Mar 19, 2026 Languages : ಕನ್ನಡ | English

ಯುದ್ಧದ ಪರಿಣಾಮ ನೇರವಾಗಿ ನಿಮ್ಮ ಅಡುಗೆ ಮನೆಗೆ - ಗ್ಯಾಸ್ ಇಲ್ಲದೆ ಹಾಲು ಉತ್ಪನ್ನಗಳೇ ಸ್ಟಾಪ್?

ಯುಗಾದಿ ಹಬ್ಬದ ಸಂಭ್ರಮದಲ್ಲಿರುವ ರಾಜ್ಯದ ಜನತೆಗೆ ಇದೀಗ ಹಾಲಿನ ಉತ್ಪನ್ನಗಳ ಕೊರತೆಯ ಆತಂಕ ಎದುರಾಗಿದೆ. ಇರಾನ್ ಮತ್ತು ಇಸ್ರೇಲ್ ನಡುವಿನ ಸೇನಾ ಸಂಘರ್ಷದ ಪರಿಣಾಮವಾಗಿ ಜಾಗತಿಕ ಮಟ್ಟದಲ್ಲಿ ಉಂಟಾಗಿರುವ ವ್ಯತ್ಯಯವು ಈಗ ನೇರವಾಗಿ ಕರ್ನಾಟಕದ ಹೆಮ್ಮೆಯ ಸಂಸ್ಥೆ ಕೆಎಂಎಫ್ (KMF) ಮೇಲೆ ಪರಿಣಾಮ ಬೀರಿದೆ. ವಾಣಿಜ್ಯ ಬಳಕೆಯ ಎಲ್‌ಪಿಜಿ (Commercial LPG) ಸಿಲಿಂಡರ್‌ಗಳ ತೀವ್ರ ಅಭಾವದಿಂದಾಗಿ, ಇನ್ನೆರಡು ದಿನಗಳಲ್ಲಿ ನಂದಿನಿ ಉತ್ಪನ್ನಗಳ ತಯಾರಿಕೆ ಸ್ಥಗಿತಗೊಳ್ಳುವ ಭೀತಿ ಆವರಿಸಿದೆ.

ಯುಗಾದಿ ಹಬ್ಬದ ಮಧ್ಯೆ ನಂದಿನಿ ಸಪ್ಲೈಗೆ ಬ್ರೇಕ್
ಯುಗಾದಿ ಹಬ್ಬದ ಮಧ್ಯೆ ನಂದಿನಿ ಸಪ್ಲೈಗೆ ಬ್ರೇಕ್

ಸಿಲಿಂಡರ್ ಕೊರತೆ: ಯುದ್ಧದ ಎಫೆಕ್ಟ್‌ನಿಂದಾಗಿ ದೇಶಾದ್ಯಂತ ಕಮರ್ಷಿಯಲ್ ಸಿಲಿಂಡರ್‌ಗಳ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ನಂದಿನಿ ಉತ್ಪನ್ನಗಳ ತಯಾರಿಕೆಗೆ ಕೆಎಂಎಫ್ ಪ್ರತಿ ತಿಂಗಳು ಸುಮಾರು 450 ಕಮರ್ಷಿಯಲ್ ಸಿಲಿಂಡರ್‌ಗಳನ್ನು ಬಳಸುತ್ತದೆ. ಆದರೆ, ಸದ್ಯಕ್ಕೆ ಇರುವ ಗ್ಯಾಸ್ ಸಂಗ್ರಹವು ಕೇವಲ ಎರಡು ದಿನಗಳಿಗೆ ಮಾತ್ರ ಸಾಕಾಗಲಿದೆ.

