ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಕೆಂಪನಹಳ್ಳಿ ಗ್ರಾಮದಲ್ಲಿ ನಡೆದ ಕ್ರಿಕೆಟ್ ಪಂದ್ಯಾವಳಿಯ ಉದ್ಘಾಟನಾ ಸಮಾರಂಭದಲ್ಲಿ ಮಾಜಿ ಸಂಸದ ಡಿ.ಕೆ. ಸುರೇಶ್ ಅವರು ಮಾರ್ಮಿಕ ನುಡಿಗಳನ್ನು ಹಂಚಿಕೊಂಡರು. ಕಾಂಗ್ರೆಸ್ ಪಾಳೆಯದಲ್ಲಿ ಪವರ್ ಶೇರಿಂಗ್ ಕಾದಾಟ ನಡೆಯುತ್ತಿರುವ ಸಂದರ್ಭದಲ್ಲಿ ಅವರ ಮಾತುಗಳು ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿವೆ. ಕುಣಿಗಲ್ ಉತ್ಸವದ ಅಂಗವಾಗಿ ನಡೆದ ಕ್ರಿಕೆಟ್ ಪಂದ್ಯಾವಳಿಯನ್ನು ಡಿ.ಕೆ. ಶಿವಕುಮಾರ್ ಚಾರಿಟೇಬಲ್ ಟ್ರಸ್ಟ್ ಆಯೋಜಿಸಿತ್ತು. ಉದ್ಘಾಟನಾ ಪಂದ್ಯದಲ್ಲಿ ಶಾಸಕ ಡಾ. ರಂಗನಾಥ ಬೌಲಿಂಗ್‌ಗೆ ಡಿ.ಕೆ. ಸುರೇಶ್ ಬೌಂಡರಿ ಬಾರಿಸಿ ಕ್ರೀಡಾಸ್ಪೂರ್ತಿಯನ್ನು ತೋರಿಸಿದರು. ಬಳಿಕ ವೇದಿಕೆ ಭಾಷಣದಲ್ಲಿ ಅವರು ರಾಜಕೀಯ ಮತ್ತು ಜೀವನದ ಗೆಲುವು–ಸೋಲಿನ ತತ್ವವನ್ನು ಹಂಚಿಕೊಂಡರು.
“ಪ್ರಯತ್ನ ಮಾಡ್ತಿದ್ದಿವಿ ಎಂದ ಮೇಲೆ ಒಂದಲ್ಲ ಒಂದು ದಿನ ಗೆಲ್ಲಲೇಬೇಕು. ಒಬ್ಬರು ಗೆಲ್ಲಲೇಬೇಕು, ಇನ್ನೊಬ್ಬರು ಸೋಲಲೇಬೇಕು. ಎಲ್ಲಾ ಚಟುವಟಿಕೆಗಳಲ್ಲಿ ಸೋಲು–ಗೆಲುವು ಇರಲೇಬೇಕು. ರಾಜಕೀಯದಲ್ಲೂ ಇದೇ ತತ್ವ ಅನ್ವಯಿಸುತ್ತದೆ. ಗೆದ್ದಿದ್ದೇವೆ ಎಂದು ಮೇಲಕ್ಕೆ ಹೋಗೋಕೆ ಆಗಲ್ಲ, ಸೋತಿದ್ದೇವೆ ಎಂದು ಪ್ರಯತ್ನ ಬಿಡೋಕೆ ಆಗಲ್ಲ” ಎಂದು ಅವರು ಹೇಳಿದರು. ಕ್ರೀಡಾಪಟುಗಳ ನಿರಂತರ ಪ್ರಯತ್ನವನ್ನು ಉದಾಹರಿಸಿ, “ನಿಮ್ಮ ಆಶೀರ್ವಾದದಿಂದ ನನ್ನ ಪ್ರಯತ್ನವೂ ನಿರಂತರವಾಗಿ ಇರುತ್ತದೆ” ಎಂದು ಜನತೆಗೆ ಸಂದೇಶ ನೀಡಿದರು. ಸೋಲು–ಗೆಲುವು ಜೀವನದ ಒಂದು ಭಾಗವಾಗಿದ್ದು, ಎಲ್ಲವನ್ನೂ ಸಮಾನವಾಗಿ ತೆಗೆದುಕೊಳ್ಳಬೇಕು ಎಂದು ಅವರು ಒತ್ತಿ ಹೇಳಿದರು.
ಡಿ.ಕೆ. ಸುರೇಶ್ ಅವರ ಈ ಮಾರ್ಮಿಕ ಮಾತುಗಳಿಗೆ ವೇದಿಕೆಯ ಮೇಲಿದ್ದ ಗಣ್ಯರು ನಸುನಕ್ಕು ಪ್ರತಿಕ್ರಿಯಿಸಿದರು. ಅವರ ಮಾತುಗಳು ರಾಜಕೀಯ ಪೈಪೋಟಿ, ಕ್ರೀಡಾಸ್ಪೂರ್ತಿ ಮತ್ತು ಜೀವನದ ತತ್ವಗಳನ್ನು ಒಂದೇ ವೇದಿಕೆಯಲ್ಲಿ ಪ್ರತಿಬಿಂಬಿಸಿದವು.