Feb 16, 2026 Languages : ಕನ್ನಡ | English

ಮಹಾಶಿವರಾತ್ರಿ 2026 - ಆರ್ಟ್ ಆಫ್ ಲಿವಿಂಗ್‌ನಲ್ಲಿ ಸಂಭ್ರಮದ ಆಚರಣೆ!!

ಶಿವನೆಂದರೆ ಯಾರು? ಒಂದು ರೂಪವೇ? ಒಂದು ದೇಹವೇ? ಮೇಲೆಲ್ಲೋ ಕುಳಿತಿರುವ ದೇವರೇ? ಈ ಪ್ರಶ್ನೆಗೆ ಆಧ್ಯಾತ್ಮಿಕ ಗುರು ಶ್ರೀ ಶ್ರೀ ರವಿಶಂಕರ್ ಅವರು ನೀಡಿರುವ ಉತ್ತರ ಬಹಳ ಗಂಭೀರವಾಗಿದೆ. ಅವರ ಮಾತಿನಲ್ಲಿ, ಶಿವ ಎಂದರೆ ಒಂದು ವ್ಯಕ್ತಿ ಅಲ್ಲ, ಒಂದು ರೂಪವೂ ಅಲ್ಲ. ಅದು ಅನಂತ ಪ್ರಜ್ಞೆಯ ಚಿದಾಕಾಶ – ಅಂದರೆ ಸರ್ವವ್ಯಾಪಿ ಚೈತನ್ಯ.

ಶಿವರಾತ್ರಿ ಜಾಗರಣೆಯ ನೈಜ ಉದ್ದೇಶವೇನು? ಗುರೂಜಿ ನೀಡಿದ ಆಧ್ಯಾತ್ಮಿಕ ವಿಶ್ಲೇಷಣೆ ಇಲ್ಲಿದೆ!!
ಶಿವರಾತ್ರಿ ಜಾಗರಣೆಯ ನೈಜ ಉದ್ದೇಶವೇನು? ಗುರೂಜಿ ನೀಡಿದ ಆಧ್ಯಾತ್ಮಿಕ ವಿಶ್ಲೇಷಣೆ ಇಲ್ಲಿದೆ!!

ಶಿವನನ್ನು ಸಾವಿರಾರು ವರ್ಷಗಳ ಹಿಂದೆ ಜೀವಿಸಿದ್ದ ಯೋಗಿ ಎಂದು ಕೆಲವು ಕಥೆಗಳು ಹೇಳುತ್ತವೆ. ಆದರೆ ನಿಜವಾಗಿ ಶಿವನಿಗೆ ದೇಹವಿಲ್ಲ, ರೂಪವಿಲ್ಲ. ನಮ್ಮ ಪ್ರಾಚೀನ ಋಷಿಗಳು ಅಗ್ರಾಹ್ಯವಾದ ದೈವತತ್ವವನ್ನು ಜನರಿಗೆ ಅರ್ಥವಾಗುವಂತೆ ಒಂದು ಪ್ರತೀಕದ ರೂಪದಲ್ಲಿ ಚಿತ್ರಿಸಿದ್ದಾರೆ. ಎಲ್ಲವೂ ಯಾವುದರಿಂದ ಹುಟ್ಟುತ್ತದೋ, ಯಾವುದರಲ್ಲಿ ಉಳಿಯುತ್ತದೋ ಮತ್ತು ಯಾವುದರಲ್ಲಿ ಲಯವಾಗುತ್ತದೋ,  ಆ ತತ್ವವೇ ಶಿವ.

ಶಿವನನ್ನು ನೀಲಿ ಬಣ್ಣದಲ್ಲಿ ಚಿತ್ರಿಸುವುದಕ್ಕೂ ಒಂದು ಅರ್ಥವಿದೆ. ನೀಲಿ ಬಣ್ಣ ಆಕಾಶವನ್ನು ಸೂಚಿಸುತ್ತದೆ. ಆಕಾಶಕ್ಕೆ ಯಾವುದೇ ಗಡಿ ಇಲ್ಲ, ಆಕಾರ ಇಲ್ಲ. ಅದು ಅನಂತ. ಹಾಗೆಯೇ ಶಿವವೂ ಸರ್ವವ್ಯಾಪಿ ಚೈತನ್ಯ. ನಾವು ಅವನನ್ನು ಬಿಟ್ಟು ಹೊರಗೆ ಹೋಗಲು ಸಾಧ್ಯವಿಲ್ಲ, ಏಕೆಂದರೆ ಅವನೇ ಇಡೀ ಸೃಷ್ಟಿಯ ಸಾರ.

