ನಂಬಿಕೆಗೆ ಸಿಕ್ಕಿದ ಕ್ರೂರ ಕೊ*ಲೆ - ಗಲ್ಫ್‌ನಿಂದ ಮರಳಿದ ಪತಿಯನ್ನು ಕೊಂದು ಹಾಕಿದ ಪತ್ನಿ!!

ತೆಲಂಗಾಣದ ನಿಜಾಮಾಬಾದ್ ನಿವಾಸಿಯಾದ ಪ್ರಶಾಂತ್ ಒಬ್ಬ ಪ್ರಾಮಾಣಿಕ ಮತ್ತು ಕಷ್ಟಜೀವಿ. ತನ್ನ ಕುಟುಂಬಕ್ಕೆ ಉತ್ತಮ ಜೀವನ ಹಾಗೂ ಆರ್ಥಿಕ ಭದ್ರತೆ ಒದಗಿಸುವ ಏಕೈಕ ಉದ್ದೇಶದಿಂದ ಅವರು ಗಲ್ಫ್ ದೇಶಕ್ಕೆ ತೆರಳಿ ಕಠಿಣ ಪರಿಶ್ರಮ ಪಡುತ್ತಿದ್ದರು. ಅಲ್ಲಿ ತಾವು ಅನುಭವಿಸುವ ಕಷ್ಟಗಳನ್ನೆಲ್ಲ ಮರೆತು, ಗಳಿಸಿದ ಹಣವನ್ನೆಲ್ಲ ಭಾರತದಲ್ಲಿದ್ದ ಪತ್ನಿ ಸಂಧ್ಯಾಳಿಗೆ ಕಳುಹಿಸಿಕೊಡುತ್ತಿದ್ದರು. ಆದರೆ, ಪತಿಯ ಈ ತ್ಯಾಗ ಮತ್ತು ಕಷ್ಟದ ದುಡಿಮೆಯ ಬೆಲೆ ಸಂಧ್ಯಾಳಿಗೆ ಅರ್ಥವಾಗಲಿಲ್ಲ. ಪತಿ ದೂರದ ಊರಿನಲ್ಲಿದ್ದ ಸಮಯದಲ್ಲಿ ಸಂಧ್ಯಾ, ಅನಿಲ್ ಎಂಬಾತನೊಂದಿಗೆ ಆಪ್ತ ಸಂಪರ್ಕ ಬೆಳೆಸಿಕೊಂಡಿದ್ದಳು. ದಿನಕಳೆದಂತೆ ಇವರ ಸಂಬಂಧ ಗಾಢವಾಗುತ್ತಾ ಹೋಯಿತು.

ತೆಲಂಗಾಣದಲ್ಲಿ ಬೆಚ್ಚಿಬೀಳಿಸುವ ಕ್ರೂರ ಕೃತ್ಯ
ತೆಲಂಗಾಣದಲ್ಲಿ ಬೆಚ್ಚಿಬೀಳಿಸುವ ಕ್ರೂರ ಕೃತ್ಯ

ಕೆಲ ದಿನಗಳ ಹಿಂದೆ ಪ್ರಶಾಂತ್ ರಜೆಯ ಮೇರೆಗೆ ಗಲ್ಫ್ ದೇಶದಿಂದ ಹೆಮ್ಮೆಯಿಂದ ಹೆಂಡತಿಯನ್ನು ನೋಡಲು ಸ್ವಗ್ರಾಮಕ್ಕೆ ಮರಳಿದ್ದರು. ಆದರೆ, ತಾನು ಪ್ರೀತಿಯಿಂದ ಮನೆಗೆ ಮರಳಿದ ಪತಿಯೇ ತನಗೆ ಮತ್ತು ತನ್ನ ಪ್ರಿಯಕರನಿಗೆ ಅಡ್ಡಿಯಾಗುತ್ತಾನೆ ಎಂದು ಸಂಧ್ಯಾ ಭಾವಿಸಿದಳು. ತನ್ನ ಅನೈತಿಕ ಹಾದಿಗೆ ಮುಳ್ಳಾಗಿದ್ದ ಪತಿಯನ್ನು ಶಾಶ್ವತವಾಗಿ ಈ ಲೋಕದಿಂದಲೇ ಇಲ್ಲವಾಗಿಸಲು ಅವಳು ತನ್ನ ಪ್ರಿಯಕರ ಅನಿಲ್ ಹಾಗೂ ಆತನ ಸ್ನೇಹಿತ ವೆಂಕಟ್ ಸಾಯ್ ಜೊತೆಗೂಡಿ ಸ್ಕೆಚ್ ಹಾಕಿದಳು.

