ಬೆಂಗಳೂರಿನ ನಮ್ಮ ಮೆಟ್ರೋ ಪ್ರಯಾಣಿಕರೇ, ಈ ಭಾನುವಾರ ನೀವೇನಾದರೂ ಬೆಳಗ್ಗೆ ಬೇಗ ಹೊರಡಬೇಕು ಅಂತ ಪ್ಲಾನ್ ಮಾಡಿಕೊಂಡಿದ್ದರೆ ನಿಮಗೊಂದು ಪ್ರಮುಖ ಸುದ್ದಿ ಇಲ್ಲಿದೆ. ಸಿಲಿಕಾನ್ ಸಿಟಿಯ ಲೈಫ್‌ಲೈನ್ ಆಗಿರುವ ನಮ್ಮ ಮೆಟ್ರೋದ ನೇರಳೆ ಮಾರ್ಗದಲ್ಲಿ (Purple Line) ಮುಂಬರುವ ಭಾನುವಾರ, ಅಂದರೆ ಮೇ 31ರಂದು ಕೆಲವು ಗಂಟೆಗಳ ಕಾಲ ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ.
ಈ ಕುರಿತು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಅಧಿಕೃತ ಪ್ರಕಟಣೆಯೊಂದನ್ನು ಹೊರಡಿಸಿದ್ದು, ಹಳಿಗಳ ತುರ್ತು ರಿಪೇರಿ ಕೆಲಸದ ಹಿನ್ನೆಲೆಯಲ್ಲಿ ಈ ತಾತ್ಕಾಲಿಕ ಬದಲಾವಣೆ ಮಾಡಲಾಗಿದೆ ಎಂದು ತಿಳಿಸಿದೆ. ಹಾಗಾಗಿ ವೀಕೆಂಡ್‌ನಲ್ಲಿ ಮೆಟ್ರೋ ನಂಬಿಕೊಂಡು ಜರ್ನಿ ಮಾಡೋರು ಸ್ವಲ್ಪ ಮುಂಚಿತವಾಗಿಯೇ ಪ್ಲಾನ್ ಮಾಡಿಕೊಳ್ಳುವುದು ಉತ್ತಮ.
ಮೆಟ್ರೋ ಸುರಕ್ಷತೆಯ ದೃಷ್ಟಿಯಿಂದ ನೇರಳೆ ಮಾರ್ಗದಲ್ಲಿರುವ ಅತ್ತಿಗುಪ್ಪೆ ಮತ್ತು ವಿಜಯನಗರ ಮೆಟ್ರೋ ನಿಲ್ದಾಣಗಳ ನಡುವಿನ ಟ್ರ್ಯಾಕ್ ಭಾಗದಲ್ಲಿ ಅತ್ಯಗತ್ಯವಾದ ತುರ್ತು ನಿರ್ವಹಣಾ ಕಾಮಗಾರಿಗಳನ್ನು (Maintenance Works) ಕೈಗೆತ್ತಿಕೊಳ್ಳಲಾಗುತ್ತಿದೆ.
ಈ ರಿಪೇರಿ ಮತ್ತು ಕಾಂಕ್ರೀಟ್ ಕೆಲಸಗಳನ್ನು ಅತ್ಯಂತ ಸುಗಮವಾಗಿ ಹಾಗೂ ಸುರಕ್ಷಿತವಾಗಿ ಮುಗಿಸುವ ಉದ್ದೇಶದಿಂದ ಭಾನುವಾರ ಮುಂಜಾನೆ ರೈಲುಗಳ ಓಡಾಟವನ್ನು ಸ್ವಲ್ಪ ಸಮಯದ ಮಟ್ಟಿಗೆ ಕಟ್ ಮಾಡಲಾಗುತ್ತಿದೆ. ಪ್ರಯಾಣಿಕರು ಪ್ರಮುಖವಾಗಿ ಗಮನಿಸಬೇಕಾದ ವಿಷಯ ಏನೆಂದರೆ, ಇಡೀ ದಿನ ಮೆಟ್ರೋ ಬಂದ್ ಇರುವುದಿಲ್ಲ. ಕೇವಲ ಎರಡು ಗಂಟೆಗಳ ಕಾಲ ಮಾತ್ರ ಕೆಲವು ಪ್ರಮುಖ ನಿಲ್ದಾಣಗಳ ನಡುವೆ ರೈಲು ಇರಲ್ಲ.
