ತಮಿಳುನಾಡಿನಲ್ಲಿ ವಿಜಯ್ ನೇತೃತ್ವದ ಟಿವಿಕೆ ಪಕ್ಷ ಸರ್ಕಾರ ರಚನೆ ಮಾಡಲು ಮುಂದಾಗಿರುವ ಬೆನ್ನಲ್ಲೇ, ರಾಜ್ಯಪಾಲರು ವಿಳಂಬ ಮಾಡುತ್ತಿರುವುದಕ್ಕೆ ಡಿ.ಕೆ. ಸುರೇಶ್ ಕಿಡಿಕಾರಿದ್ದಾರೆ. "ಟಿವಿಕೆಗೆ ಸರ್ಕಾರ ರಚಿಸಲು ಸಂವಿಧಾನಬದ್ಧವಾಗಿ ಎಲ್ಲಾ ಅವಕಾಶಗಳಿವೆ. ಅವರ ಹತ್ತಿರ ಬೇಕಾದಷ್ಟು ನಂಬರ್ಸ್ (ಸಂಖ್ಯಾಬಲ) ಕೂಡ ಇದೆ. ಬೇರೆ ಯಾರಾದರೂ ತಮಗೆ ಬಹುಮತ ಇದೆ ಎಂದು ಕ್ಲೈಮ್ ಮಾಡಿದ್ದರೆ ರಾಜ್ಯಪಾಲರು ಯೋಚನೆ ಮಾಡಲಿ, ಆದರೆ ಯಾರೂ ಇಲ್ಲದಿದ್ದರೂ ಯಾಕೆ ತಡ ಮಾಡುತ್ತಿದ್ದಾರೆ?" ಎಂದು ಪ್ರಶ್ನಿಸಿದ್ದಾರೆ.
ಇದರ ಹಿಂದೆ ಬಿಜೆಪಿಯ ಕೇಂದ್ರ ಸರ್ಕಾರ ಇದೆ ಎಂಬುದು ಅವರ ನೇರ ಆರೋಪ. "ಮೊದಲು ಐಟಿ, ಇಡಿ ಮತ್ತು ಸಿಬಿಐ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧ ಪಕ್ಷದವರನ್ನು ಬೆದರಿಸಲಾಗುತ್ತಿತ್ತು. ಈಗ ರಾಜ್ಯಪಾಲರ ಕಚೇರಿಯನ್ನೂ ಕೂಡ ರಾಜಕೀಯಕ್ಕೆ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಬಿಜೆಪಿಯೇತರ ಸರ್ಕಾರಗಳು ಅಧಿಕಾರಕ್ಕೆ ಬರದಂತೆ ಕೇಂದ್ರ ತೊಂದರೆ ಕೊಡುತ್ತಿದೆ. ಇಂತಹ ಸಾಂವಿಧಾನಿಕ ಹುದ್ದೆಗಳ ದುರುಪಯೋಗವನ್ನು ಬಿಜೆಪಿ ಮೊದಲು ನಿಲ್ಲಿಸಲಿ" ಎಂದು ಸುರೇಶ್ ಆಕ್ರೋಶ ಹೊರಹಾಕಿದ್ದಾರೆ.
ಡಿಎಂಕೆ ಬಿಟ್ಟು ಟಿವಿಕೆಗೆ ಕಾಂಗ್ರೆಸ್ ಬೆಂಬಲ?
ತಮಿಳುನಾಡಿನಲ್ಲಿ ಕಾಂಗ್ರೆಸ್ ಪಕ್ಷವು ಡಿಎಂಕೆ ಮೈತ್ರಿ ಬಿಟ್ಟು ಟಿವಿಕೆಗೆ ಬೆಂಬಲ ನೀಡುತ್ತಿದೆ ಎಂಬ ಸುದ್ದಿಯ ಬಗ್ಗೆಯೂ ಅವರು ಸ್ಪಷ್ಟನೆ ನೀಡಿದ್ದಾರೆ. "ನಾವು ಅಲ್ಲಿನ ಸ್ಥಳೀಯ ನಾಯಕರ ಜೊತೆ ಚರ್ಚಿಸಿ, ಅವರ ಗಮನಕ್ಕೆ ತಂದೇ ಈ ನಿರ್ಧಾರ ತೆಗೆದುಕೊಂಡಿದ್ದೇವೆ. ಪ್ರಜಾಪ್ರಭುತ್ವದಲ್ಲಿ ಸರ್ಕಾರ ರಚನೆಗೆ ಬೆಂಬಲ ನೀಡುವುದು ಸಹಜ ಪ್ರಕ್ರಿಯೆ. ಈ ಬಗ್ಗೆ ಡಿಎಂಕೆ ಕೂಡ 'ನಾವು ಸೈಲೆಂಟ್ ಆಗಿ ಇರುತ್ತೇವೆ' ಎಂದು ಈಗಾಗಲೇ ಹೇಳಿದೆ. ಹಾಗಾಗಿ ಮುಂದೆ ಏನಾಗುತ್ತೆ ಅನ್ನೋದನ್ನ ಕಾದು ನೋಡೋಣ" ಎಂದು ಮಾರ್ಮಿಕವಾಗಿ ಉತ್ತರಿಸಿದ್ದಾರೆ.
