Mar 28, 2026 Languages : ಕನ್ನಡ | English

ಕಗ್ಗಲೀಪುರ ಭೂ ವಿವಾದಕ್ಕೆ ಸುಖಾಂತ್ಯ? ಶ್ರೀ ಶ್ರೀ ರವಿಶಂಕರ್ ಪರವಾಗಿ ಬಂದ ಮಹತ್ವದ ಆದೇಶ ಇಲ್ಲಿದೆ!!

ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕರಾದ ಶ್ರೀ ರವಿಶಂಕರ್ ಗುರೂಜಿ ಅವರಿಗೆ ಈಗ ಕಾನೂನು ಸಮರದಲ್ಲಿ ದೊಡ್ಡ ಜಯ ಸಿಕ್ಕಿದೆ. ಬೆಂಗಳೂರು ದಕ್ಷಿಣ ತಾಲೂಕಿನ ಕಗ್ಗಲೀಪುರ ಗ್ರಾಮದಲ್ಲಿ ಸರ್ಕಾರಿ ಜಮೀನು ಒತ್ತುವರಿ ಮಾಡಲಾಗಿದೆ ಎಂಬ ಆರೋಪದ ಮೇಲೆ ದಾಖಲಾಗಿದ್ದ ಎಫ್‌ಐಆರ್ ಅನ್ನು ಕರ್ನಾಟಕ ಹೈಕೋರ್ಟ್ ಈಗ ರದ್ದುಗೊಳಿಸಿದೆ.

"ಗುರೂಜಿ ವೈಯಕ್ತಿಕವಾಗಿ ಭೂಮಿ ಅತಿಕ್ರಮಿಸಿಲ್ಲ": ಕೋರ್ಟ್‌ನಲ್ಲಿ ಜಯ ತಂದುಕೊಟ್ಟ ಬಲವಾದ ವಾದಗಳಿವು!

ಬೆಂಗಳೂರು ಮೆಟ್ರೋಪಾಲಿಟನ್ ಟಾಸ್ಕ್ ಫೋರ್ಸ್ (BMTF) ಈ ಹಿಂದೆ ಗುರೂಜಿ ವಿರುದ್ಧ ಪ್ರಕರಣ ದಾಖಲಿಸಿತ್ತು. ಇದನ್ನು ಪ್ರಶ್ನಿಸಿ ರವಿಶಂಕರ್ ಗುರೂಜಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠವು ಈಗ ಪ್ರಕರಣವನ್ನು ವಜಾಗೊಳಿಸಿ ಆದೇಶ ಹೊರಡಿಸಿದೆ.

ಅಸಲಿಗೆ ಏನಾಗಿತ್ತು ಈ ಕೇಸ್?

ಬೆಂಗಳೂರು ದಕ್ಷಿಣ ತಾಲೂಕಿನ ಉತ್ತರಹಳ್ಳಿ ಹೋಬಳಿಯ ಕಗ್ಗಲೀಪುರ ಗ್ರಾಮದ ಸುತ್ತಮುತ್ತಲ ವಿವಿಧ ಸರ್ವೇ ನಂಬರ್‌ಗಳಲ್ಲಿ ಸರ್ಕಾರಿ ಜಮೀನು, ಕೆರೆ ಮತ್ತು ರಾಜಕಾಲುವೆಯನ್ನು ಆರ್ಟ್ ಆಫ್ ಲಿವಿಂಗ್ ಸಂಸ್ಥೆ ಒತ್ತುವರಿ ಮಾಡಿದೆ ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ಬಿಎಂಟಿಎಫ್ ಈ ಬಗ್ಗೆ ತನಿಖೆ ನಡೆಸಿ ಎಫ್‌ಐಆರ್ ದಾಖಲಿಸಿತ್ತು.

