ಇತ್ತೀಚೆಗೆ ತೆಲಂಗಾಣದಲ್ಲಿ ನಡೆದ ಒಂದು ಭೀಕರ ಜೀವಹಾನಿ ಪ್ರಕರಣ ಇಡೀ ಸಮಾಜವನ್ನೇ ಬೆಚ್ಚಿಬೀಳಿಸಿದೆ. ಚಾಗಂಟಿ ಪ್ರಶಾಂತಿ (40) ಎಂಬ ಮಹಿಳೆ, ಕಳೆದ 20 ವರ್ಷಗಳಿಂದ ಜೊತೆಗಿದ್ದ ತನ್ನ ಪತಿ ಚಾಗಂಟಿ ರವಿ (42) ಅವರನ್ನು ಕೇವಲ ವಿಮಾ ಹಣಕ್ಕಾಗಿ ಬಲಿ ಪಡೆದಿದ್ದಾಳೆ. ಈ ಘಟನೆ ಕೇವಲ ಒಂದು ಕ್ರಿಮಿನಲ್ ಪ್ರಕರಣವಲ್ಲ, ಬದಲಿಗೆ ಭಾರತದಲ್ಲಿ ಪುರುಷರ ಸ್ಥಿತಿ ಮತ್ತು ಕೌಟುಂಬಿಕ ಹಿಂಸಾಚಾರದ ಕರಾಳ ಮುಖವನ್ನು ಎತ್ತಿ ತೋರಿಸುತ್ತಿದೆ.
ವರದಿಯ ಪ್ರಕಾರ, ರವಿ ಕಳೆದ ಕೆಲವು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಪತಿ ಹೇಗಿದ್ದರೂ ಸಾಯುತ್ತಾರೆ ಎಂದು ಭಾವಿಸಿದ ಪ್ರಶಾಂತಿ, ಜುಲೈ 2025ರಲ್ಲಿ ತನ್ನ ಸಂಬಂಧಿ ಶ್ರೀನಿವಾಸ್ ಸಹಾಯದಿಂದ ರವಿ ಹೆಸರಿನಲ್ಲಿ ₹66 ಲಕ್ಷದ ಜೀವ ವಿಮೆಯನ್ನು ಮಾಡಿಸಿದ್ದಳು. ಆದರೆ ರವಿ ಸಾಯುವ ಬದಲು ಚೇತರಿಸಿಕೊಳ್ಳತೊಡಗಿದರು. ವಿಮೆ ಹಣ ಕೈತಪ್ಪುತ್ತದೆ ಎಂದು ತಾಳ್ಮೆ ಕಳೆದುಕೊಂಡ ಪ್ರಶಾಂತಿ, ಪತಿಯನ್ನು ಕೊ*ಲೆ ಮಾಡಲು ಸಂಚು ರೂಪಿಸಿದಳು. ಶ್ರೀನಿವಾಸ್ ಮತ್ತು ತಂಡಕ್ಕೆ ಅರ್ಧ ಹಣದ ಆಸೆ ತೋರಿಸಿ, ರವಿಗೆ ಅತಿಯಾಗಿ ಮದ್ಯ ಕುಡಿಸಿ ರಸ್ತೆಯ ಮೇಲೆ ಬಿಟ್ಟು, ಲಾರಿಯಿಂದ ಗುದ್ದಿಸಿ ಅಪಘಾತದಂತೆ ಬಿಂಬಿಸಿ ಪ್ರಾಣ ಹ*ತ್ಯೆ ಮಾಡಿಸಲಾಗಿದೆ. ಈಗ ಆರೋಪಿಗಳೆಲ್ಲಾ ಜೈಲು ಪಾಲಾಗಿದ್ದಾರೆ.
