ಪ್ರೇಮಿಯೊಂದಿಗೆ ತೆರಳಿದ ಮಗಳು – ಪೋಷಕರ ಕಣ್ಣೀರು!!

ಹೆತ್ತು ಹೊತ್ತು ಸಲಹಿದ ತಂದೆ-ತಾಯಿ ಒಂದು ಕಡೆ, ಪ್ರೀತಿಸಿದ ಹುಡುಗ ಇನ್ನೊಂದು ಕಡೆ. ಕೊನೆಗೆ ಆ ಯುವತಿ ಆರಿಸಿಕೊಂಡಿದ್ದು ಪ್ರೇಮಿಯನ್ನೇ. ಮಗಳಿಗಾಗಿ ಪೊಲೀಸ್ ಠಾಣೆಯ ಮುಂದೆ ತಂದೆ-ತಾಯಿ ರಾತ್ರಿಯಿಡೀ ಕಣ್ಣೀರು ಹಾಕಿದ ದಾರುಣ ಘಟನೆ ವಿಜಯಪುರದ ಗಾಂಧಿಚೌಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ವಿಜಯಪುರ ಜಿಲ್ಲೆಯ ನಿಶಾ ಚೌಹಾಣ್ ಕಳೆದ ಫೆಬ್ರವರಿ 4 ರಂದು ಮನೆಯಿಂದ ನಾಪತ್ತೆಯಾಗಿದ್ದಳು. ಗಾಬರಿಗೊಂಡ ಪೋಷಕರು ಮಗಳು ಕಾಣೆಯಾಗಿದ್ದಾಳೆ ಎಂದು ಪೊಲೀಸರಿಗೆ ದೂರು ನೀಡಿದ್ದರು. ಆದರೆ, ಕೆಲವು ದಿನಗಳ ಬಳಿಕ ನಿಶಾ ತಾನು ಪ್ರೀತಿಸಿದ ಮೊಹಮದ್ ಸಲಿಂ ಸುತಾರ್ ಎಂಬುವವನನ್ನು ಮದುವೆಯಾಗಿ ಪೊಲೀಸ್ ಠಾಣೆಗೆ ಪ್ರತ್ಯಕ್ಷವಾಗಿದ್ದಾಳೆ.

ಪ್ರೀತಿ ವಿರುದ್ಧ ಕುಟುಂಬ – ವಿಜಯಪುರದಲ್ಲಿ ಚರ್ಚೆಗೆ ಕಾರಣವಾದ ಘಟನೆ
ಪ್ರೀತಿ ವಿರುದ್ಧ ಕುಟುಂಬ – ವಿಜಯಪುರದಲ್ಲಿ ಚರ್ಚೆಗೆ ಕಾರಣವಾದ ಘಟನೆ

ಮಗಳು ಠಾಣೆಗೆ ಬಂದಿದ್ದಾಳೆ ಎಂಬ ವಿಷಯ ತಿಳಿದು ತಂದೆ ಪಂಡಿತ್ ಚೌಹಾಣ್ ಹಾಗೂ ತಾಯಿ ಶಾನುಭಾಯಿ ಓಡೋಡಿ ಬಂದಿದ್ದಾರೆ. "ಮಗಳೇ ಮನೆಗೆ ಬಾ, ನಮ್ಮನ್ನು ಬಿಟ್ಟು ಹೋಗಬೇಡ" ಎಂದು ಕಾಡಿ ಬೇಡಿಕೊಂಡಿದ್ದಾರೆ. ಆದರೆ, ಮಗಳು ಮಾತ್ರ ಪಟ್ಟು ಬಿಡಲಿಲ್ಲ. "ನಾನು ನನ್ನ ಗಂಡನ ಜೊತೆಗೇ ಹೋಗುತ್ತೇನೆ, ನಿಮ್ಮ ಜೊತೆ ಬರಲ್ಲ" ಎಂದು ಕಡಾಖಂಡಿತವಾಗಿ ಹೇಳಿದ್ದಾಳೆ. ಪೊಲೀಸರು ಸುರಕ್ಷತೆಯ ದೃಷ್ಟಿಯಿಂದ ಯುವತಿಯನ್ನು ವಾಹನದಲ್ಲಿ ಕರೆದುಕೊಂಡು ಹೋಗಲು ಮುಂದಾದಾಗ, ಆಕೆಯ ತಾಯಿ ಪುಟ್ಟ ಮಗುವಿನಂತೆ ರಸ್ತೆಯಲ್ಲೇ ಹಲುಬಿದ್ದಾರೆ. ಚಲಿಸುತ್ತಿದ್ದ ಪೊಲೀಸ್ ವಾಹನಕ್ಕೆ ನಡುರಸ್ತೆಯಲ್ಲೇ ಅಡ್ಡಬಿದ್ದು ಮಗಳನ್ನು ತಡೆಹಿಡಿಯಲು ಪ್ರಯತ್ನಿಸಿದ್ದಾರೆ. ಆದರೆ, ಆ ಕ್ಷಣದಲ್ಲಿ ಮಗಳಿಗೆ ಹೆತ್ತವರ ಕಣ್ಣೀರು ಕಾಣಲೇ ಇಲ್ಲ. ತಾಯಿಯ ಮುಖವನ್ನೂ ನೋಡದೆ ಆಕೆ ಅಲ್ಲಿಂದ ಹೊರಟುಹೋಗಿದ್ದಾಳೆ.

ಮಗಳು ತಮ್ಮ ಕೈಗೆ ಸಿಗಲಿಲ್ಲ ಎಂಬ ಆಘಾತದಲ್ಲಿ ತಂದೆ-ತಾಯಿ ತಡರಾತ್ರಿಯವರೆಗೂ ಗಾಂಧಿಚೌಕ್ ಪೊಲೀಸ್ ಠಾಣೆಯ ಹೊರಭಾಗದಲ್ಲೇ ಕುಳಿತು ಕಣ್ಣೀರು ಹಾಕಿದ್ದಾರೆ. ಹೆತ್ತವರ ಆಕ್ರಂದನ ಕಂಡು ದಾರಿಯಲ್ಲಿ ಹೋಗುವವರ ಕಣ್ಣಾಲಿಗಳು ಕೂಡ ಒದ್ದೆಯಾಗಿದ್ದವು. ಶಾನುಭಾಯಿ ಮತ್ತು ಪಂಡಿತ್ ಚೌಹಾಣ್ ದಂಪತಿಯ ಈ ಸ್ಥಿತಿ ನೋಡುಗರ ಮನ ಕರಗಿಸುವಂತಿತ್ತು. ಪ್ರೀತಿ ಮತ್ತು ಕುಟುಂಬದ ನಡುವಿನ ಈ ಸಂಘರ್ಷ ಈಗ ವಿಜಯಪುರದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ. ಮಗಳಿಗಾಗಿ ರಾತ್ರಿಯಿಡೀ ಕಾದು ಕುಳಿತ ಆ ಪೋಷಕರ ಕಣ್ಣೀರಿಗೆ ಮಾತ್ರ ಇನ್ನೂ ಉತ್ತರ ಸಿಕ್ಕಿಲ್ಲ.

Latest News