ಆದರೆ ಗುರೂಜಿ ಪರ ವಕೀಲರು ಕೋರ್ಟ್‌ನಲ್ಲಿ ಬಲವಾದ ವಾದ ಮಂಡಿಸಿದ್ದರು:

ಬಿಎಂಟಿಎಫ್ ನೀಡಿರುವ ವರದಿಯಲ್ಲಿ ಗುರೂಜಿ ಅವರು ವೈಯಕ್ತಿಕವಾಗಿ ಯಾವುದೇ ಆಸ್ತಿ ಹೊಂದಿದ್ದಾರೆ ಅಥವಾ ಭೂಮಿ ಅತಿಕ್ರಮಿಸಿದ್ದಾರೆ ಎನ್ನುವುದಕ್ಕೆ ಸಾಕ್ಷ್ಯಗಳಿಲ್ಲ.

ಒತ್ತುವರಿ ಆರೋಪ ಕೇಳಿಬಂದಿರುವ ಪ್ರದೇಶಗಳು ಆಶ್ರಮದ ಕಾಂಪೌಂಡ್ ಒಳಗಡೆ ಬರುವುದಿಲ್ಲ.

ಕೆಲವು ಖಾಸಗಿ ರಿಯಲ್ ಎಸ್ಟೇಟ್ ಕಂಪನಿಗಳ ಮೇಲೆ ಒತ್ತುವರಿ ಆರೋಪವಿದೆಯೇ ಹೊರತು ಗುರೂಜಿ ಅವರ ಮೇಲಲ್ಲ ಎಂದು ಸ್ಪಷ್ಟಪಡಿಸಿದ್ದರು.

ಈ ವಾದವನ್ನು ಪುರಸ್ಕರಿಸಿದ ಹೈಕೋರ್ಟ್, ಗುರೂಜಿ ವಿರುದ್ಧದ ಎಫ್‌ಐಆರ್ ಅನ್ನು ರದ್ದುಗೊಳಿಸಿದೆ.

ಕೋರ್ಟ್ ಹೇಳಿದ್ದೇನು?

ನ್ಯಾಯಪೀಠವು ಈ ಪ್ರಕರಣವನ್ನು ರದ್ದುಗೊಳಿಸುವಾಗ ಒಂದು ಮುಖ್ಯವಾದ ವಿಷಯವನ್ನು ತಿಳಿಸಿದೆ. ಈ ಆದೇಶವು ಕೇವಲ ಅರ್ಜಿದಾರರ (ರವಿಶಂಕರ್ ಗುರೂಜಿ) ವಿರುದ್ಧದ ಪ್ರಕರಣಕ್ಕೆ ಮಾತ್ರ ಸೀಮಿತವಾಗಿದೆ. ಒಂದು ವೇಳೆ ಬೇರೆ ಯಾವುದೇ ಸಕ್ಷಮ ನ್ಯಾಯಾಲಯದ ಮುಂದೆ ಭೂಮಿಗೆ ಸಂಬಂಧಿಸಿದ ಇತರೆ ಆರೋಪಗಳು ಬಾಕಿ ಇದ್ದರೆ, ಈ ಆದೇಶ ಅಲ್ಲಿ ಅನ್ವಯವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಕಳೆದ ಕೆಲವು ಸಮಯದಿಂದ ಈ ಭೂ ವಿವಾದದ ಕಾರಣದಿಂದ ಸುದ್ದಿಯಲ್ಲಿದ್ದ ಆರ್ಟ್ ಆಫ್ ಲಿವಿಂಗ್ ಸಂಸ್ಥೆಗೆ ಮತ್ತು ಗುರೂಜಿಯವರಿಗೆ ಈ ತೀರ್ಪು ದೊಡ್ಡ ಸಮಾಧಾನ ತಂದಿದೆ. ರಾಜಕಾಲುವೆ ಮತ್ತು ಕೆರೆ ಒತ್ತುವರಿಯಂತಹ ಸೂಕ್ಷ್ಮ ವಿಷಯಗಳ ಬಗ್ಗೆ ಕೋರ್ಟ್ ಈಗ ಗುರೂಜಿಯವರ ಪರವಾಗಿ ತೀರ್ಪು ನೀಡಿರೋದು ಭಕ್ತವಲಯದಲ್ಲಿ ಸಂತಸ ಮೂಡಿಸಿದೆ.

Latest News