ತಯಾರಿಕೆ ಸ್ಥಗಿತದ ಭೀತಿ: ಮಾರ್ಚ್ 20ರ ಒಳಗೆ ಅಗತ್ಯ ಪ್ರಮಾಣದ ಗ್ಯಾಸ್ ಪೂರೈಕೆಯಾಗದಿದ್ದರೆ, ನಂದಿನಿ ಬ್ರ್ಯಾಂಡ್‌ನ ಪ್ರಸಿದ್ಧ ಸಿಹಿ ತಿಂಡಿಗಳು, ಖಾರದ ತಿಂಡಿಗಳು ಹಾಗೂ ಮೌಲ್ಯವರ್ಧಿತ ಉತ್ಪನ್ನಗಳ ಉತ್ಪಾದನೆ ಸಂಪೂರ್ಣವಾಗಿ ನಿಲ್ಲುವ ಸಾಧ್ಯತೆ ಇದೆ.

ಬೃಹತ್ ವಹಿವಾಟಿನ ಮೇಲೆ ಪರಿಣಾಮ
ದೇಶದ ಎರಡನೇ ಅತಿದೊಡ್ಡ ಹಾಲು ಸಹಕಾರ ಒಕ್ಕೂಟವಾಗಿರುವ ಕೆಎಂಎಫ್, ವಾರ್ಷಿಕ ಸುಮಾರು 25,000 ರಿಂದ 30,000 ಕೋಟಿ ರೂಪಾಯಿಗಳ ವಹಿವಾಟು ನಡೆಸುತ್ತದೆ. ಪ್ರತಿದಿನ ಸಂಗ್ರಹವಾಗುವ 85 ರಿಂದ 90 ಲಕ್ಷ ಲೀಟರ್ ಹಾಲಿನಲ್ಲಿ ಅರ್ಧದಷ್ಟನ್ನು ಮೊಸರು, ಮಜ್ಜಿಗೆ, ತುಪ್ಪ, ಬೆಣ್ಣೆ ಮತ್ತು ಸ್ವೀಟ್ಸ್‌ಗಳಾಗಿ ಪರಿವರ್ತಿಸಲಾಗುತ್ತದೆ. ಹಬ್ಬದ ಸಮಯದಲ್ಲಿ ಈ ಉತ್ಪನ್ನಗಳಿಗೆ ಬೇಡಿಕೆ ಕುದುರುವ ಹೊತ್ತಲೇ ಗ್ಯಾಸ್ ಅಭಾವ ಎದುರಾಗಿರುವುದು ಕೆಎಂಎಫ್‌ಗೆ ನುಂಗಲಾರದ ತುತ್ತಾಗಿದೆ.

ಸರ್ಕಾರಕ್ಕೆ ಕೆಎಂಎಫ್ ಮನವಿ
ಪರಿಸ್ಥಿತಿಯ ಗಂಭೀರತೆಯನ್ನು ಅರಿತಿರುವ ಕೆಎಂಎಫ್ ಅಧಿಕಾರಿಗಳು, ಈ ಬಗ್ಗೆ ಸರ್ಕಾರದ ಗಮನ ಸೆಳೆದಿದ್ದಾರೆ. ತುರ್ತಾಗಿ ವಾಣಿಜ್ಯ ಸಿಲಿಂಡರ್‌ಗಳ ಪೂರೈಕೆಗೆ ಕ್ರಮ ಕೈಗೊಳ್ಳದಿದ್ದರೆ, ಹಬ್ಬದ ದಿನಗಳಲ್ಲಿ ಮಾರುಕಟ್ಟೆಯಲ್ಲಿ ನಂದಿನಿ ಉತ್ಪನ್ನಗಳ ಲಭ್ಯತೆ ಸೀಮಿತವಾಗಲಿದೆ ಎಂದು ಎಚ್ಚರಿಸಿದ್ದಾರೆ. ಕರ್ನಾಟಕ ಮಾತ್ರವಲ್ಲದೆ ತಮಿಳುನಾಡು, ಆಂಧ್ರ ಮತ್ತು ವಿದೇಶಗಳಿಗೂ ರಫ್ತಾಗುವ ನಂದಿನಿ ಉತ್ಪನ್ನಗಳ ಸಪ್ಲೈ ಚೈನ್ ಮೇಲೆ ಇದು ದೊಡ್ಡ ಹೊಡೆತ ನೀಡುವ ಆತಂಕವಿದೆ.

Latest News