ನಿಖರವಾಗಿ ಹೇಳಬೇಕೆಂದರೆ, ಮೇ 31ರ ಭಾನುವಾರ ಬೆಳಿಗ್ಗೆ 7:00 ಗಂಟೆಯಿಂದ 9:00 ಗಂಟೆಯವರೆಗೆ ನೇರಳೆ ಮಾರ್ಗದ ದೀಪಾಂಜಲಿನಗರ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್‌ಆರ್ ಮೆಜೆಸ್ಟಿಕ್) ಮೆಟ್ರೋ ನಿಲ್ದಾಣಗಳ ನಡುವೆ ಮೆಟ್ರೋ ರೈಲು ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಳ್ಳಲಿದೆ.
ಅಂದರೆ ಈ ಎರಡು ಗಂಟೆಗಳ ಅವಧಿಯಲ್ಲಿ ವಿಜಯನಗರ, ಅತ್ತಿಗುಪ್ಪೆ ಭಾಗದ ಜನರಿಗೆ ಮೆಟ್ರೋ ಸೇವೆ ಸಿಗುವುದಿಲ್ಲ. ಆದರೆ ಭಾನುವಾರ ಬೆಳಿಗ್ಗೆ 9:00 ಗಂಟೆ ದಾಟುತ್ತಿದ್ದಂತೆ ಕಾಮಗಾರಿ ಮುಗಿದು, ಇಡೀ ನೇರಳೆ ಮಾರ್ಗದಲ್ಲಿ ಎಂದಿನಂತೆ ಮೆಟ್ರೋ ರೈಲುಗಳು ಫುಲ್ ಸ್ಪೀಡ್‌ನಲ್ಲಿ ಓಡಾಡಲಿವೆ ಎಂದು ಬಿಎಂಆರ್‌ಸಿಎಲ್ ಖಚಿತಪಡಿಸಿದೆ.
ಬೆಳಿಗ್ಗೆ 7 ರಿಂದ 9 ಗಂಟೆಯವರೆಗಿನ ಈ ಬ್ರೇಕ್ ಸಮಯದಲ್ಲಿ, ಮೆಟ್ರೋದ ಉಳಿದ ಭಾಗಗಳಲ್ಲಿ ಯಾವುದೇ ತೊಂದರೆ ಇರುವುದಿಲ್ಲ. ಅಲ್ಲಿ ಎಂದಿನ ವೇಳಾಪಟ್ಟಿಯಂತೆ ಮೆಟ್ರೋಗಳು ಓಡಾಡಲಿವೆ. ನೇರಳೆ ಮಾರ್ಗದಲ್ಲೇ ಚಲ್ಲಘಟ್ಟದಿಂದ ಮೈಸೂರು ರಸ್ತೆ ನಿಲ್ದಾಣದವರೆಗೆ ಹಾಗೂ ಕೆಂಪೇಗೌಡ (ಮೆಜೆಸ್ಟಿಕ್) ನಿಲ್ದಾಣದಿಂದ ವೈಟ್‌ಫೀಲ್ಡ್ (ಕಾಡುಗೋಡಿ) ವರೆಗೆ ರೈಲುಗಳು ಸಿಗಲಿವೆ.