ಈ ಘಟನೆಯು ಸಮಾಜದಲ್ಲಿ ಒಂದು ಗಂಭೀರ ಪ್ರಶ್ನೆಯನ್ನು ಹುಟ್ಟುಹಾಕಿದೆ. ಭಾರತದಲ್ಲಿ ಕೇವಲ ಮಹಿಳೆಯರ ಮೇಲೆ ಮಾತ್ರ ದೌರ್ಜನ್ಯ ನಡೆಯುತ್ತಿದೆ ಎಂಬ ವಾದಗಳ ನಡುವೆ, ಪತ್ನಿಯರಿಂದಲೇ ಕೊ*ಲೆಯಾಗುತ್ತಿರುವ ಅಥವಾ ಶೋಷಣೆಗೆ ಒಳಗಾಗುತ್ತಿರುವ ಪುರುಷರ ಸಂಖ್ಯೆಯೂ ಹೆಚ್ಚುತ್ತಿದೆ. ಪ್ರಶಾಂತಿಯಂತಹವರು ಪತಿಯನ್ನು ಪೂಜಿಸುವ ದೇವತೆಯಾಗಿ ಇರಲಿ, ಕನಿಷ್ಠ ಒಬ್ಬ ಮನುಷ್ಯನಾಗಿಯೂ ನೋಡಿಲ್ಲ ಎಂಬುದು ಇಲ್ಲಿನ ಕಹಿ ಸತ್ಯ. ಹಣದ ಆಸೆಗಾಗಿ ಎರಡು ದಶಕಗಳ ಕಾಲ ಜೊತೆಗಿದ್ದ ವ್ಯಕ್ತಿಯನ್ನೇ ಇಲ್ಲವಾಗಿಸುವ ಕ್ರೌರ್ಯ ಇಂದು ಸಮಾಜದಲ್ಲಿ ಬೆಳೆಯುತ್ತಿದೆ.
ಭಾರತದಲ್ಲಿ ಕೌಟುಂಬಿಕ ಹಿಂಸಾಚಾರ ತಡೆ ಕಾಯ್ದೆ ಕೇವಲ ಮಹಿಳೆಯರ ರಕ್ಷಣೆಗಷ್ಟೇ ಸೀಮಿತವಾಗಿದೆ. ಒಬ್ಬ ಪುರುಷ ತನ್ನ ಪತ್ನಿಯಿಂದ ದೈಹಿಕ ಅಥವಾ ಮಾನಸಿಕ ಹಿಂಸೆ ಅನುಭವಿಸಿದರೆ, ಅವನು ಅದೇ ಕಾಯ್ದೆಯಡಿ ಪ್ರಕರಣ ದಾಖಲಿಸಲು ಸಾಧ್ಯವಿಲ್ಲ. ಭಾರತ ಕೇವಲ ಮಹಿಳೆಯರಿಗೆ ಮಾತ್ರ ಅಸುರಕ್ಷಿತ ಎಂಬ ಕೂಗು ಜೋರಾಗಿ ಕೇಳಿಬರುತ್ತಿರುವಾಗ, ಇಂತಹ ಘಟನೆಗಳು ಪುರುಷರಿಗೂ ಇಲ್ಲಿ ರಕ್ಷಣೆ ಇಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸುತ್ತಿವೆ. ಕಾನೂನುಗಳು ಲಿಂಗಾಧಾರಿತವಾಗಿರದೆ, ಅಪರಾಧಾಧಾರಿತವಾಗಿರಬೇಕು. ಪತ್ನಿಯಿಂದ ಶೋಷಣೆಗೊಳಗಾದ ಪುರುಷರಿಗೂ ನ್ಯಾಯ ಸಿಗುವಂತಾಗಬೇಕು.
ಯಾವುದೇ ಧರ್ಮ ಅಥವಾ ಸಂಸ್ಕೃತಿಯಲ್ಲಿ ಮಹಿಳೆಯರನ್ನು ಗೌರವದಿಂದ ನೋಡಲಾಗುತ್ತದೆ ನಿಜ, ಆದರೆ ಅಪರಾಧಕ್ಕೆ ಯಾವುದೇ ಲಿಂಗವಿರುವುದಿಲ್ಲ. ಮಹಿಳೆಯೂ ಕ್ರಿಮಿನಲ್ ಆಗಿರಬಹುದು ಎಂಬ ಸತ್ಯವನ್ನು ಸಮಾಜ ಒಪ್ಪಿಕೊಳ್ಳಬೇಕಿದೆ. ವಿವಾಹವೆಂಬ ಪವಿತ್ರ ಬಂಧವು ಇಂದು ವಿಮೆ ಹಣ ಮತ್ತು ಆಸ್ತಿಗಾಗಿ ಜೀವ ತೆಗೆಯುವ ಹಂತಕ್ಕೆ ತಲುಪಿರುವುದು ವಿಷಾದನೀಯ. ಪುರುಷರ ಮೇಲಿನ ದೌರ್ಜನ್ಯಗಳನ್ನು ಕಡೆಗಣಿಸದೆ, ಅವರಿಗೂ ಸಮಾನ ಕಾನೂನು ರಕ್ಷಣೆ ನೀಡಿದಾಗ ಮಾತ್ರ ನಿಜವಾದ ನ್ಯಾಯ ಸಮಾಜದಲ್ಲಿ ನೆಲೆಸಲು ಸಾಧ್ಯ.