“ಟೀಕೆಗಳು ಸಾಯುತ್ತವೆ., ಕೆಲಸಗಳು ಉಳಿಯುತ್ತವೆ” ಕುವೆಂಪು ಸಾಲುಗಳನ್ನು ನೆನೆದು ಅಣ್ಣನ ಬಗ್ಗೆ ಭಾವುಕರಾದ ಡಿ.ಕೆ. ಸುರೇಶ್!!

ಕರ್ನಾಟಕ ರಾಜಕಾರಣದ ಇತಿಹಾಸದಲ್ಲಿ ಇಂದು ಒಂದು ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹ ದಿನ. ಕನಕಪುರದ ಬಂಡೆ, ಕೆಪಿಸಿಸಿ ಸಾರಥಿ ಡಿ.ಕೆ. ಶಿವಕುಮಾರ್ ಅವರು ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಇಂದು ಅದ್ಧೂರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇಡೀ ನಾಡು ಸಂಭ್ರಮಿಸುತ್ತಿರುವ ಈ ಐತಿಹಾಸಿಕ ಕ್ಷಣದಲ್ಲಿ ಡಿಕೆಶಿ ಅವರ ಒಡಹುಟ್ಟಿದ ಸಹೋದರ, ಮಾಜಿ ಸಂಸದ ಡಿ.ಕೆ. ಸುರೇಶ್ ಅವರು ತಮ್ಮ ಅಧಿಕೃತ 'ಎಕ್ಸ್' (ಟ್ವಿಟರ್) ಖಾತೆಯಲ್ಲಿ ಅಣ್ಣನ ಬಗ್ಗೆ ಅತ್ಯಂತ ಭಾವುಕ ಮತ್ತು ಹೃದಯಸ್ಪರ್ಶಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.

40 ವರ್ಷಗಳ ರಾಜಕೀಯ ಹೋರಾಟಕ್ಕೆ ಸಿಕ್ಕ ಪ್ರತಿಫಲ | Photo Credit: https://x.com/DKSureshINC
40 ವರ್ಷಗಳ ರಾಜಕೀಯ ಹೋರಾಟಕ್ಕೆ ಸಿಕ್ಕ ಪ್ರತಿಫಲ | Photo Credit: https://x.com/DKSureshINC

ರಾಷ್ಟ್ರಕವಿ ಕುವೆಂಪು ಅವರ ಸಾಲುಗಳನ್ನು ನೆನೆಯುತ್ತಾ ಅಣ್ಣನ 40 ವರ್ಷಗಳ ರಾಜಕೀಯ ಹೋರಾಟದ ಹಾದಿಯನ್ನು ಕಣ್ಣಿಗೆ ಕಟ್ಟುವಂತೆ ಬರೆದಿರುವ ಡಿ.ಕೆ. ಸುರೇಶ್ ಅವರ ಈ ಪೋಸ್ಟ್, ಇಬ್ಬರು ಸಹೋದರರ ನಡುವಿನ ಅಪಾರ ಪ್ರೀತಿ ಮತ್ತು ‘ಜೋಡೆತ್ತು’ಗಳ ಅಲುಗಾಡದ ಬಾಂದವ್ಯಕ್ಕೆ ಕನ್ನಡಿ ಹಿಡಿದಿದೆ.

“ಟೀಕೆಗಳು ಸಾಯುತ್ತವೆ… ಕೆಲಸಗಳು ಉಳಿಯುತ್ತವೆ”

ಡಿ.ಕೆ. ಸುರೇಶ್ ಅವರು ತಮ್ಮ ಪೋಸ್ಟ್‌ನಲ್ಲಿ ರಾಷ್ಟ್ರಕವಿಗಳ ಸಾಲುಗಳನ್ನು ಉಲ್ಲೇಖಿಸಿ ಅಣ್ಣನಿಗೆ ಗೌರವ ಸಲ್ಲಿಸಿದ್ದಾರೆ. "“ಟೀಕೆಗಳು ಸಾಯುತ್ತವೆ… ಕೆಲಸಗಳು ಉಳಿಯುತ್ತವೆ” ಕುವೆಂಪು ಅವರ ಈ ಅದ್ಭುತ ಮಾತನ್ನು ಅಕ್ಷರಶಃ ತಮ್ಮ ಜೀವನದಲ್ಲಿ ಪಾಲಿಸಿಕೊಂಡು ಬಂದವರು ನನ್ನ ಪ್ರೀತಿಯ ಒಡಹುಟ್ಟಿದ ಸಹೋದರ ಡಿ.ಕೆ. ಶಿವಕುಮಾರ್.‌ ಇಂದು ಅವರು ನಾಡಿನ 25ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಅವಿಸ್ಮರಣೀಯ ಸುಂದರ ಕ್ಷಣಕ್ಕೆ ಸಾಕ್ಷಿಯಾಗಿದ್ದು ನನ್ನ ಜೀವನದ ಅತಿ ದೊಡ್ಡ ಭಾಗ್ಯವೆಂದು ನಾನು ಪರಿಗಣಿಸುತ್ತೇನೆ," ಎಂದು ಸುರೇಶ್ ಭಾವುಕರಾಗಿದ್ದಾರೆ.