ಮೊದಲ ಯತ್ನ ವಿಫಲ, ಎರಡನೇ ಹಂತದಲ್ಲಿ ನರ್ಸ್ ಬುದ್ಧಿ

ಯೋಜನೆಯ ಪ್ರಕಾರ, ಜೂನ್ 29 ರಂದು ಸಂಧ್ಯಾ ಮತ್ತು ಆಕೆಯ ಪ್ರಿಯಕರ ಪ್ರಶಾಂತ್‌ಗೆ ಅತಿಯಾಗಿ ಮದ್ಯಪಾನ ಮಾಡಿಸಿದರು. ಆತ ಪ್ರಜ್ಞೆ ಕಳೆದುಕೊಳ್ಳುತ್ತಿದ್ದಂತೆ, ಮನೆಯ ಮಹಡಿಯ ಮೇಲಿಂದ ಕೆಳಗೆ ನೂಕಿದರು. ಮೇಲಿಂದ ಬಿದ್ದ ತಕ್ಷಣ ಆತನ ಪ್ರಾಣಪಕ್ಷಿ ಹಾರಿಹೋಗುತ್ತದೆ ಎಂದು ಅವರು ಭಾವಿಸಿದ್ದರು. ಆದರೆ, ಪ್ರಶಾಂತ್ ತೀವ್ರ ಗಾಯಗಳೊಂದಿಗೆ ಬದುಕುಳಿದರು. ತಕ್ಷಣ ಆಕೆಯೇ ಮುಗ್ಧಳಂತೆ ನಟಿಸಿ, ಗಾಯಗೊಂಡಿದ್ದ ಪತಿಯನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದಳು.

ಆಸ್ಪತ್ರೆಯಲ್ಲಿ ಪ್ರಶಾಂತ್‌ಗೆ ಚಿಕಿತ್ಸೆ ಮುಂದುವರಿದಿತ್ತು. ಮೊದಲ ಪ್ರಯತ್ನ ವಿಫಲವಾದರೂ ಸಂಧ್ಯಾ ತನ್ನ ಹಠ ಬಿಡಲಿಲ್ಲ. ಆಸ್ಪತ್ರೆಯಲ್ಲೇ ಪತಿಯನ್ನು ಮುಗಿಸಲು ನಿರ್ಧರಿಸಿದಳು. ಅವಳು ವೃತ್ತಿಯಿಂದ ನರ್ಸ್ ಆಗಿದ್ದರಿಂದ ವೈದ್ಯಕೀಯ ಉಪಕರಣಗಳು ಮತ್ತು ಔಷಧಿಗಳ ಬಳಕೆ ಅವಳಿಗೆ ಚೆನ್ನಾಗಿ ಗೊತ್ತಿತ್ತು. ಅಂದೇ ರಾತ್ರಿ, ಯಾರೂ ಇಲ್ಲದ ಸಮಯ ಸಾಧಿಸಿ, ತಾನು ಮುಂಚಿತವಾಗಿ ಸಿದ್ಧಪಡಿಸಿಕೊಂಡಿದ್ದ ನಿದ್ರೆ ಮಾತ್ರೆಗಳು ಮತ್ತು ಶೌಚಾಲಯ ಸ್ವಚ್ಛಗೊಳಿಸುವ ಕೆಮಿಕಲ್ ಮಿಶ್ರಣವನ್ನು ಪ್ರಶಾಂತ್‌ಗೆ ಅಳವಡಿಸಲಾಗಿದ್ದ ಐವಿ ಕ್ಯಾನುಲಾ (IV Cannula) ಮೂಲಕ ದೇಹಕ್ಕೆ ಇಂಜೆಕ್ಟ್ ಮಾಡಿದಳು. ರಾಸಾಯನಿಕ ಮಿಶ್ರಣವು ನೇರವಾಗಿ ರಕ್ತನಾಳಕ್ಕೆ ಸೇರಿದ ಕೆಲವೇ ಕ್ಷಣಗಳಲ್ಲಿ ಪ್ರಶಾಂತ್ ಕೊನೆಯುಸಿರೆಳೆದರು.