ನೇರಳೆ ಮಾರ್ಗದಲ್ಲಿನ ದೀಪಾಂಜಲಿನಗರ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೆಟ್ರೋ ನಿಲ್ದಾಣಗಳ ನಡುವಿನ ಮೆಟ್ರೋ ಸೇವೆಯಲ್ಲಿ ತಾತ್ಕಾಲಿಕ ವ್ಯತ್ಯಯ. ಹೆಚ್ಚಿನ ವಿವರಗಳಿಗೆ ಮಾಧ್ಯಮ ಪ್ರಕಟಣೆಯನ್ನು ವೀಕ್ಷಿಸಿ. pic.twitter.com/PNyVaJLpN1
— ನಮ್ಮ ಮೆಟ್ರೋ (@OfficialBMRCL) May 29, 2026
ಇದರೊಂದಿಗೆ ಹಸಿರು ಮಾರ್ಗವಾದ ಮಾದಾವರದಿಂದ ಸಿಲ್ಕ್ ಇನ್‌ಸ್ಟಿಟ್ಯೂಟ್ ವರೆಗೆ ಹಾಗೂ ಹಳದಿ ಮಾರ್ಗದ ಆರ್.ವಿ. ರಸ್ತೆಯಿಂದ ಬೊಮ್ಮಸಂದ್ರದವರೆಗೆ ಎಂದಿನಂತೆ ಯಾವುದೇ ಅಡೆತಡೆಯಿಲ್ಲದೆ ರೈಲುಗಳು ಲಭ್ಯವಿರಲಿವೆ. ಕೇವಲ ಮೆಜೆಸ್ಟಿಕ್ ಮತ್ತು ದೀಪಾಂಜಲಿನಗರ ನಡುವೆ ಮಾತ್ರ ಸಂಪರ್ಕ ಕಟ್ ಆಗಿರುತ್ತದೆ.
ಭಾನುವಾರ ಬೆಳಗ್ಗಿನ ಅವಧಿಯಲ್ಲಿ ಮೆಜೆಸ್ಟಿಕ್ ಅಥವಾ ದೀಪಾಂಜಲಿನಗರ ಭಾಗಕ್ಕೆ ಪ್ರಯಾಣ ಬೆಳೆಸುವ ಸಾರ್ವಜನಿಕರು ಈ ಸಮಯದ ವ್ಯತ್ಯಯವನ್ನು ಸರಿಯಾಗಿ ಗಮನದಲ್ಲಿಟ್ಟುಕೊಳ್ಳಬೇಕು. ಮೆಟ್ರೋ ಸಿಗದ ಆ ಎರಡು ಗಂಟೆಗಳ ಕಾಲ ಬಿಎಂಟಿಸಿ ಬಸ್ ಅಥವಾ ಆಟೋಗಳಂತಹ ಬದಲಿ ವಾಹನ ವ್ಯವಸ್ಥೆ ಮಾಡಿಕೊಂಡು, ಅದಕ್ಕೆ ತಕ್ಕಂತೆ ನಿಮ್ಮ ಜರ್ನಿಯನ್ನು ಪ್ಲಾನ್ ಮಾಡಿಕೊಳ್ಳಿ ಎಂದು ಬಿಎಂಆರ್‌ಸಿಎಲ್ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ವಿನಂತಿಸಿದ್ದಾರೆ.
ಮೆಟ್ರೋ ಹಳಿಗಳ ತುರ್ತು ದುರಸ್ತಿ ಕಾರ್ಯ ನಾಗರಿಕರ ಸುರಕ್ಷತೆಗೆ ಅನಿವಾರ್ಯವಾಗಿರುವುದರಿಂದ, ಪ್ರಯಾಣಿಕರಿಗೆ ಉಂಟಾಗುವ ಈ ತಾತ್ಕಾಲಿಕ ಅನಾನುಕೂಲತೆಗೆ ನಮ್ಮ ಮೆಟ್ರೋ ಸಂಸ್ಥೆಯು ವಿಷಾದ ವ್ಯಕ್ತಪಡಿಸಿದೆ.