ಕೈಲಾಸ ಪರ್ವತವನ್ನೂ ಶಿವನ ನಿವಾಸವೆಂದು ಹೇಳುತ್ತಾರೆ. ಆದರೆ ಗುರುದೇವರ ವಿವರಣೆ ಪ್ರಕಾರ, ಕೈಲಾಸ ಎಂದರೆ ಕೇವಲ ಒಂದು ಭೌತಿಕ ಪರ್ವತವಲ್ಲ. ನಿಮ್ಮೊಳಗೆ ಶಿವತತ್ವ ಉದಯಿಸಿದಾಗ, ಜೀವನದಲ್ಲಿ ಆನಂದ ಮತ್ತು ಸಂಭ್ರಮ ತುಂಬಿದಾಗ – ಅದೇ ಕೈಲಾಸ. ಆಂತರಿಕ ಆನಂದವೇ ನಿಜವಾದ ಕೈಲಾಸ ಅನುಭವ.

ಶಿವನ ಪಂಚಮುಖಗಳಿಗೂ ಆಧ್ಯಾತ್ಮಿಕ ಅರ್ಥವಿದೆ. ಶಿವನಿಗೆ ಮುಖವಿಲ್ಲದಿದ್ದರೂ, ಅಗ್ನಿ, ಜಲ, ವಾಯು, ಪೃಥ್ವಿ ಮತ್ತು ಆಕಾಶ ಎಂಬ ಪಂಚಭೂತಗಳ ಮೂಲಕ ಅವನ ಐದು ಅಂಶಗಳನ್ನು ವಿವರಿಸಲಾಗಿದೆ. ‘ಸದ್ಯೋಜಾತ’ ಎಂದರೆ ಪ್ರತಿಕ್ಷಣವೂ ಹೊಸತನ. ‘ವಾಮದೇವ’ ಎಂದರೆ ಸುಂದರತೆ. ‘ಅಘೋರ’ ಎಂದರೆ ಭಯರಹಿತತೆ. ‘ವಿರೂಪಾಕ್ಷ’ ಎಂದರೆ ಕಣ್ಣು ಮುಚ್ಚಿದರೂ ಕಾಣುವ ಆಂತರಿಕ ದೃಷ್ಟಿ. ‘ತತ್‌ಪುರುಷ’ ಎಂದರೆ ದೇಹವೆಂಬ ನಗರದಲ್ಲಿ ವಾಸಿಸುವ ಆತ್ಮ.

ಶಿವರಾತ್ರಿಯ ಮಹತ್ವವೂ ಇದೇ ತತ್ವಕ್ಕೆ ಸಂಬಂಧಿಸಿದೆ. ಇಡೀ ರಾತ್ರಿ ಜಾಗರಣೆ ಮಾಡುವುದು ಕೇವಲ ದೈಹಿಕ ಕ್ರಿಯೆ ಮಾತ್ರವಲ್ಲ. ನಿಜವಾದ ಜಾಗೃತಿ ಅಂತರಂಗದಲ್ಲಿ ಉಂಟಾಗಬೇಕು. ನಿದ್ರೆಯ ಮೇಲೆ ಜಯ ಸಾಧಿಸುವುದು ಎಂದರೆ ಮನಸ್ಸಿನ ಅಜ್ಞಾನದಿಂದ ಹೊರಬರುವುದು. ಶಿವತತ್ವದಲ್ಲಿ ಮಿಂದೇಳಿದಾಗ, ಚೈತನ್ಯವು ಒಳಗಿನಿಂದ ಎಚ್ಚರಗೊಳ್ಳುತ್ತದೆ. ಅದೇ ನಿಜವಾದ ಶಿವರಾತ್ರಿ.

ಇಂದು ಜೀವನಶೈಲಿ ಬದಲಾಗಿರುವುದರಿಂದ ದೇಹಕ್ಕೆ ಇಡೀ ರಾತ್ರಿ ಜಾಗರಣೆ ಕಷ್ಟ. ಆದರೆ ಆತ್ಮಜಾಗೃತಿ ಯಾವ ದಿನ ಬಂದರೂ, ಆ ದಿನವೇ ಶಿವರಾತ್ರಿ. ದೇಹವೆಂಬ ಪುರದಲ್ಲಿ ವಾಸಿಸುವ ಆತ್ಮ ತನ್ನ ಅನಂತ ಸ್ವಭಾವವನ್ನು ಅರಿತಾಗ ಅದು ನಿಜವಾದ ಜಾಗರಣೆ.

2026ರ ಫೆಬ್ರವರಿ 15ರಂದು ಆರ್ಟ್ ಆಫ್ ಲಿವಿಂಗ್ ಫೌಂಡೇಶನ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಮಹಾಶಿವರಾತ್ರಿ ಮಹೋತ್ಸವ ನಡೆಯಲಿದೆ. ಧ್ಯಾನ ಮತ್ತು ಭಕ್ತಿಯ ಮೂಲಕ ದಿವ್ಯ ಪ್ರಜ್ಞೆಯಲ್ಲಿ ವಿಶ್ರಾಂತಿ ಪಡೆಯಲು ಇದು ಒಂದು ಅವಕಾಶ. ಶಿವತತ್ವವನ್ನು ಅನುಭವಿಸುವುದೇ ನಿಜವಾದ ಆಧ್ಯಾತ್ಮಿಕ ಪಯಣ

Latest News