ನಾರಿಯ ರೌದ್ರಾವತಾರ - ಬಸ್ ನಿಲ್ದಾಣದಲ್ಲಿ ಅಸಭ್ಯವಾಗಿ ವರ್ತಿಸಿದ ರೋಡ್ ರೋಮಿಯೋಗೆ ಚಪ್ಪಲಿ ಏಟಿನ ಪೂಜೆ!!

ರಾಯಚೂರು: ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರ ಜೊತೆ ಮಿಸ್ ಬಿಹೇವ್ ಮಾಡಿದರೆ ಏನಾಗುತ್ತೆ ಅನ್ನೋದಕ್ಕೆ ಗಂಡುಮೆಟ್ಟಿದ ನಾಡು ರಾಯಚೂರಿನಲ್ಲಿ ಒಂದು ಖಡಕ್ ಉದಾಹರಣೆ ಸಿಕ್ಕಿದೆ. ಬಸ್ ನಿಲ್ದಾಣದಲ್ಲಿ ಬಸ್‌ಗಾಗಿ ಕಾಯುತ್ತಿದ್ದ ಮಹಿಳೆಯೊಬ್ಬರ ಜೊತೆ ಅಸಭ್ಯವಾಗಿ ವರ್ತಿಸಲು ಹೋದ ರೋಡ್ ರೋಮಿಯೋಗೆ ಸಾರ್ವಜನಿಕರ ಸಮ್ಮುಖದಲ್ಲೇ ಚಪ್ಪಲಿ ಏಟು ಮತ್ತು ಸಖತ್ ಧರ್ಮದೇಟು ಬಿದ್ದಿರುವ ಭೀಕರ ಘಟನೆಯೊಂದು ರಾಯಚೂರು ಜಿಲ್ಲೆಯ ಲಿಂಗಸುಗೂರು ಬಸ್ ನಿಲ್ದಾಣದಲ್ಲಿ ನಡೆದಿದೆ.

ಲಿಂಗಸುಗೂರು ಬಸ್ ಸ್ಟ್ಯಾಂಡ್‌ನಲ್ಲಿ ಹೈಡ್ರಾಮಾ
ಲಿಂಗಸುಗೂರು ಬಸ್ ಸ್ಟ್ಯಾಂಡ್‌ನಲ್ಲಿ ಹೈಡ್ರಾಮಾ

ಮಹಿಳೆಯ ರೌದ್ರಾವತಾರ ಹಾಗೂ ಸಾರ್ವಜನಿಕರ ಧರ್ಮದೇಟಿಗೆ ತತ್ತರಿಸಿದ ಆ ಕಿಡಿಗೇಡಿ ಯುವಕ, ಅಲ್ಲಿಂದ ಹೆದರಿ ಓಟ ಕಿತ್ತಿದ್ದಾನೆ. ಈ ಘಟನೆ ಲಿಂಗಸುಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದೆ.

ಬಸ್ ನಿಲ್ದಾಣದಲ್ಲಿ ನಡೆದಿದ್ದೇನು?

ಲಿಂಗಸುಗೂರು ಬಸ್ ನಿಲ್ದಾಣದಲ್ಲಿ ಎಂದಿನಂತೆ ಪ್ರಯಾಣಿಕರ ದಟ್ಟಣೆ ಇತ್ತು. ಅದೇ ಸಮಯದಲ್ಲಿ ಮಹಿಳೆಯೊಬ್ಬರು ತಮ್ಮ ಊರಿಗೆ ಹೋಗಲು ಬಸ್‌ಗಾಗಿ ಕಾಯುತ್ತಾ ನಿಂತಿದ್ದರು. ಇದೇ ವೇಳೆ ಅಲ್ಲಿಗೆ ಬಂದ ಅಪರಿಚಿತ ಯುವಕನೊಬ್ಬ ಆ ಮಹಿಳೆಯನ್ನು ನೋಡಿ ವಿಕೃತವಾಗಿ ಆಡಲು ಶುರು ಮಾಡಿದ್ದಾನೆ. ಮೊದಲಿಗೆ ಆಕೆಯ ಸುತ್ತಮುತ್ತ ಸುಳಿದಾಡುತ್ತಾ ಕಣ್ಣ ಸಜ್ಞೆ ಮಾಡುವುದು, ಪಿಸುಮಾತಿನಲ್ಲಿ ಕಾಮೆಂಟ್ ಪಾಸ್ ಮಾಡುವುದು ಮಾಡಿದ್ದಾನೆ.

ಮಹಿಳೆ ಇದನ್ನು ನೋಡಿಯೂ ನೋಡದಂತೆ ಸುಮ್ಮನಾಗಿದ್ದಾಳೆ. ಆದರೆ, ಮಹಿಳೆಯ ಮೌನವನ್ನು ತಪ್ಪು ತಿಳಿಕೊಂಡ ಆ ರೋಡ್ ರೋಮಿಯೋ ತನ್ನ ಮಿತಿ ಮೀರಿದ್ದಾನೆ. ನೇರವಾಗಿ ಆಕೆಯ ಹತ್ತಿರ ಬಂದು ಅಸಭ್ಯವಾಗಿ ಮಾತನಾಡುತ್ತಾ, ಅನುಚಿತವಾಗಿ ವರ್ತಿಸಲು ಮುಂದಾಗಿದ್ದಾನೆ.

