ಹೈದರಾಬಾದ್‌ನಲ್ಲಿ ನಡೆದ ಭೀಕರ ಕೊಲೆ ಪ್ರಕರಣವೊಂದು ಇಡೀ ಐಟಿ ಲೋಕವನ್ನೇ ಬೆಚ್ಚಿಬೀಳಿಸಿದೆ. ಸೇಡಿನ ಜ್ವಾಲೆಯಲ್ಲಿ ಬೆಂದ ಟೆಕ್ಕಿಯೊಬ್ಬ ತನ್ನ ಮಾಜಿ ಪತ್ನಿಯ ಮನೆಗೆ ನುಗ್ಗಿ ಆಕೆಯನ್ನು ಕ್ರೂರವಾಗಿ ಹತ್ಯೆ ಮಾಡಿದ್ದಾನೆ.
ಕೊ* ಮಾಡಿದ ವ್ಯಕ್ತಿ ವೃತ್ತಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದು, ಕೆನಡಾದ ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಈತ 2022 ರಲ್ಲಿ ಮೃತ ಮಹಿಳೆಯನ್ನು ವಿವಾಹವಾಗಿದ್ದ. ಮದುವೆಯ ನಂತರ ದಂಪತಿ ಕೆನಡಾಕ್ಕೆ ತೆರಳಿದ್ದರು. ಆದರೆ, ಅಲ್ಲಿ ಇಬ್ಬರ ನಡುವೆ ಭಿನ್ನಾಭಿಪ್ರಾಯಗಳು ಶುರುವಾಗಿ ಕಲಹ ಏರ್ಪಟ್ಟಿತ್ತು. ಪತಿಯ ಕಿರುಕುಳ ತಾಳಲಾರದೆ ಮಹಿಳೆ ಭಾರತಕ್ಕೆ ವಾಪಸ್ ಬಂದು ಮಹಾರಾಷ್ಟ್ರದಲ್ಲಿ ಪತಿಯ ವಿರುದ್ಧ ಕೌಟುಂಬಿಕ ದೌರ್ಜನ್ಯದ ದೂರು ದಾಖಲಿಸಿದ್ದರು.
ಈ ದೂರಿನ ಕಾರಣದಿಂದಾಗಿ ಟೆಕ್ಕಿಯ ವಿರುದ್ಧ 'ಲುಕ್-ಔಟ್' ನೋಟಿಸ್ ಜಾರಿಯಾಗಿತ್ತು ಮತ್ತು ಆತನ ಪಾಸ್‌ಪೋರ್ಟ್ ಅನ್ನು ಅಮಾನತುಗೊಳಿಸಲಾಗಿತ್ತು. ಇದರಿಂದಾಗಿ ಆತ ಕೆನಡಾಕ್ಕೆ ಹಿಂತಿರುಗಿ ಕೆಲಸಕ್ಕೆ ಸೇರಲು ಸಾಧ್ಯವಾಗದೆ ನಿರುದ್ಯೋಗಿಯಾದನು. ಇದೇ ಸಮಯದಲ್ಲಿ ಆತನ ತಾಯಿ ಮರಣ ಹೊಂದಿದ್ದರು. ತನ್ನ ಕೆಲಸ ಹೋದದ್ದಕ್ಕೆ ಮತ್ತು ತಾಯಿಯ ಸಾವಿಗೆ ಮಾಜಿ ಪತ್ನಿಯೇ ಕಾರಣ ಎಂದು ಆತ ಬಲವಾಗಿ ನಂಬಿದ್ದನು. 2024ರಲ್ಲಿ ಇಬ್ಬರಿಗೂ ವಿಚ್ಛೇದನವಾಗಿತ್ತು.
ವಿಚ್ಛೇದನದ ನಂತರ ಮಹಿಳೆ ಏಪ್ರಿಲ್ 2025 ರಲ್ಲಿ ಮರುಮದುವೆಯಾಗಿ ಹೈದರಾಬಾದ್‌ನಲ್ಲಿ ನೆಲೆಸಿದ್ದರು. ತನ್ನ ಬದುಕು ಹಾಳಾಗಲು ಆಕೆಯೇ ಕಾರಣ ಎಂದು ನಿರ್ಧರಿಸಿದ ಆರೋಪಿ, ಹೇಗಾದರೂ ಮಾಡಿ ಆಕೆಯನ್ನು ಕೊಲ್ಲಲು ಸಂಚು ರೂಪಿಸಿದನು. ಸಾಮಾಜಿಕ ಜಾಲತಾಣಗಳ ಮೂಲಕ ಆಕೆಯ ಹೊಸ ವಿಳಾಸವನ್ನು ಪತ್ತೆಹಚ್ಚಿದನು. ಕಳೆದ ಎರಡು ತಿಂಗಳಿನಿಂದ ಹೈದರಾಬಾದ್‌ನ ಹಾಸ್ಟೆಲ್ ಒಂದರಲ್ಲಿ ಉಳಿದುಕೊಂಡು ಆಕೆಯ ಚಲನವಲನಗಳನ್ನು ಗಮನಿಸುತ್ತಿದ್ದನು.
