ಸರ್ಕಾರಿ ನೌಕರರ ಪ್ರಮೋಷನ್‌ಗೆ (Govt Employees Promotion) ಸಂಬಂಧಿಸಿದಂತೆ ದೇಶದ ಸರ್ವೋಚ್ಚ ನ್ಯಾಯಾಲಯ ಒಂದು ಮಹತ್ವದ ತೀರ್ಪನ್ನು ಪ್ರಕಟಿಸಿದೆ! 'ಅಧಿಕಾರಿಯ ಹುದ್ದೆ ಬಡ್ತಿ ಹುದ್ದೆಯಲ್ಲ, ಅದು ಆಯ್ಕೆ ಹುದ್ದೆ' ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಹಳೆಯ ಸೇವಾ ನಿಯಮಗಳ ಅಡಿಯಲ್ಲೇ ತಮಗೆ ಪ್ರಮೋಷನ್ ಸಿಗಬೇಕು ಎಂದು ಪಟ್ಟು ಹಿಡಿಯಲು ಸರ್ಕಾರಿ ನೌಕರರಿಗೆ ಯಾವುದೇ ರೀತಿಯ ಅಂತರ್ಗತ ಅಥವಾ ಕಾನೂನಾತ್ಮಕ ಹಕ್ಕಿಲ್ಲ ಎಂದು ಕೋರ್ಟ್ ತಿಳಿಸಿದೆ.!
ಒಡಿಶಾ ಹೈಕೋರ್ಟ್ ನೀಡಿದ್ದ ತೀರ್ಪಿನ ವಿರುದ್ಧ ಅಲ್ಲಿನ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾದ ದೀಪಂಕರ್ ದತ್ತ ಮತ್ತು ಅಗಸ್ಟೀನ್ ಜಾರ್ಜ್ ಮಸಿಹ್ ಅವರಿದ್ದ ಪೀಠವು ಈ ಮಹತ್ವದ ಆದೇಶವನ್ನ ಹೊರಡಿಸಿದೆ.
ಕೋರ್ಟ್ ನೀಡಿರುವ ತೀರ್ಪಿನ ಪ್ರಮುಖ ಅಂಶಗಳು ಹಾಗೂ ಕರ್ನಾಟಕದ ಸರ್ಕಾರಿ ನೌಕರರಿಗೆ ಸಂಬಂಧಿಸಿದ ಇತ್ತೀಚಿನ ಅಪ್‌ಡೇಟ್ ಇಲ್ಲಿದೆ;
ಉಮೇದುವಾರಿಕೆಗೆ ಮಾತ್ರ ಹಕ್ಕಿದೆ, ಬಡ್ತಿಗಲ್ಲ!
ಯಾವುದೇ ಒಬ್ಬ ಸರ್ಕಾರಿ ಉದ್ಯೋಗಿಗೆ ತನಗೆ ಬಡ್ತಿ ಸಿಗಲೇಬೇಕು ಎಂದು ಕೇಳುವ ಯಾವುದೇ ಜನ್ಮಸಿದ್ಧ ಹಕ್ಕಿಲ್ಲ ಅಥವಾ ಬಡ್ತಿಯ ಕಾನೂನುಬದ್ಧ ನಿರೀಕ್ಷೆಯನ್ನು ಇಟ್ಟುಕೊಳ್ಳುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಪೀಠವು ಅಭಿಪ್ರಾಯಪಟ್ಟಿದೆ. ಆದಾಗ್ಯೂ, ಪ್ರಮೋಷನ್ ಪ್ರಕ್ರಿಯೆ ನಡೆಯುವಾಗ ನಿಯಮಗಳ ಅನುಸಾರ ತನ್ನ ಉಮೇದುವಾರಿಕೆಯನ್ನು (Candidate) ಪರಿಗಣಿಸುವಂತೆ ಕೇಳಲು ಮಾತ್ರ ಉದ್ಯೋಗಿಗೆ ಸೀಮಿತ ಹಕ್ಕಿರುತ್ತದೆ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.
