ಹಣದ ಮೇಲಿನ ಅತಿ ಹೆಚ್ಚು ವ್ಯಾಮೋಹ ಅತಿಯಾಸೆ ಮಾನವೀಯ ಸಂಬಂಧಗಳನ್ನು ಹೇಗೆ ನಾಶಮಾಡಬಹುದು ಎಂಬುದಕ್ಕೆ ತೆಲಂಗಾಣದ ಬೊರ್ಗಾಮ್ ಗ್ರಾಮದಲ್ಲಿ ನಡೆದ ಈ ಘಟನೆ ಒಂದು ಉದಾಹರಣೆ ಆಗಿದೆ. 13 ವರ್ಷಗಳಿಂದ ದಾಂಪತ್ಯ ಜೀವನ ನಡೆಸುತ್ತಿದ್ದ ರಮೇಶ್ ಮತ್ತು ಸೌಮ್ಯ ದಂಪತಿ. ಹೌದು ಗಂಡನ ಹೆಸರಿನಲ್ಲಿ 2 ಕೋಟಿ ರೂಪಾಯಿ ಇನ್ಶುರೆನ್ಸ್ ಪಾಲಿಸಿ ಇರುವುದನ್ನು ತಿಳಿದ ಪತ್ನಿ ಸೌಮ್ಯ ತನ್ನ ಪ್ರಿಯಕರ ದಿಲೀಪ್ ಜೊತೆ ಸೇರಿ ಗಂಡನ ಜೀವ ತೆಗೆದುಕೊಳ್ಳುವ ಯೋಜನೆ ರೂಪಿಸಿದ್ದಾಳೆ ಎಂದು ತಿಳಿದುಬಂದಿದೆ.
ಡಿಸೆಂಬರ್ 19ರಂದು ಸೌಮ್ಯ ತನ್ನ ಗಂಡನಿಗೆ ನೀರಿನಲ್ಲಿ ನಿದ್ದೆ ಮಾತ್ರೆ ಬೆರೆಸಿ ಕೊಟ್ಟಿದ್ದಾಳೆ. ರಮೇಶ್ ನಿದ್ರೆಗೆ ಜಾರಿದ ನಂತರ, ಸೌಮ್ಯ ತನ್ನ ಪ್ರಿಯಕರನನ್ನು ಮನೆಗೆ ಕರೆಸಿ ದಿಂಬಿನಿಂದ ಉಸಿರುಗಟ್ಟಿಸಿ ಜೀವ ಹೋಗುವಂತೆ ಮಾಡಿದ್ದಾಳೆ ಎಂದು ಕೇಳಿ ಬಂದಿದೆ. ನಂತರ ಈ ಅಪರಾಧವನ್ನು ಮುಚ್ಚಿಹಾಕಲು ಹೃದಯಾಘಾತವೆಂದು ಎಲ್ಲರಿಗೂ ಬಿಂಬಿಸಿ ಅಂತ್ಯಕ್ರಿಯೆ ಮುಗಿಸಿದ್ದಾರೆ.
ಆದರೆ, ಇಸ್ರೇಲ್‌ನಲ್ಲಿ ವಾಸಿಸುತ್ತಿದ್ದ ರಮೇಶ್ ಸಹೋದರನಿಗೆ ಈ ಘಟನೆ ಬಗ್ಗೆ ಕೊಂಚ ಅನುಮಾನ ಮೂಡಿದ್ದು. ಆತ ತಕ್ಷಣವೇ ದೂರನ್ನು ದಾಖಲಿಸಿದ ಪರಿಣಾಮ, ಮೃತದೇಹವನ್ನು ಹೊರತೆಗೆದು ಪೋಸ್ಟ್‌ಮಾರ್ಟಂ ನಡೆಸಲಾಗಿದೆ. ವೈದ್ಯಕೀಯ ವರದಿಯಲ್ಲಿ ರಮೇಶ್‌ನ ಸಾವಿನ ಹಿಂದೆ ಜೀವಹಾನಿ ಮಾಡಿರುವುದಾಗಿ ಕಂಡು ಬಂದಿದೆ.
ತದನಂತರ ಪೊಲೀಸರು ತನಿಖೆ ನಡೆಸಿದಾಗ, ಪತ್ನಿ ಸೌಮ್ಯ ಮತ್ತು ಪ್ರಿಯಕರ ದಿಲೀಪ್ ಸೇರಿ ಒಟ್ಟು ಐವರು ಈ ಜೀವಹಾನಿ ಪ್ರಕರಣದಲ್ಲಿ ಭಾಗಿಯಾಗಿರುವುದು ಪತ್ತೆಯಾಗಿದ್ದು ತಡಮಾಡದೆ ಎಲ್ಲರನ್ನೂ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಹೌದು ಈ ಘಟನೆ ಹಣದ ಆಸೆ, ದ್ರೋಹ ಮತ್ತು ಅಪರಾಧದ ಪರಿಣಾಮವಾಗಿ ಕುಟುಂಬ ಹಾಗೂ ಸಮಾಜಕ್ಕೆ ಉಂಟಾಗುವ ದುಃಖದ ಚಿತ್ರಣವನ್ನು ತೋರಿಸುತ್ತದೆ. 2 ಕೋಟಿ ಇನ್ಶುರೆನ್ಸ್ ಹಣಕ್ಕಾಗಿ ಗಂಡನ ಜೀವ ತೆಗೆದುಕೊಂಡ ಪತ್ನಿ ಮತ್ತು ಆಕೆಯ ಪ್ರಿಯಕರ ಈಗ ಕಾನೂನು ಬಲೆಗೆ ಸಿಕ್ಕಿ ಬಿದ್ದಿದ್ದಾರೆ.
ಈ ಘಟನೆ ಕುರಿತಾಗಿ ಅಂತಿಮ ತೀರ್ಮಾನ ಹೇಳಬೇಕು ಅಂದರೆ, ಹಣದ ಲಾಲಸೆಯು ಮಾನವೀಯ ಮೌಲ್ಯಗಳನ್ನು ಹೇಗೆ ಕುಗ್ಗಿಸುತ್ತದೆ ಎಂಬುದಕ್ಕೆ ಈ ಘಟನೆ ಸ್ಪಷ್ಟ ಉದಾಹರಣೆ. ಪ್ರೀತಿಯ ಹೆಸರಿನಲ್ಲಿ ಪತ್ನಿ ಮತ್ತು ಪ್ರಿಯಕರ ಸೇರಿ ಗಂಡನ ಜೀವ ತೆಗೆದುಕೊಂಡಿದ್ದು, ಕೊನೆಗೆ ಸತ್ಯ ಬಹಿರಂಗವಾಗಿ ಕಾನೂನು ಕ್ರಮಕ್ಕೆ ದಾರಿ ಮಾಡಿಕೊಟ್ಟಿದೆ. ಈ ಪ್ರಕರಣವು ಸಮಾಜದಲ್ಲಿ ನಂಬಿಕೆ, ಪ್ರಾಮಾಣಿಕತೆ ಮತ್ತು ಮಾನವೀಯ ಸಂಬಂಧಗಳ ಮಹತ್ವವನ್ನು ನೆನಪಿಸುತ್ತದೆ. ಮತ್ತೆ ಯಾರು ಸಹ ಇಂತಹ ಕೃತ್ಯಕ್ಕೆ ಕೈ ಹಾಕಬೇಡಿ ಎಂದು ಈ ಘಟನೆ ಮೂಲಕ ಒಂದು ಪಾಠದಂತಾಗಿದೆ.