟ್ ನಷ್ಟಕ್ಕೆ 188 ರನ್ ಬಾರಿಸಿ 7 ವಿಕೆಟ್‌ಗಳಿಂದ ಜಯಭೇರಿ ಬಾರಿಸಿತು.

ಸಿಎಸ್‌ಕೆಗೆ ಮುಂದಿನ ದಾರಿ ಕಷ್ಟ; ಲಖನೌಗೆ 4ನೇ ಸ್ಥಾನ!

ಈ ರೋಮಾಂಚಕ ಗೆಲುವಿನೊಂದಿಗೆ ಲಖನೌ ಸೂಪರ್ ಜಯಂಟ್ಸ್ ಅಂಕಪಟ್ಟಿಯಲ್ಲಿ ಭರ್ಜರಿಯಾಗಿ 4ನೇ ಸ್ಥಾನಕ್ಕೇರಿದೆ. ಆದರೆ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಮಾತ್ರ ಇದು ದೊಡ್ಡ ಸೆಟ್‌ಬ್ಯಾಕ್. ಧೋನಿ ಅಭಿಮಾನಿಗಳಿಗೆ ಮತ್ತು ಸಿಎಸ್‌ಕೆ ಮ್ಯಾನೇಜ್‌ಮೆಂಟ್‌ಗೆ ಈಗ ಪ್ಲೇಆಫ್ ಟೆನ್ಷನ್ ಶುರುವಾಗಿದೆ. ಚೆನ್ನೈ ಮುಂದಿನ ಹಂತಕ್ಕೆ ಹೋಗಬೇಕೆಂದರೆ ತನ್ನ ಮುಂದಿನ ಎರಡೂ ಪಂದ್ಯಗಳಲ್ಲಿ ಕಡ್ಡಾಯವಾಗಿ ಗೆಲ್ಲಲೇಬೇಕಾದ ‘ಡು ಆರ್ ಡೈ’ ಪರಿಸ್ಥಿತಿಯಲ್ಲಿದೆ. ಇನ್ನುಳಿದ ಪಂದ್ಯಗಳಲ್ಲಿ ಸಿಎಸ್‌ಕೆ ಕಂಬ್ಯಾಕ್ ಮಾಡುತ್ತಾ ಅಂತ ಕಾದು ನೋಡಬೇಕು! 

Latest News