ಅಷ್ಟೇ ಅಲ್ಲದೆ, ಪ್ರಮೋಷನ್ ನೀಡುವ ವಿಧಾನ ಮತ್ತು ಕಾರ್ಯವಿಧಾನಗಳು ಸಂವಿಧಾನಬಾಹಿರ ಅಥವಾ ಅನಿಯಂತ್ರಿತವಾಗಿಲ್ಲದಿದ್ದರೆ, ಅದನ್ನು ಯಾವುದೇ ಹಂತದಲ್ಲಾದರೂ ಬದಲಾಯಿಸುವ ಹಾಗೂ ಹೊಸ ಸೇವಾ ನಿಯಮಗಳನ್ನ ಜಾರಿಗೆ ತರುವ ಸಂಪೂರ್ಣ ಅಧಿಕಾರ ಸರ್ಕಾರಕ್ಕೆ ಇರುತ್ತದೆ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.
ಬಡ್ತಿ ವಿಚಾರದಲ್ಲಿ ಸರ್ಕಾರದ ನಿರ್ಧಾರವೇ ಅಂತಿಮ;
ನೇಮಕಾತಿ ಪ್ರಾಧಿಕಾರವಾಗಿ ಸರ್ಕಾರವು ತನ್ನ ವಿವೇಚನೆಯಿಂದ ಖಾಲಿ ಹುದ್ದೆಗಳನ್ನು ಬಡ್ತಿಯ ಮೂಲಕ ಭರ್ತಿ ಮಾಡುವುದಿಲ್ಲ ಎಂದು ನಿರ್ಧರಿಸಿದರೆ (ವಿಶೇಷವಾಗಿ ಕೇಡರ್ ಬದಲಾವಣೆ ಮತ್ತು ಹುದ್ದೆಗಳ ಮರುಸಂಘಟನೆಯಾದಾಗ), ನೇಮಕಾತಿಗಳನ್ನು ಮಾಡಲು ಸರ್ಕಾರಕ್ಕೆ ಒತ್ತಾಯಿಸುವಂತಿಲ್ಲ.
ಒಡಿಶಾ ಸಾರಿಗೆ ಇಲಾಖೆಯಲ್ಲಿನ ನೌಕರರ ಬಡ್ತಿ ಪ್ರಕರಣವನ್ನು ಉಲ್ಲೇಖಿಸಿ ತೀರ್ಪು ನೀಡಿರುವ ಕೋರ್ಟ್, "ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಹುದ್ದೆಯು ಬಡ್ತಿ ಹುದ್ದೆಯಲ್ಲ, ಅದು ಆಯ್ಕೆ ಹುದ್ದೆಯಾಗಿದೆ. ಉನ್ನತ ಅಧಿಕಾರಿ ಹುದ್ದೆಗೆ ಆಯ್ಕೆ ಮಾಡುವ ವಿಧಾನವು ಸರ್ಕಾರದ ನೀತಿ ವಿಷಯವಾಗಿದ್ದು, ಅದು ಸಂಪೂರ್ಣವಾಗಿ ಸರ್ಕಾರದ ವ್ಯಾಪ್ತಿಗೆ ಬರುತ್ತದೆ. ಆಯ್ಕೆ ವಿಧಾನವನ್ನು ಬದಲಾಯಿಸುವುದು ಸೂಕ್ತವೆಂದು ಸರ್ಕಾರ ಭಾವಿಸಿದರೆ, ಅದೂ ಸಹ ಸರ್ಕಾರದ ಅಧಿಕಾರವಾಗಿದೆ" ಎಂದು ಹೇಳಿದೆ. ಆದರೆ, ಬದಲಾದ ಸರ್ಕಾರದ ನೀತಿಯು ಕಾನೂನುಬಾಹಿರ ಎಂದು ಸಾಬೀತಾಗದ ಹೊರತು, ನೌಕರರು ಹಳೆಯ ನಿಯಮಗಳನ್ನೇ ಪಾಲಿಸಿ ಎಂದು ಹಠ ಹಿಡಿಯಲು ಸಾಧ್ಯವಿಲ್ಲ.
ಕರ್ನಾಟಕ ಸರ್ಕಾರದ ಇತ್ತೀಚಿನ ಬಿಗ್ ಅಪ್‌ಡೇಟ್ ಏನಿದೆ?