ಕೊ* ಮಾಡುವ ಉದ್ದೇಶದಿಂದಲೇ ಆತ ಎರಡು ಚಾಕುಗಳು, ಒಂದು ಡ್ರಿಲ್ಲಿಂಗ್ ಮೆಷಿನ್ ಮತ್ತು ಐದು ಲೀಟರ್ ಪೆಟ್ರೋಲ್ ಇರುವ ಕ್ಯಾನನ್ನು ಸಿದ್ಧಪಡಿಸಿಕೊಂಡಿದ್ದನು.
ಮಹಿಳೆಯು ತನ್ನ ಎರಡನೇ ಪತಿಯೊಂದಿಗೆ ಹೊಸ ಅಪಾರ್ಟ್‌ಮೆಂಟ್‌ಗೆ ಶಿಫ್ಟ್ ಆಗಿದ್ದರು. ಒಂದು ದಿನ ಆಕೆಯ ಪತಿ ಮನೆಯಲ್ಲಿ ಇಲ್ಲದ ಸಮಯ ನೋಡಿ ಆರೋಪಿ ಮನೆಗೆ ನುಗ್ಗಿದ್ದಾನೆ. ಮಹಿಳೆಯ ಅತ್ತೆ ಬಾಲ್ಕನಿಯಲ್ಲಿದ್ದಾಗ, ಆರೋಪಿಯು ಮಹಿಳೆ ಇದ್ದ ಕೋಣೆಯೊಳಗೆ ನುಗ್ಗಿ ಒಳಗಿನಿಂದ ಬಾಗಿಲು ಹಾಕಿಕೊಂಡಿದ್ದಾನೆ. ನಂತರ ಆಕೆಯ ತಲೆಗೆ ಚಾಕುವಿನಿಂದ ಹಲವು ಬಾರಿ ಇರಿದು ಅತ್ಯಂತ ಭೀಕರವಾಗಿ ಕೊಲೆ ಮಾಡಿದ್ದಾನೆ.
ಘಟನೆಯ ಸಮಯದಲ್ಲಿ ಮನೆಯಲ್ಲಿದ್ದವರು ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಸ್ಥಳಕ್ಕೆ ಬಂದಾಗ ಆರೋಪಿ ಇಡೀ ಕೋಣೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚುವುದಾಗಿ ಬೆದರಿಕೆ ಹಾಕಿದ್ದನು. ಅಲ್ಲದೆ ಶೌಚಾಲಯದ ಒಳಗೆ ಹೋಗಿ ಕುಳಿತಿದ್ದನು. ಪೊಲೀಸರು ಆತನನ್ನು ಬಹಳ ಹೊತ್ತು ಮನವೊಲಿಸಿ ಹೊರಗೆ ಬರುವಂತೆ ಮಾಡಿ, ನಂತರ ವಶಕ್ಕೆ ಪಡೆದರು.
ಮೃತ ಮಹಿಳೆಯ ಎರಡನೇ ಪತಿಯು ಪೊಲೀಸರಿಗೆ ನೀಡಿದ ದೂರಿನಲ್ಲಿ, "ನನ್ನ ಪತ್ನಿ ಮೂರು ತಿಂಗಳ ಗರ್ಭಿಣಿಯಾಗಿದ್ದಳು" ಎಂದು ತಿಳಿಸಿದ್ದಾರೆ. ಆದರೆ ಪೊಲೀಸರು ಈ ವಿಷಯವನ್ನು ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರವಷ್ಟೇ ದೃಢಪಡಿಸುವುದಾಗಿ ಹೇಳಿದ್ದಾರೆ. ಹಗೆತನ ಮತ್ತು ಸೇಡಿನ ಮನೋಭಾವವು ಒಬ್ಬ ವಿದ್ಯಾವಂತ ಟೆಕ್ಕಿಯನ್ನು ಹಂತಕನನ್ನಾಗಿ ಮಾಡಿದ್ದು ನಿಜಕ್ಕೂ ದುರಂತ.