ಚಪ್ಪಲಿ ಕೈಗೆತ್ತಿಕೊಂಡ ನಾರಿ, ಕಿಡಿಗೇಡಿಗೆ ಸಾರ್ವಜನಿಕರ ಕ್ಲಾಸ್!

ಯುವಕನ ಅತಿರೇಕದ ವರ್ತನೆ ಮತ್ತು ಕಾಟ ಸಹಿಸಿಕೊಳ್ಳಲು ಆ ಮಹಿಳೆಗೆ ಸಾಧ್ಯವಾಗಲಿಲ್ಲ. ತಕ್ಷಣವೇ ರೊಚ್ಚಿಗೆದ್ದ ಆಕೆ, ಜನರೆದುರೇ ತನ್ನ ಕಾಲಲ್ಲಿದ್ದ ಚಪ್ಪಲಿಯನ್ನು ಕೈಗೆತ್ತಿಕೊಂಡು ಆ ಕಿಡಿಗೇಡಿ ಯುವಕನಿಗೆ ಮನಬಂದಂತೆ ರೇಂಜಿಗೆ ತಕ್ಕ ಹಾಗೆ ಬಾರಿಸಲು ಶುರು ಮಾಡಿದ್ದಾಳೆ. ತುಂಬಿದ ಬಸ್ ನಿಲ್ದಾಣದಲ್ಲಿ ಮಹಿಳೆ ಚಪ್ಪಲಿ ಹಿಡಿದು ಹೊಡೆಯುತ್ತಿದ್ದಂತೆ ಅಲ್ಲಿ ಭಾರಿ ಹಂಗಾಮಾ ಸೃಷ್ಟಿಯಾಯಿತು.

ಸಾರ್ವಜನಿಕರ ಧರ್ಮದೇಟು: ಮಹಿಳೆ ಯುವಕನಿಗೆ ಚಪ್ಪಲಿಯಿಂದ ತರಾಟೆಗೆ ತಗೆದುಕೊಳ್ಳುತ್ತಿರುವುದನ್ನು ನೋಡಿದ ಸುತ್ತಮುತ್ತಲಿನ ಸಹ ಪ್ರಯಾಣಿಕರು ಮತ್ತು ಸಾರ್ವಜನಿಕರು ತಕ್ಷಣವೇ ಅಲ್ಲಿಗೆ ಧಾವಿಸಿ ಬಂದರು. ಅಸಲಿ ಮ್ಯಾಟರ್ ತಿಳಿಯುತ್ತಿದ್ದಂತೆ ಸಾರ್ವಜನಿಕರ ಆಕ್ರೋಶ ಮುಗಿಲು ಮುಟ್ಟಿತು. ಮಹಿಳೆಗೆ ಸಾಥ್ ನೀಡಿದ ನೆರೆದಿದ್ದ ಜನರೆಲ್ಲ ಸೇರಿ ಆ ಲಫಂಗ ಯುವಕನಿಗೆ ಸರಿಯಾಗಿಯೇ ಧರ್ಮದೇಟು ಕೊಟ್ಟಿದ್ದಾರೆ. ಎಲ್ಲರಿಂದಲೂ ಗೂಸಾ ತಿಂದ ಯುವಕನಿಗೆ ಅಲ್ಲಿ ನಿಲ್ಲಲು ಜಾಗವಿಲ್ಲದಂತಾಗಿ, ಪ್ರಾಣ ಉಳಿಸಿಕೊಂಡರೆ ಸಾಕು ಎಂದು ಸ್ಥಳದಿಂದ ಕಾಲ್ಕಿತ್ತಿದ್ದಾನೆ.

ಲಿಂಗಸುಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹೈಡ್ರಾಮಾ

ಈ ಇಡೀ ಹೈಡ್ರಾಮಾ ಲಿಂಗಸುಗೂರು ಬಸ್ ನಿಲ್ದಾಣದಲ್ಲಿ ಕೆಲಕಾಲ ಭಾರೀ ಸಂಚಲನ ಮೂಡಿಸಿತ್ತು. ಸದ್ಯ ಈ ಘಟನೆ ಲಿಂಗಸುಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಬಸ್ ನಿಲ್ದಾಣಗಳಲ್ಲಿ ಮಹಿಳೆಯರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಮತ್ತು ಇಂತಹ ರೋಡ್ ರೋಮಿಯೋಗಳ ಕಾಟಕ್ಕೆ ಬ್ರೇಕ್ ಹಾಕಲು ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ಪ್ರಯಾಣಿಕರು ಒತ್ತಾಯಿಸಿದ್ದಾರೆ.

ಯಾರೇ ಆದರೂ ಹೆಣ್ಣುಮಕ್ಕಳ ಜೊತೆ ಮಿಸ್ ಬಿಹೇವ್ ಮಾಡಲು ಬಂದರೆ ಸುಮ್ಮನೆ ಕೂರಬಾರದು, ಇದೇ ರೀತಿ ತಕ್ಕ ಶಾಸ್ತಿ ಮಾಡಬೇಕು ಎಂದು ನೆರೆದಿದ್ದ ಮಹಿಳೆಯರು ಆಕೆಯ ಧೈರ್ಯವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗ್ತಿದೆ.

Latest News