ಇದೇ ಸಂದರ್ಭದಲ್ಲಿ, ಕರ್ನಾಟಕ ಸರ್ಕಾರವು ತನ್ನ ನೌಕರರ ಬಡ್ತಿಗೆ ಸಂಬಂಧಿಸಿದಂತೆ ಇತ್ತೀಚೆಗೆ ಒಂದು ಮಹತ್ವದ ಮತ್ತು ಖುಷಿಯ ಆದೇಶವನ್ನು ಹೊರಡಿಸಿತ್ತು. ಒಂದೂ ಪ್ರಮೋಷನ್ (ಪದೋನ್ನತಿ) ಸಿಗದೆ ಸತತ 25 ಮತ್ತು 30 ವರ್ಷಗಳ ಕಾಲ ಸರ್ಕಾರಿ ನೌಕರಿಯಲ್ಲಿ ಸೇವೆ ಸಲ್ಲಿಸಿ ಸವೆದಿರುವ ನೌಕರರಿಗೆ ಹೆಚ್ಚುವರಿ ವೇತನ ಬಡ್ತಿ ಮಂಜೂರು (Additional salary increase) ಮಾಡಿ ಸರ್ಕಾರ ಆದೇಶಿಸಿದೆ.
ಹೆಚ್ಚುವರಿ ವೇತನ ಬಡ್ತಿಯ ನಿಯಮಗಳು ಹೀಗಿವೆ;
ಒಂದೇ ಬಾರಿ ಅವಕಾಶ - ಈ ಹೊಸ ಆದೇಶದನ್ವಯ, ಈ ರೀತಿಯ ಹೆಚ್ಚುವರಿ ವೇತನ ಬಡ್ತಿಯನ್ನು ಸರ್ಕಾರಿ ನೌಕರನು ತನ್ನ ಇಡೀ ಸೇವಾ ಅವಧಿಯಲ್ಲಿ ಕೇವಲ ಒಂದೇ ಒಂದು ಬಾರಿ ಮಾತ್ರ ಪಡೆಯಲು ಅರ್ಹನಾಗಿರುತ್ತಾನೆ. ಒಂದಕ್ಕಿಂತ ಹೆಚ್ಚು ಬಾರಿ ಇದನ್ನು ಪಡೆಯಲು ಬರುವುದಿಲ್ಲ.
ಸೇವೆಯ ಲೆಕ್ಕಾಚಾರ ಹೇಗೆ? - ಹೆಚ್ಚುವರಿ ವೇತನ ಬಡ್ತಿ ನೀಡಲು ನಿಗಧಿತ ಸೇವೆಯನ್ನು ಲೆಕ್ಕ ಹಾಕುವಾಗ, ಕಾಲಕಾಲಕ್ಕೆ ಜಾರಿಯಲ್ಲಿರುವ 'ಕರ್ನಾಟಕ ಸರ್ಕಾರಿ ನೌಕರರ (ಜೇಷ್ಠತೆ) ನಿಯಮಾವಳಿ, 1957' ರನ್ವಯ ಜೇಷ್ಠತೆ (Seniority) ನಿರ್ಧರಿಸುವ ಉದ್ದೇಶಕ್ಕೆ ಪರಿಗಣಿಸಲ್ಪಡುವ ಸೇವೆಯನ್ನು ಮಾತ್ರ ಲೆಕ್ಕಕ್ಕೆ ತೆಗೆದುಕೊಳ್ಳಲಾಗುವುದು ಎಂದು ಸರ್ಕಾರದ ಹೊಸ ಅಧಿಸೂಚನೆ ಸ್ಪಷ್ಟಪಡಿಸಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ಪ್ರಮೋಷನ್ ವಿಚಾರದಲ್ಲಿ ಸರ್ಕಾರದ ನಿಯಮಗಳೇ ಅಂತಿಮವಾಗಿದ್ದು, ಇತ್ತ ಕರ್ನಾಟಕ ಸರ್ಕಾರವು ಬಡ್ತಿ ಸಿಗದ ಹಿರಿಯ ನೌಕರರಿಗೆ ಆರ್ಥಿಕವಾಗಿ ನೆರವಾಗಲು ಹೆಚ್ಚುವರಿ ವೇತನ ಬಡ್ತಿಯ ಹೊಸ ಸೂತ್ರವನ್ನು ಜಾರಿಗೆ ತಂದಿದೆ!