ಬೆಂಗಳೂರು ನಗರದಲ್ಲಿ ಸಂಚಾರದ ಜೀವನಾಡಿಯಾಗಿ ಪರಿಗಣಿಸಲ್ಪಡುವ ನಮ್ಮ ಮೆಟ್ರೋ ಇದೀಗ ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದೆ. ಈಗಾಗಲೇ ದೇಶದಲ್ಲೇ ಅತ್ಯಂತ ದುಬಾರಿ ಮೆಟ್ರೋ ಎಂಬ ಹಣೆಪಟ್ಟಿ ಹೊಂದಿರುವ ನಮ್ಮ ಮೆಟ್ರೋ, ಫೆಬ್ರವರಿಯಿಂದ ಮತ್ತಷ್ಟು ದುಬಾರಿಯಾಗುವ ಸಾಧ್ಯತೆ ಇದೆ. ಟಿಕೆಟ್ ದರ ಏರಿಕೆ ಸುದ್ದಿ ಹೊರಬಿದ್ದ ಬೆನ್ನಲ್ಲೇ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಸಾಮಾನ್ಯ ಪ್ರಯಾಣಿಕರ ಮೇಲೆ ಮತ್ತಷ್ಟು ಹೊರೆ ಬೀಳಲಿದೆ ಎಂಬ ಆತಂಕ ವ್ಯಕ್ತವಾಗಿದೆ. ಹೌದು ನೀವು ಮೆಟ್ರೋ ಪ್ರಿಯರಾ? ಪ್ರತಿನಿತ್ಯ ಕಚೇರಿ, ಕಾಲೇಜು ಅಥವಾ ವ್ಯಾಪಾರಕ್ಕೆ ಮೆಟ್ರೋವನ್ನೇ ಅವಲಂಬಿಸುತ್ತೀರಾ? ಹಾಗಿದ್ರೆ ಮುಂದಿನ ದಿನಗಳಲ್ಲಿ ಹೆಚ್ಚಿನ ದರ ಪಾವತಿಸಲು ಸಿದ್ಧರಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ನೋಡಿ.
ಫೇರ್ ಫಿಕ್ಸೇಶನ್ ಕಮಿಟಿ ಶಿಫಾರಸ್ಸಿನ ಪ್ರಕಾರ, ನಮ್ಮ ಮೆಟ್ರೋ ಟಿಕೆಟ್ ದರವನ್ನು ಪ್ರತಿವರ್ಷ ಗರಿಷ್ಠ ಶೇ.5ರಷ್ಟು ಹೆಚ್ಚಿಸಬಹುದಾಗಿದೆ. ಈ ಶಿಫಾರಸ್ಸು ಜಾರಿಗೆ ಬಂದರೆ, ದಿನನಿತ್ಯದ ಪ್ರಯಾಣಿಕರ ಜೇಬಿಗೆ ಮತ್ತಷ್ಟು ಕತ್ತರಿ ಬೀಳುವುದು ನಿಶ್ಚಿತ ಎನ್ನಲಾಗುತ್ತಿದೆ. ಫೆಬ್ರವರಿಯಿಂದಲೇ ಈ ದರ ಏರಿಕೆ ಜಾರಿಯಾಗುವ ಸಾಧ್ಯತೆ ಇದ್ದು, ಬಿಎಂಆರ್‌ಸಿಎಲ್ ಅಂತಿಮ ತೀರ್ಮಾನಕ್ಕೆ ಬರುತ್ತಾ ಎಂಬ ಪ್ರಶ್ನೆ ಇದೀಗ ಜನಸಾಮಾನ್ಯರ ಮನಸ್ಸಲ್ಲಿ ಮನೆ ಮಾಡಿದೆ. 2025ರ ಫೆಬ್ರವರಿಯಲ್ಲಿ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಭಾರಿ ಪ್ರಮಾಣದಲ್ಲಿ ಟಿಕೆಟ್ ದರಗಳನ್ನು ಪರಿಷ್ಕರಿಸಿತ್ತು. ಕೆಲ ಮಾರ್ಗಗಳಲ್ಲಿ ಶೇ.71ರಷ್ಟುವರೆಗೂ ದರ ಹೆಚ್ಚಳ ಮಾಡಲಾಗಿತ್ತು. ಆ ದರ ಪರಿಷ್ಕರಣೆಗೆ ಒಂದು ವರ್ಷ ಇನ್ನೇನು ಪೂರ್ತಿಯಾಗುತ್ತಿರುವ ಹೊತ್ತಲ್ಲೇ, ಮತ್ತೊಮ್ಮೆ ದರ ಏರಿಕೆ ಮಾತುಗಳು ಕೇಳಿಬರುತ್ತಿರುವುದು ಪ್ರಯಾಣಿಕರನ್ನು ಕಂಗಾಲು ಮಾಡಿದೆ.
