ಹರಿಯಾಣದ ಪಾಣಿಪತ್ ಜಿಲ್ಲೆಯಲ್ಲಿ ನಡೆದ ಭೀಕರ ಘಟನೆ ದೇಶವನ್ನೇ ಬೆಚ್ಚಿಬೀಳಿಸಿದೆ. ತನ್ನ ಸ್ವಂತ ಮಗ ಸೇರಿ ನಾಲ್ಕು ಮಕ್ಕಳ ಜೀವವನ್ನು ಕಸಿದುಕೊಂಡ ಮಹಿಳೆ ಪೊಲೀಸರ ಬಲೆಗೆ ಸಿಕ್ಕಿದ್ದಾಳೆ. ತನಗಿಂತ ಸುಂದರವಾಗಿದ್ದಾರೆಂದು ಮಕ್ಕಳ ಮೇಲೆ ದ್ವೇಷ ಬೆಳೆಸಿಕೊಂಡ ಈಕೆ, ನಿರ್ದಯವಾಗಿ ನೀರಿನಲ್ಲಿ ಮುಳುಗಿಸಿ ಕೊಲೆಗೈದಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಮೊದಲಿಗೆ ಅಕ್ಕನ ಮಗಳಾದ ಆರು ವರ್ಷದ ಬಾಲಕಿ ನಾಪತ್ತೆಯಾಗಿದ್ದ ಪ್ರಕರಣದಲ್ಲಿ ಪೊಲೀಸರು ತನಿಖೆ ಆರಂಭಿಸಿದರು. ಹುಡುಕಾಟದ ವೇಳೆ ಬಾಲಕಿಯ ಶವ ನೀರಿನ ತೊಟ್ಟಿಯಲ್ಲಿ ಪತ್ತೆಯಾದಾಗ ಶಂಕೆ ಗಾಢವಾಯಿತು. ವಿಚಾರಣೆ ವೇಳೆ ಬಾಲಕಿಯ ಚಿಕ್ಕಮ್ಮನ ವರ್ತನೆ ಅನುಮಾನಾಸ್ಪದವಾಗಿದ್ದರಿಂದ ಪೊಲೀಸರು ಆಕೆಯನ್ನು ಬಂಧಿಸಿದರು. ವಿಚಾರಣೆ ವೇಳೆ ಆಕೆ ಬಾಯಿ ಬಿಟ್ಟಿದ್ದು, ತನ್ನದೇ ಕೈಯಿಂದ ಬಾಲಕಿಯನ್ನ ಕೊಂದಿರುವುದಾಗಿ ಒಪ್ಪಿಕೊಂಡಳು.
ಇಷ್ಟರಲ್ಲೇ ಆಘಾತಕಾರಿ ಮತ್ತೊಂದು ಸಂಗತಿ ಹೊರಬಂದಿತು. ಮಹಿಳೆ ತನ್ನ ಸ್ವಂತ ಮಗ ಸೇರಿ ಇನ್ನೂ ಮೂವರು ಮಕ್ಕಳನ್ನ ಕೊಂದಿರುವುದಾಗಿ ಪೊಲೀಸರಿಗೆ ಹೇಳಿಕೊಂಡಳು. 2023ರಲ್ಲಿ ಸೋನಿಪತ್‌ನಲ್ಲಿ ಇಬ್ಬರು ಮಕ್ಕಳನ್ನ ನೀರಿನ ಟ್ಯಾಂಕ್‌ನಲ್ಲಿ ಮುಳುಗಿಸಿ ಕೊಂದಿದ್ದಳು. ಕಳೆದ ಆಗಸ್ಟ್‌ನಲ್ಲಿ ಸೇವಾ ಗ್ರಾಮದಲ್ಲಿ ಮತ್ತೊಬ್ಬ ಮಗುವಿನ ಜೀವವನ್ನೂ ಕಸಿದುಕೊಂಡಿದ್ದಾಳೆ. ಈವರೆಗೂ ಯಾವುದೇ FIR ದಾಖಲಾಗದಿದ್ದರೂ, ಈಗ ಎಲ್ಲ ಪ್ರಕರಣಗಳು ಬೆಳಕಿಗೆ ಬಂದಿವೆ.
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಮಹಿಳೆ ಮಕ್ಕಳ ಸೌಂದರ್ಯವನ್ನು ಸಹಿಸಲಾಗದೆ ದ್ವೇಷದಿಂದ ಕೊಲೆಗೈದಿದ್ದಾಳೆ. ಕೊಲೆ ಮಾಡಿದ ನಂತರ ಏನೂ ಗೊತ್ತಿಲ್ಲದಂತೆ ಮನೆಯಲ್ಲೇ ಇದ್ದು, ತನ್ನ ಅಪರಾಧವನ್ನು ಮರೆಮಾಚಲು ಪ್ರಯತ್ನಿಸಿದ್ದಳು. ಆದರೆ ಶಂಕೆಯಿಂದ ವಿಚಾರಣೆ ನಡೆಸಿದಾಗ ಆಕೆಯ ಕ್ರೂರ ಸತ್ಯ ಬಯಲಾಗಿತು.
ಮೂವರನ್ನ ಕೊಂದ ಈಕೆ, ತನ್ನ ಸ್ವಂತ ಮಗನನ್ನೂ ಕೊಂದಿರುವುದರಿಂದ ಪೊಲೀಸರು ಆಕೆಯನ್ನು ‘ಸೈಕೋ ಕಿಲ್ಲರ್’ ಎಂದು ಕರೆಯುತ್ತಿದ್ದಾರೆ. ಮಕ್ಕಳ ನಿರ್ದಯ ಕೊಲೆ ಪ್ರಕರಣದಲ್ಲಿ ಮಹಿಳೆ ವಿರುದ್ಧ ಈಗ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ಪಾಣಿಪತ್ ಹಾಗೂ ಸೋನಿಪತ್ ಜಿಲ್ಲೆಗಳಲ್ಲಿ ನಡೆದ ಈ ಘಟನೆಗಳು ಸಮಾಜವನ್ನು ಬೆಚ್ಚಿಬೀಳಿಸುವಂತಿವೆ. ಮಾನವೀಯತೆ ಮರೆತು, ದ್ವೇಷದಿಂದ ಮಕ್ಕಳ ಜೀವವನ್ನೇ ಕಸಿದುಕೊಂಡ ಈಕೆ, ಕೊನೆಗೂ ಪೊಲೀಸರ ಬಲೆಗೆ ಸಿಕ್ಕಿದ್ದಾಳೆ.