ಕನ್ನಡ ಸೂಪರ್‌ಸ್ಟಾರ್ ಯಶ್ ಅವರಿಗೆ ಆದಾಯ ತೆರಿಗೆ (ಐಟಿ) ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್‌ನಿಂದ ಮಹತ್ವದ ನಿರಾಳತೆ ದೊರೆತಿದೆ. ನ್ಯಾಯಮೂರ್ತಿ ಎಸ್.ಆರ್. ಕೃಷ್ಣಕುಮಾರ್ ಅವರ ಅಧ್ಯಕ್ಷತೆಯಲ್ಲಿದ್ದ ಹೈಕೋರ್ಟ್ ಪೀಠವು, 2013-14ರಿಂದ 2018-19ರವರೆಗಿನ ಮೌಲ್ಯಮಾಪನ ವರ್ಷಗಳಿಗೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆಯು ನಟನಿಗೆ ನೀಡಿದ್ದ ನೋಟಿಸ್ ಅನ್ನು ಇಂದು ರದ್ದುಪಡಿಸುವ ಆದೇಶ ಹೊರಡಿಸಿದೆ. ಈ ಪ್ರಕರಣವು ಹೊಂಬಾಳೆ ಕನ್‌ಸ್ಟ್ರಕ್ಷನ್‌ಸ್‌ಗೆ ಸಂಬಂಧಿಸಿದಂತೆ ಐಟಿ ಇಲಾಖೆಯು ನಡೆಸಿದ ತನಿಖೆಗೆ ಸಂಬಂಧಿಸಿದೆ.
ಐಟಿ ತನಿಖೆಯ ವಿವರಗಳು
ಆದಾಯ ತೆರಿಗೆ ಇಲಾಖೆಯ ತನಿಖೆ ಹಲವು ತಿಂಗಳುಗಳ ಕಾಲ ಮುಂದುವರಿಯಿತು. ಈ ಅವಧಿಯಲ್ಲಿ ನಟ ಯಶ್ ಅವರ ನಿವಾಸವಾದ ಹೊಸಕೆರೆಹಳ್ಳಿಯ ಮನೆಯಲ್ಲಿ ಹಾಗೂ ಅವರು ಬಾಡಿಗೆಗೆ ತೆಗೆದುಕೊಂಡು ತಂಗಿದ್ದ ಪ್ರಸಿದ್ಧ ತಾಜ್ ವೆಸ್ಟ್ ಎಂಡ್ ಹೋಟೆಲ್‌ನ ಕೊಠಡಿಯಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಯಿತು. ಶೋಧ ಕಾರ್ಯಾಚರಣೆ ಬಳಿಕ, 2021ರಲ್ಲಿ ಐಟಿ ಇಲಾಖೆ 2013-14ರಿಂದ 2018-19ರವರೆಗಿನ ಆರು ವರ್ಷಗಳ ಆದಾಯಕ್ಕೆ ಸಂಬಂಧಿಸಿದಂತೆ ಯಶ್ ಅವರಿಗೆ ನೋಟಿಸ್ ನೀಡಿತ್ತು.
ಹೈಕೋರ್ಟ್ ನೋಟಿಸ್ ರದ್ದುಪಡಿಸಿದ ತೀರ್ಪು
ಯಶ್ ಅವರು ಈ ನೋಟಿಸ್‌ನ ಮಾನ್ಯತೆಯನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ನಟನ ಪರ ವಕೀಲರ ತಂಡ ಹಾಗೂ ಐಟಿ ಇಲಾಖೆಯ ವಾದ-ಪ್ರತಿವಾದಗಳನ್ನು ಆಲಿಸಿದ ನಂತರ, ಹೈಕೋರ್ಟ್ ಪೀಠವು ತೀರ್ಪು ನೀಡಿತು. ನ್ಯಾಯಮೂರ್ತಿ ಎಸ್.ಆರ್. ಕೃಷ್ಣಕುಮಾರ್ ಅವರ ಪೀಠವು ನೋಟಿಸ್ ರದ್ದುಪಡಿಸಲು ಕಾರಣಗಳನ್ನು ಕಂಡುಹಿಡಿದು, ನಟನಿಗೆ ಜಯ ತಂದು ಕೊಟ್ಟಿದ್ದಾರೆ ಎಂದು ಕೇಳಿ ಬಂದಿದೆ. ಇದರಿಂದ ಆ ಅವಧಿಗೆ ಸಂಬಂಧಿಸಿದ ದೀರ್ಘಕಾಲದ ತೆರಿಗೆ ವಿವಾದಕ್ಕೆ ತೆರೆ ಬಿದ್ದಿದೆ.