ಸುಳ್ಳು ಕಥೆ ಮತ್ತು ತಾಯಿಯ ಅನುಮಾನ

ಪತಿ ಮೃತಪಟ್ಟ ತಕ್ಷಣ, ಸಂಧ್ಯಾ ಮತ್ತು ಆಕೆಯ ಸಹಚರರು ಇದೊಂದು ಸಾಮಾನ್ಯ ಅಪಘಾತ ಎಂದು ಬಿಂಬಿಸಲು ಯತ್ನಿಸಿದರು. ಪ್ರಶಾಂತ್ ಆಸ್ಪತ್ರೆಯ ಮಂಚದಿಂದ ಆಕಸ್ಮಿಕವಾಗಿ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ ಎಂಬ ಸುಳ್ಳು ಕಥೆಯನ್ನು ಸೃಷ್ಟಿಸಿ ಎಲ್ಲರನ್ನೂ ನಂಬಿಸಲು ಹವಣಿಸಿದರು. ಆದರೆ, ಮಗನ ಸಾವಿನ ಸುದ್ದಿ ಕೇಳಿ ಧಾವಿಸಿ ಬಂದ ಪ್ರಶಾಂತ್ ತಾಯಿಗೆ ಸೊಸೆಯ ನಡವಳಿಕೆ ಮತ್ತು ಆಕೆ ಹೇಳುತ್ತಿದ್ದ ಕಥೆಯಲ್ಲಿ ಹಲವಾರು ಗೊಂದಲಗಳು ಹಾಗೂ ಅಸಮಂಜಸತೆಗಳು ಕಂಡುಬಂದವು.

ಮಂಚದಿಂದ ಬಿದ್ದ ತಕ್ಷಣ ಮಗ ಹೇಗೆ ಮೃತಪಡಲು ಸಾಧ್ಯ ಎಂಬ ಬಲವಾದ ಅನುಮಾನ ಅವರಲ್ಲಿ ಮೂಡಿತು. ತಕ್ಷಣವೇ ಅವರು ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿ ಸೊಸೆಯ ವಿರುದ್ಧ ದೂರು ದಾಖಲಿಸಿದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದಾಗ ಸತ್ಯಾಂಶ ಹೊರಬರಲು ತಡವಾಗಲಿಲ್ಲ.

ವೈದ್ಯಕೀಯ ವರದಿ ಬಿಚ್ಚಿಟ್ಟ ರಹಸ್ಯ

ದೂರಿನ ಆಧಾರದ ಮೇಲೆ ಪೊಲೀಸರು ಪ್ರಶಾಂತ್ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದರು. ವೈದ್ಯಕೀಯ ವರದಿಯು ಪೊಲೀಸರಿಗೆ ಮಹತ್ವದ ಸುಳಿವು ನೀಡಿತು. ಪ್ರಶಾಂತ್ ಅವರ ದೇಹದಲ್ಲಿ ವಿಷಕಾರಿ ರಾಸಾಯನಿಕ ಅಂಶಗಳು ಪತ್ತೆಯಾದವು. ಮಂಚದಿಂದ ಬಿದ್ದಿದ್ದರಿಂದ ಸಾವು ಸಂಭವಿಸಿಲ್ಲ, ಬದಲಿಗೆ ದೇಹಕ್ಕೆ ವಿಷಕಾರಿ ದ್ರಾವಣ ಸೇರಿದ ಹಿನ್ನೆಲೆಯಲ್ಲಿ ಸಾವು ಸಂಭವಿಸಿದೆ ಎಂದು ವೈದ್ಯರು ಸ್ಪಷ್ಟಪಡಿಸಿದರು.