ಪಶ್ಚಿಮ ಬಂಗಾಳದ ರಾಜಕೀಯ ಪಿತೂರಿ
ಪಶ್ಚಿಮ ಬಂಗಾಳದ ಮಾಜಿ ಸಿಎಂ ಚುನಾವಣಾ ಆಯೋಗದ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಹೋಗುತ್ತಿರುವ ವಿಚಾರದ ಬಗ್ಗೆ ಮಾತನಾಡಿದ ಅವರು, ಅಲ್ಲಿ ಬಿಜೆಪಿಯ ಅಸಲಿ ಆಟ ನಡೆದಿದೆ ಎಂದಿದ್ದಾರೆ. "ಪಶ್ಚಿಮ ಬಂಗಾಳದಲ್ಲಿ ಹಣ ಮತ್ತು ತೋಳ್ಬಲದ ಪ್ರದರ್ಶನ ಜೋರಾಗಿ ನಡೆದಿದೆ. ಕಳೆದ ಒಂದು ವರ್ಷದಿಂದ ಹೇಗಾದರೂ ಮಾಡಿ ಅಲ್ಲಿನ ಮಮತಾ ಬ್ಯಾನರ್ಜಿ ಸರ್ಕಾರವನ್ನು ಕೆಳಗಿಳಿಸಲು ಬಿಜೆಪಿ ಪ್ಲಾನ್ ಮಾಡಿದೆ. ಸುಮಾರು 97 ಲಕ್ಷ ಮತದಾರರನ್ನು ಮತದಾರರ ಪಟ್ಟಿಯಿಂದ ಹೊರಹಾಕುವ ಕೆಲಸ ಮಾಡಿದ್ದಾರೆ. ಇದು ಟಿಎಂಸಿ ಪಕ್ಷಕ್ಕೆ ಹಿನ್ನಡೆ ಉಂಟುಮಾಡಲು ಬಿಜೆಪಿ ಮಾಡಿದ ವ್ಯವಸ್ಥಿತ ಪಿತೂರಿ" ಎಂದು ಗಂಭೀರವಾಗಿ ಆರೋಪಿಸಿದ್ದಾರೆ.
ಮೇ 15ಕ್ಕೆ ಡಿಸಿಎಂಗೆ 'ಗುಡ್ ನ್ಯೂಸ್' ಸಿಗುತ್ತಾ?
ಕೊನೆಯದಾಗಿ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮೇ 15 ರಂದು ಯಾವುದಾದರೂ ದೊಡ್ಡ ಸುದ್ದಿ ಸಿಗಲಿದೆಯೇ ಎಂಬ ಪ್ರಶ್ನೆಗೆ ಸುರೇಶ್ ಅವರು ಬಹಳ ಕೂಲ್ ಆಗಿಯೇ ಉತ್ತರಿಸಿದ್ದಾರೆ. "ನನಗೆ ಗೊತ್ತಿರುವುದು ಒಂದೇ, ಮೇ 15 ಡಿ.ಕೆ. ಶಿವಕುಮಾರ್ ಅವರ ಹುಟ್ಟುಹಬ್ಬ. ಶುಭ ಸುದ್ದಿ ಸಿಗುತ್ತಾ ಇಲ್ವಾ ಅನ್ನೋದನ್ನ ಕಾದು ನೋಡೋಣ. ನಾನು ಸದಾ ನಂಬಿಕೆಯ ಮೇಲೆ ಬದುಕುವವನು, ಒಳ್ಳೆಯದಾಗುವ ನಿರೀಕ್ಷೆ ನನಗೂ ಇದೆ" ಎಂದು ಮುಗುಳ್ನಕ್ಕಿದ್ದಾರೆ.
ಚನ್ನಪಟ್ಟಣದ ಭೇಟಿಯಲ್ಲಿ ಡಿ.ಕೆ. ಸುರೇಶ್ ಅವರು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸುವ ಮೂಲಕ ರಾಜ್ಯ ಮತ್ತು ಅಂತರರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದಾರೆ. ಬಿಜೆಪಿ ಸಾಂವಿಧಾನಿಕ ಸಂಸ್ಥೆಗಳನ್ನು ಬಳಸಿಕೊಂಡು ಪ್ರಾದೇಶಿಕ ಪಕ್ಷಗಳನ್ನು ಹತ್ತಿಕ್ಕುತ್ತಿದೆ ಎಂಬುದು ಅವರ ಮಾತಿನ ಸಾರಾಂಶವಾಗಿತ್ತು.