ಮುಂದುವರಿದು ಅಣ್ಣನ ಕಠಿಣ ಪರಿಶ್ರಮದ ದಿನಗಳನ್ನು ನೆನೆದ ಸುರೇಶ್, "ಕಳೆದ 40 ವರ್ಷಗಳ ಸುದೀರ್ಘ ಕಾಲದಿಂದ ಕೇವಲ ಪಕ್ಷ ನಿಷ್ಠೆಯಿಂದ ನಾಡಿನ ಜನರಿಗಾಗಿ ಮತ್ತು ಕಾಂಗ್ರೆಸ್ ಪಕ್ಷದ ಸಂಘಟನೆಗಾಗಿ ಡಿ.ಕೆ. ಶಿವಕುಮಾರ್‌ ಅವರು ಹಗಲಿರುಳು ಹೋರಾಡಿದ್ದರು. ಆ ಸುದೀರ್ಘ ಶ್ರಮಕ್ಕೆ ಹಾಗೂ ತ್ಯಾಗಕ್ಕೆ ಇಂದು ಸೂಕ್ತ ಪ್ರತಿಫಲ ಸಿಕ್ಕಿದೆ. ನನ್ನ ಅಣ್ಣನಿಗೆ ಇಂತಹದೊಂದು ಮಹತ್ತರ ಅವಕಾಶವನ್ನು ಕಲ್ಪಿಸಿಕೊಟ್ಟ ನಾಡಿನ ಸಮಸ್ತ ಮಹಾಜನತೆಗೆ ನಾನು ಹೃದಯಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ," ಎಂದಿದ್ದಾರೆ.

ರಾಜಕೀಯದ ಅಪ್ರತಿಮ ‘ಜೋಡೆತ್ತುಗಳು’!

ಕರ್ನಾಟಕದ ರಾಜಕೀಯ ಇತಿಹಾಸದಲ್ಲೇ ಡಿ.ಕೆ. ಶಿವಕುಮಾರ್ ಮತ್ತು ಡಿ.ಕೆ. ಸುರೇಶ್ ಅವರ ಜೋಡಿಯನ್ನು ‘ರಾಜಕೀಯದ ಜೋಡೆತ್ತುಗಳು’ ಎಂದೇ ಕರೆಯಲಾಗುತ್ತದೆ. ಒಬ್ಬರನ್ನೊಬ್ಬರು ಬಿಟ್ಟಿರದ, ಯಾವುದೇ ಕಷ್ಟದ ಪರಿಸ್ಥಿತಿ ಬಂದರೂ ಅಣ್ಣನಿಗೆ ಶ್ರೀರಕ್ಷೆಯಾಗಿ ನಿಲ್ಲುವ ಧೀಮಂತ ಶಕ್ತಿ ಡಿ.ಕೆ. ಸುರೇಶ್. ರಾಜಕೀಯವಾಗಿ ಡಿಕೆಶಿ ಅವರು ಕಠಿಣ ಸವಾಲುಗಳನ್ನು ಎದುರಿಸಿದಾಗ, ಜೈಲು ವಾಸ ಅನುಭವಿಸಿದಾಗ ಅಥವಾ ಐಟಿ-ಇಡಿ ದಾಳಿಗಳಿಗೆ ಸಿಲುಕಿದಾಗ ಅಣ್ಣನ ಬೆನ್ನಿಗೆ ಬಂಡೆಯಂತೆ ನಿಂತಿದ್ದು ಇದೇ ಸುರೇಶ್.

ಅಣ್ಣ ರಾಷ್ಟ್ರ ರಾಜಕಾರಣ ಮತ್ತು ರಾಜ್ಯ ರಾಜಕಾರಣದಲ್ಲಿ ಬ್ಯುಸಿಯಾಗಿದ್ದಾಗ ಕನಕಪುರ ಹಾಗೂ ಬೆಂಗಳೂರು ಗ್ರಾಮಾಂತರ ಭಾಗದ ಇಡೀ ಕೋಟೆಯನ್ನು ಸುರೇಶ್ ಅವರೇ ಕಾಯುತ್ತಿದ್ದರು. ಇಂದು ಅಣ್ಣ ರಾಜ್ಯದ ಅತ್ಯುನ್ನತ ಮುಖ್ಯಮಂತ್ರಿ ಹುದ್ದೆಗೇರುವಾಗ ಸುರೇಶ್ ಅವರ ಕಣ್ಣಾಲಿಗಳು ತುಂಬಿ ಬಂದಿದ್ದು ಸಹಜವಾಗಿತ್ತು. "“ಜನರಿಂದ.. ಜನರಿಗಾಗಿ… ಜನರಿಗೋಸ್ಕರ” ಎಂಬ ಬಲಿಷ್ಠ ಧ್ಯೇಯವಾಕ್ಯದೊಂದಿಗೆ ಮುಖ್ಯಮಂತ್ರಿ ಹುದ್ದೆ ಸ್ವೀಕರಿಸಿದ ನನ್ನ ಸಹೋದರ ಡಿ.ಕೆ. ಶಿವಕುಮಾರ್‌ ಅವರು ಅತ್ಯಂತ ಉತ್ತಮ ರೀತಿಯಲ್ಲಿ ನಮ್ಮ ಹೆಮ್ಮೆಯ ರಾಜ್ಯವನ್ನು ಮುನ್ನಡೆಸುತ್ತಾರೆ ಎಂಬ ಸಂಪೂರ್ಣ ವಿಶ್ವಾಸ ನನಗಿದೆ. ಇನ್ಮುಂದೆಯೂ ನಿಮ್ಮ ಪ್ರೀತಿ, ಆಶೀರ್ವಾದ ಹಾಗೂ ಬೆಂಬಲ ಅವರ ಮೇಲೆ ಸದಾ ಹೀಗೆಯೇ ಇರಲಿ ಎಂದು ಆಶಿಸುತ್ತೇನೆ," ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ನೂತನ ಸಚಿವ ಸಂಪುಟದ ಸದಸ್ಯರಿಗೆ ಶುಭಾಶಯಗಳ ಮಹಾಪೂರ