ಈಗಿರುವ ದರಗಳೇ ನಮ್ಮ ಮೆಟ್ರೋವನ್ನು ದೇಶದಲ್ಲೇ ಅತ್ಯಂತ ದುಬಾರಿ ಮೆಟ್ರೋ ವ್ಯವಸ್ಥೆ ಎಂಬ ಸ್ಥಾನಕ್ಕೆ ತಂದು ನಿಲ್ಲಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಮತ್ತೆ ದರ ಏರಿಕೆಯಾದರೆ, ಪ್ರಯಾಣಿಕರ ಮೇಲಿನ ಆರ್ಥಿಕ ಒತ್ತಡ ಇನ್ನಷ್ಟು ಹೆಚ್ಚಾಗಲಿದೆ ಎಂದು ಹಲವರು ಹೇಳುತ್ತಿದ್ದಾರೆ. ಪ್ರತಿವರ್ಷ ಟಿಕೆಟ್ ದರ ಪರಿಷ್ಕರಣೆ ಪ್ರಸ್ತಾಪ ಬಂದಾಗಲೇ ಪ್ರಯಾಣಿಕರಿಂದ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದೆ. ಸಾರ್ವಜನಿಕ ಸಾರಿಗೆ ಎಂದರೆ ಸಾಮಾನ್ಯ ನಾಗರಿಕರ ಕೈಗೆಟುಕುವಂತಿರಬೇಕು. ಮೆಟ್ರೋ ಐಷಾರಾಮಿ ಸೇವೆಯಾಗಬಾರದು ಎಂದು ದಿನನಿತ್ಯದ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ದುಬಾರಿಯಾದ ಮೆಟ್ರೋ ಮೇಲೆ ಮತ್ತಷ್ಟು ದರ ಏರಿಕೆ ಮಾಡೋದು ಗಾಯದ ಮೇಲೆ ಉಪ್ಪು ಎರಚಿದಂತಾಗಿದೆ ಎಂಬ ಅಸಮಾಧಾನ ಕೂಡ ವ್ಯಕ್ತವಾಗಿದೆ. ತುಂಬಿ ತುಳುಕುತ್ತಿರುವ ಮೆಟ್ರೋ ರೈಲುಗಳು, ಪೀಕ್ ಅವರ್‌ನಲ್ಲಿ ನಿಂತುಕೊಂಡೇ ಪ್ರಯಾಣಿಸುವ ಸ್ಥಿತಿ, ಹಾಗೂ ಆಮೆಗತಿಯಲ್ಲಿ ಸಾಗುತ್ತಿರುವ ಹೊಸ ಮಾರ್ಗಗಳ ನಿರ್ಮಾಣ ಈ ಎಲ್ಲ ಸಮಸ್ಯೆಗಳ ನಡುವೆಯೇ ದರ ಮಾತ್ರ ಏರುತ್ತಿರುವುದು ಜನರ ಅಸಮಾಧಾನಕ್ಕೆ ಕಾರಣವಾಗಿದೆ. ಸಾಮರ್ಥ್ಯಕ್ಕಿಂತ ಹೆಚ್ಚು ಜನರನ್ನು ಹೊತ್ತು ಸಾಗುವ ರೈಲುಗಳನ್ನು ಐಷಾರಾಮಿ ಸೇವೆ ಎಂದು ಕರೆಯುವುದು ಹಾಸ್ಯಾಸ್ಪದ ಎಂದು ಸಾರ್ವಜನಿಕರು ವ್ಯಂಗ್ಯವಾಡಿದ್ದಾರೆ. ಪ್ರಯಾಣಿಕರು ಈಗಾಗಲೇ ಸರಾಸರಿ ಶೇ.32ರಷ್ಟು ಹೆಚ್ಚುವರಿ ಹಣವನ್ನು ಮೆಟ್ರೋ ಪ್ರಯಾಣಕ್ಕೆ ಪಾವತಿಸುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.
“ಅನ್ಯಾಯಕರ ದರಗಳನ್ನು ಮೌನವಾಗಿ ಒಪ್ಪಿಕೊಳ್ಳುತ್ತಿರುವುದೇ ಬಿಎಂಆರ್‌ಸಿಎಲ್‌ಗೆ ಮತ್ತೊಮ್ಮೆ ದರ ಏರಿಸಲು ಧೈರ್ಯ ನೀಡುತ್ತಿದೆ” ಎಂದು ಪ್ರಯಾಣಿಕರು ಕಿಡಿಕಾರಿದ್ದಾರೆ. ಮೆಟ್ರೋಗೆ ಹೆಚ್ಚು ಹಣ ಕೊಡಿ, ಇಲ್ಲವೇ ಟ್ರಾಫಿಕ್‌ನಲ್ಲಿ ಗಂಟೆಗಟ್ಟಲೆ ಸಿಲುಕಿರಿ ಎಂಬ ದ್ವಂದ್ವ ಸ್ಥಿತಿ ಈಗ ಬೆಂಗಳೂರು ನಗರದಲ್ಲಿದೆ ಎಂಬ ಅಸಹಾಯಕತೆ ವ್ಯಕ್ತವಾಗಿದೆ. ಒಟ್ಟಾರೆ ಆಗಿ ನಮ್ಮ ಮೆಟ್ರೋ ಟಿಕೆಟ್ ದರ ಮತ್ತೊಮ್ಮೆ ಏರಿಕೆಯಾಗುತ್ತಾ ಎಂಬ ಪ್ರಶ್ನೆ ಇದೀಗ ಜನಸಾಮಾನ್ಯರ ಬದುಕಿನೊಂದಿಗೆ ಬೆಸೆದುಕೊಂಡಿದೆ. ಸಾರ್ವಜನಿಕ ಸಾರಿಗೆ ನಿಜಕ್ಕೂ ಜನಪರವಾಗಿರಬೇಕಾ? ಅಥವಾ ಐಷಾರಾಮಿ ಸೇವೆಯಾಗಿ ಮಾರ್ಪಡುತ್ತಿದೆಯಾ? ಈ ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ. ಈ ಕುರಿತು ಮುಂದಿನ ದಿನಗಳಲ್ಲಿ ಹೇಗೆ ಬೆಳವಣಿಗೆ ಕಾಣುತ್ತದೆ ಎಂದು ಕಾದು ನೋಡಬೇಕು.