ಗದಗ ಜಿಲ್ಲೆಯ ನರಗುಂದ ತಾಲೂಕಿನ ಹುಣಸಿಕಟ್ಟಿ ಗ್ರಾಮದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಸಿದ್ದನಕೊಳ್ಳದ ಡಾ. ಶಿವಕುಮಾರ ಸ್ವಾಮೀಜಿಯವರು ರೈತರ ಮದುವೆ ಸಮಸ್ಯೆ ಕುರಿತು ಆಸಕ್ತಿದಾಯಕ ಹಾಗೂ ಗಂಭೀರವಾದ ವಿಚಾರವೊಂದನ್ನು ಪ್ರಸ್ತಾಪಿಸಿದ್ದಾರೆ. ಇಂದಿನ ಕಾಲಘಟ್ಟದಲ್ಲಿ ಕೃಷಿಯನ್ನೇ ನಂಬಿಕೊಂಡಿರುವ ಯುವಕರಿಗೆ ಹೆಣ್ಣು ಸಿಗುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಈ ಸಾಮಾಜಿಕ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿರುವ ಸಿದ್ದನಕೊಳ್ಳದ ಡಾ. ಶಿವಕುಮಾರ ಸ್ವಾಮೀಜಿಯವರು, ರೈತರಿಗೆ ಹೆಣ್ಣು ಕೊಡುವ ಕುಟುಂಬಗಳಿಗೆ ಸರ್ಕಾರದಿಂದ 2 ಲಕ್ಷ ರೂಪಾಯಿ ಸಹಾಯಧನ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಹುಣಸಿಕಟ್ಟಿ ಗ್ರಾಮದ ಕಾರ್ಯಕ್ರಮದಲ್ಲಿ ತಮ್ಮ ಎಂದಿನ ನಗೆ ಚಟಾಕಿ ಶೈಲಿಯಲ್ಲೇ ಮಾತನಾಡಿದ ಶ್ರೀಗಳು, ಮದುವೆ ಮಾರುಕಟ್ಟೆಯಲ್ಲಿ ರೈತ ಯುವಕರು ಅನುಭವಿಸುತ್ತಿರುವ ನೋವನ್ನು ಹಂಚಿಕೊಂಡರು. "ಇತ್ತೀಚಿನ ದಿನಗಳಲ್ಲಿ ಕೃಷಿ ಮಾಡುವ ಯುವಕರಿಗೆ ಕನ್ಯಾ ನೀಡುವುದು ತುಂಬಾ ಕಡಿಮೆಯಾಗಿದೆ. ಎಲ್ಲರೂ ಉದ್ಯೋಗಸ್ಥ ವರನನ್ನೇ ಹುಡುಕುತ್ತಿರುವುದರಿಂದ ಹಳ್ಳಿಗಳಲ್ಲಿನ ರೈತ ಯುವಕರು ಅವಿವಾಹಿತರಾಗಿಯೇ ಉಳಿಯುವಂತಾಗಿದೆ" ಎಂದು ವ್ಯಕ್ತಪಡಿಸಿದರು.
ಈ ಹಿಂದೆಯೂ ನಾನು ಈ ವಿಚಾರವನ್ನು ಪ್ರಸ್ತಾಪಿಸಿದ್ದೆ ಎಂದು ನೆನಪಿಸಿದ ಸ್ವಾಮೀಜಿಯವರು, ಮುಂದಿನ ದಿನಗಳಲ್ಲಿ ಸರ್ಕಾರ ಈ ಬಗ್ಗೆ ಯೋಚಿಸಬೇಕು ಎಂದಿದ್ದಾರೆ. ರೈತರಿಗೆ ಕನ್ಯೆ ನೀಡುವ ಪೋಷಕರಿಗೆ ಆರ್ಥಿಕ ಪ್ರೋತ್ಸಾಹ ಧನ ನೀಡಿದರೆ, ಕೃಷಿಕ ವರರನ್ನು ಸ್ವೀಕರಿಸಲು ಜನ ಮುಂದೆ ಬರಬಹುದು ಎನ್ನುವುದು ಅವರ ಆಶಯವಾಗಿದೆ.
ಶ್ರೀಗಳ ಈ ಹೇಳಿಕೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ರೈತ ಸಮುದಾಯದಿಂದ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಕೃಷಿ ಸಂಸ್ಕೃತಿಯನ್ನು ಉಳಿಸಲು ಇಂತಹ ಕ್ರಾಂತಿಕಾರಿ ನಿರ್ಧಾರಗಳ ಅಗತ್ಯವಿದೆ ಎಂದು ಶ್ರೀಗಳು ಅಭಿಪ್ರಾಯಪಟ್ಟಿದ್ದಾರೆ.