ರಾಜಸ್ಥಾನದ ಕುಚಮನ್ ನಗರದಲ್ಲಿ ನಡೆದ ಮದುವೆ ಕಾರ್ಯಕ್ರಮವು ವಿಶಿಷ್ಟ ಸಂದೇಶ ನೀಡುವ ಮೂಲಕ ಎಲ್ಲರ ಗಮನ ಸೆಳೆದಿದೆ. ಮನೋಜ್ ಬರ್ವಾಲ್ ಅವರ ಮಗಳ ಮದುವೆಗೆ ಆಗಮಿಸಿದ ಅತಿಥಿಗಳಿಗೆ ವಧುವಿನ ಅಜ್ಜರು ಹೆಲ್ಮೆಟ್‌ಗಳನ್ನು ಉಡುಗೊರೆಯಾಗಿ ನೀಡಿದ್ದು, ಈ ಕಾರ್ಯಕ್ರಮ ಸಾಮಾಜಿಕ ಜವಾಬ್ದಾರಿಯ ಮಾದರಿಯಾಗಿದೆ.
ಮಾಹಿತಿಯ ಪ್ರಕಾರ, ಸುಮಾರು 286 ಅತಿಥಿಗಳಿಗೆ ಹೆಲ್ಮೆಟ್‌ಗಳನ್ನು ಹಂಚಲಾಯಿತು. ವಧು ಯಶ್ ಬೇಡ್ವಾಲ್ ಜೊತೆ ಸಪ್ತಪದಿ ತುಳಿದ ಬಳಿಕ, ಹೆಲ್ಮೆಟ್ ಹಿಡಿದು ಫೋಟೋ ತೆಗೆಸಿಕೊಂಡರು. ಈ ಮೂಲಕ ಮದುವೆಯ ಸಂತಸದಲ್ಲಿ ರಸ್ತೆ ಸುರಕ್ಷತೆ ಕುರಿತ ಸಂದೇಶವನ್ನು ಹಂಚುವ ಪ್ರಯತ್ನ ಮಾಡಲಾಯಿತು.
ವಧುವಿನ ಅಜ್ಜರು, “ರಸ್ತೆ ಅಪಘಾತಗಳನ್ನು ತಡೆಯಲು ಬೈಕ್‌ನಲ್ಲಿ ಪ್ರಯಾಣಿಸುವಾಗ ಹೆಲ್ಮೆಟ್ ಧರಿಸುವುದು ಅತ್ಯಂತ ಅಗತ್ಯ. ಜೀವದ ಸುರಕ್ಷತೆಗಾಗಿ ಪ್ರತಿಯೊಬ್ಬರೂ ಹೆಲ್ಮೆಟ್ ಬಳಸಬೇಕು” ಎಂದು ಸಲಹೆ ನೀಡಿದರು. ಮದುವೆಯಂತಹ ಹಬ್ಬದ ಸಂದರ್ಭದಲ್ಲಿ ಇಂತಹ ಸಾಮಾಜಿಕ ಸಂದೇಶ ನೀಡಿರುವುದು ಅತಿಥಿಗಳಿಗೆ ಹೊಸ ಅನುಭವವಾಯಿತು.
ಅತಿಥಿಗಳು ಈ ಉಡುಗೊರೆಯನ್ನು ಸ್ವೀಕರಿಸಿ ಸಂತಸ ವ್ಯಕ್ತಪಡಿಸಿದರು. ಸಾಮಾನ್ಯವಾಗಿ ಮದುವೆಗಳಲ್ಲಿ ಸಿಹಿ, ಉಡುಗೊರೆ, ಸ್ಮರಣಿಕೆಗಳನ್ನು ನೀಡುವ ಪದ್ಧತಿ ಇದ್ದರೂ, ಈ ಬಾರಿ ಹೆಲ್ಮೆಟ್ ನೀಡುವ ಮೂಲಕ ಜೀವ ರಕ್ಷಣೆ ಕುರಿತ ಜಾಗೃತಿ ಮೂಡಿಸಲಾಗಿದೆ.
ಈ ಘಟನೆ ಸ್ಥಳೀಯವಾಗಿ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. “ಮದುವೆ ಉಡುಗೊರೆಯಾಗಿ ಹೆಲ್ಮೆಟ್ ನೀಡುವುದು ನಿಜವಾದ ಸಮಾಜಮುಖಿ ಕಾರ್ಯ” ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಕುಚಮನ್ ನಗರದಲ್ಲಿ ನಡೆದ ಈ ಮದುವೆ, ರಸ್ತೆ ಸುರಕ್ಷತೆ, ಜೀವದ ಮಹತ್ವ ಹಾಗೂ ಸಾಮಾಜಿಕ ಜವಾಬ್ದಾರಿಯ ಸಂದೇಶವನ್ನು ಸಾರಿದ ಅಪರೂಪದ ಕಾರ್ಯಕ್ರಮವಾಗಿ ನೆನಪಾಗಲಿದೆ.