ಇದಾದ ಬಳಿಕ ಪೊಲೀಸರು ತಮ್ಮದೇ ಆದ ಶೈಲಿಯಲ್ಲಿ ಸಂಧ್ಯಾ, ಅನಿಲ್ ಮತ್ತು ವೆಂಕಟ್ ಸಾಯ್ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದರು. ಪೊಲೀಸರ ಸತತ ವಿಚಾರಣೆಯ ಮುಂದೆ ತತ್ತರಿಸಿದ ಆರೋಪಿಗಳು, ತಾವು ಮಾಡಿದ ಇಡೀ ಸಂಚನ್ನು ಒಪ್ಪಿಕೊಂಡರು. ತನ್ನ ವೈದ್ಯಕೀಯ ಜ್ಞಾನವನ್ನು ಬಳಸಿಕೊಂಡು ಹೆಂಡತಿಯೇ ಗಂಡನ ಪ್ರಾಣ ತೆಗೆದ ಈ ಪೈಶಾಚಿಕ ಕೃತ್ಯವನ್ನು ಕೇಳಿ ಸ್ವತಃ ಪೊಲೀಸರೇ ಬೆಚ್ಚಿಬಿದ್ದರು. ಸದ್ಯ ಪೊಲೀಸರು ಮೂವರನ್ನೂ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ನಮ್ಮ ಸಮಾಜದಲ್ಲಿ ವೈದ್ಯರು ಮತ್ತು ನರ್ಸ್‌ಗಳನ್ನು 'ನಡೆದಾಡುವ ದೇವರು' ಅಥವಾ 'ದೇವತೆಗಳು' ಎಂದು ಕರೆಯಲಾಗುತ್ತದೆ. ಜೀವನ್ಮರಣದ ಹೋರಾಟದಲ್ಲಿರುವ ರೋಗಿಗಳಿಗೆ ಮರುಜನ್ಮ ನೀಡುವ ಪವಿತ್ರ ವೃತ್ತಿ ಇವರದ್ದು. ಆದರೆ ಸಂಧ್ಯಾ ಎಂಬ ಈ ಮಹಿಳೆ, ಆ ಪವಿತ್ರ ವೃತ್ತಿಗೆ ಕಳಂಕ ತಂದಿದ್ದಾಳೆ. ತನ್ನ ವೃತ್ತಿ ಕೌಶಲ್ಯವನ್ನು ಯಾರೋ ಒಬ್ಬ ಅಪರಿಚಿತನಿಗಾಗಿ, ಪ್ರೀತಿಯಿಂದ ಸಾಕಿದ ಗಂಡನ ಪ್ರಾಣಹರಣ ಮಾಡಲು ಬಳಸಿಕೊಂಡಿದ್ದು ಅಕ್ಷಮ್ಯ ಅಪರಾಧ.

ಹಣ ಸಂಪಾದನೆಗಾಗಿ ದೂರದ ದೇಶದಲ್ಲಿ ರಕ್ತವನ್ನು ನೀರು ಮಾಡಿ ದುಡಿದ ಮುಗ್ಧ ಪತಿಗೆ ಈಕೆ ನೀಡಿದ ಬಹುಮಾನವೇನು? ಇಂತಹ ಕೃತ್ಯಗಳನ್ನು ಎಸಗುವ ನಾರಿಯರನ್ನು ದೇವತೆ ಎನ್ನಲು ಸಾಧ್ಯವೇ? ಖಂಡಿತ ಇಲ್ಲ. ಇಂತಹವರು ಸಮಾಜಕ್ಕೆ ದೊಡ್ಡ ಪಿಡುಗು. ನಂಬಿದ ಗಂಡನಿಗೆ ದ್ರೋಹ ಬಗೆದು, ವೃತ್ತಿಧರ್ಮವನ್ನೂ ಮರೆತು ಕ್ರೂರವಾಗಿ ವರ್ತಿಸಿದ ಈಕೆಗೆ ಕಾನೂನಿನಡಿ ಕಠಿಣ ಶಿಕ್ಷೆಯಾಗಬೇಕಿದೆ. ಸಮಾಜದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ತಡೆಯಲು ಇಂತಹ ಕ್ರೂರಿಗಳಿಗೆ ಕಠಿಣಾತಿಕಠಿಣ ಶಿಕ್ಷೆ ವಿಧಿಸುವುದೇ ಸೂಕ್ತ ನ್ಯಾಯ.

Latest News