ಮುಖ್ಯಮಂತ್ರಿಗಳ ಜೊತೆಗೆ ಇಂದು ಸಚಿವರಾಗಿ ಅದ್ಧೂರಿಯಾಗಿ ಪ್ರಮಾಣವಚನ ಸ್ವೀಕರಿಸಿದ ರಾಜ್ಯದ ಹಿರಿಯ ಮತ್ತು ಯುವ ನಾಯಕರ ತಂಡಕ್ಕೂ ಡಿ.ಕೆ. ಸುರೇಶ್ ಅವರು ಮುಕ್ತ ಕಂಠದಿಂದ ಅಭಿನಂದನೆ ಸಲ್ಲಿಸಿದ್ದಾರೆ.

ಸಚಿವರಾದ ಶ್ರೀ ಡಾ. ಜಿ. ಪರಮೇಶ್ವರ್‌, ಶ್ರೀ ಕೆ.ಹೆಚ್‌ ಮುನಿಯಪ್ಪ, ಶ್ರೀ ಕೆ.ಜೆ ಜಾರ್ಜ್‌, ಶ್ರೀ ಎಂ.ಬಿ ಪಾಟೀಲ್‌, ಶ್ರೀ ರಾಮಲಿಂಗಾ ರೆಡ್ಡಿ, ಶ್ರೀ ಸತೀಶ್‌ ಜಾರಕಿಹೊಳಿ, ಶ್ರೀ ಕೃಷ್ಣ ಭೈರೇಗೌಡ, ಶ್ರೀ ಪ್ರಿಯಾಂಕ್‌ ಖರ್ಗೆ, ಶ್ರೀ ಯು.ಟಿ ಖಾದರ್‌, ಶ್ರೀ ಈಶ್ವರ್‌ ಖಂಡ್ರೆ, ಶ್ರೀ ಯತೀಂದ್ರ ಸಿದ್ದರಾಮಯ್ಯ, ಶ್ರೀ ಭೈರತಿ ಸುರೇಶ್‌ ಹಾಗೂ ಶ್ರೀ ಶರಣಪ್ರಕಾಶ್‌ ಪಾಟೀಲ್‌ ಸೇರಿದಂತೆ ಪ್ರಮಾಣವಚನ ಸ್ವೀಕರಿಸಿದ ಪ್ರತಿಯೊಬ್ಬರಿಗೂ ಸುರೇಶ್ ಶುಭ ಹಾರೈಸಿದ್ದಾರೆ.

"ನಮ್ಮ ಇಡೀ ರಾಜ್ಯದ ಒಳಿತಿಗಾಗಿ, ಸರ್ವ ಜನಾಂಗದ ಶಾಂತಿಯ ತೋಟದ ಏಳಿಗೆಗಾಗಿ ಮತ್ತು ಜನರ ಸಮಗ್ರ ಅಭಿವೃದ್ಧಿಗಾಗಿ ನೀವೆಲ್ಲರೂ ಹೊಸ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಒಗ್ಗಟ್ಟಾಗಿ ಕಾರ್ಯನಿರ್ವಹಿಸುತ್ತೀರಿ ಎಂಬ ಗಟ್ಟಿ ನಂಬಿಕೆ ನನಗಿದೆ. ನಿಮ್ಮೆಲ್ಲರ ಜಂಟಿ ಶ್ರಮದಿಂದ ನವ ಕರ್ನಾಟಕವನ್ನು ಯಶಸ್ಸಿನ ಉತ್ತುಂಗಕ್ಕೆ ಕೊಂಡೊಯ್ಯುವಂತಾಗಲಿ," ಎಂದು ಡಿ.ಕೆ. ಸುರೇಶ್ ಅವರು ತಮ್ಮ ಪೋಸ್ಟ್‌ನಲ್ಲಿ ಆಶಿಸಿದ್ದಾರೆ. ಅಣ್ಣ-ತಮ್ಮಂದಿರ ಈ ಅಪರೂಪದ ಸ್ನೇಹ, ಗೌರವದ ಪೋಸ್ಟ್ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗ್ತಿದೆ.

Latest News