Feb 16, 2026 Languages : ಕನ್ನಡ | English

ದಾವಣಗೆರೆ ಬ್ರೇಕಿಂಗ್ – ಸಿಂಥೆಟಿಕ್ ಮಾದಕ ವಸ್ತು ಕೇಸ್‌ನಲ್ಲಿ ಸಚಿವ ಜಮೀರ್ ಆಪ್ತನ ಬಂಧನ!!

ದಾವಣಗೆರೆ ಜಿಲ್ಲೆಯ ತುರ್ಚಘಟ್ಟ ಗ್ರಾಮದಲ್ಲಿ ಸಿಂಥೆಟಿಕ್ ಮಾದಕ ವಸ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಬೆಳವಣಿಗೆ ನಡೆದಿದೆ. ಈ ಪ್ರಕರಣದಲ್ಲಿ ಸಚಿವ ಜಮೀರ್ ಅಹ್ಮದ್ ಅವರ ಆಪ್ತನಾದ ಅನ್ವರ್ ಪಾಷಾ ಬಂಧನಕ್ಕೊಳಗಾಗಿದ್ದಾರೆ. ಬೆಂಗಳೂರಿನ ಹೈಕೋರ್ಟ್‌ನಲ್ಲಿ ಜಮೀರ್ ಆಪ್ತನ ಬೇಲ್ ಕೂಡಾ ರದ್ದುಪಡಿಸಲಾಗಿದೆ. ದಾವಣಗೆರೆಯಲ್ಲಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರ ಆಪ್ತ ಸೇರಿ ಒಟ್ಟು 11 ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಸಿಂಥೆಟಿಕ್ ಮಾದಕ ವಸ್ತು ಪ್ರಕರಣ – 11 ಜನರ ಬಂಧನ
ಸಿಂಥೆಟಿಕ್ ಮಾದಕ ವಸ್ತು ಪ್ರಕರಣ – 11 ಜನರ ಬಂಧನ

ಬಂಧಿತ ಆರೋಪಿಗಳಲ್ಲಿ ಅನ್ವರ್ ಪಾಷಾ ಪ್ರಮುಖ ವ್ಯಕ್ತಿಯಾಗಿದ್ದು, ಸಚಿವ ಜಮೀರ್ ಅವರೊಂದಿಗೆ ಆಪ್ತ ಸಂಬಂಧ ಹೊಂದಿದ್ದಾನೆ ಎಂಬ ಮಾಹಿತಿ ಹೊರಬಂದಿದೆ. ಸಂಬಂಧಿಯ ಮದುವೆಗೆ ಸಚಿವ ಜಮೀರ್ ಅವರನ್ನು ಆಹ್ವಾನಿಸಿದ್ದ ಅನ್ವರ್ ಪಾಷಾ, ಆ ಸಂದರ್ಭದಲ್ಲಿ ಜಮೀರ್ ಅವರಿಂದ ಸಿಹಿ ಮುತ್ತು ಪಡೆದಿದ್ದ ಘಟನೆ ಇದೀಗ ಚರ್ಚೆಗೆ ಕಾರಣವಾಗಿದೆ. ಮಾದಕ ವಸ್ತು  ಪ್ರಕರಣದಲ್ಲಿ ಅನ್ವರ್ ಪಾಷಾ ಬಂಧನವಾದ ನಂತರ, ಜಮೀರ್ ಅವರ ಹೇಳಿಕೆಗಳು ಮತ್ತಷ್ಟು ಗಮನ ಸೆಳೆದಿವೆ.

ಸಚಿವ ಜಮೀರ್ ಅಹ್ಮದ್ ಅವರು ಈ ಕುರಿತು ಸ್ಪಷ್ಟನೆ ನೀಡುತ್ತಾ, “ಅನ್ವರ್ ಪಾಷಾ ನನಗೆ ಪರಿಚಯವಾಗಿದ್ದು, ಸಚಿವ ಮಲ್ಲಿಕಾರ್ಜುನ ಅವರ ಮೂಲಕ. ಅನ್ವರ್ ಮನೆ ಗೃಹ ಪ್ರವೇಶಕ್ಕೆ ಬರಬೇಕೆಂದು ಮಲ್ಲಿಕಾರ್ಜುನ ಹೇಳಿದಾಗಿನಿಂದ ಪರಿಚಯವಾಯಿತು. ಮುತ್ತು ನೀಡಿದ ವಿಚಾರ ನನ್ನ ಅಭ್ಯಾಸ. ನಾನು ಯಾರಿಗಾದರೂ ಮುತ್ತು ಕೊಡುತ್ತೇನೆ, ಅದರಲ್ಲಿ ವಿಶೇಷ ಅರ್ಥವಿಲ್ಲ” ಎಂದು ಹೇಳಿದ್ದಾರೆ.

ಈ ಹೇಳಿಕೆಗಳು ಸಾಮಾಜಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದ್ದು, ಡ್ರಗ್ ಪ್ರಕರಣದ ಗಂಭೀರತೆಯ ನಡುವೆ ಜಮೀರ್ ಅವರ ಸ್ಪಷ್ಟನೆ ಜನರಲ್ಲಿ ಕುತೂಹಲ ಮೂಡಿಸಿದೆ. ಅನ್ವರ್ ಪಾಷಾ ಬಂಧನವು ರಾಜಕೀಯ ವಲಯದಲ್ಲೂ ತೀವ್ರ ಚರ್ಚೆಗೆ ಕಾರಣವಾಗಿದ್ದು, ಸಚಿವರ ಆಪ್ತರು ಇಂತಹ ಪ್ರಕರಣಗಳಲ್ಲಿ ಸಿಲುಕಿರುವುದು ಸರ್ಕಾರದ ನೈತಿಕ ಹೊಣೆಗಾರಿಕೆಗೆ ಪ್ರಶ್ನೆ ಎಬ್ಬಿಸಿದೆ.

ಪೊಲೀಸರು ಪ್ರಕರಣದ ತನಿಖೆಯನ್ನು ಮುಂದುವರೆಸುತ್ತಿದ್ದು, ಬಂಧಿತ ಆರೋಪಿಗಳ ವಿಚಾರಣೆ ನಡೆಯುತ್ತಿದೆ. ಸಿಂಥೆಟಿಕ್ ಡ್ರಗ್ ಪ್ರಕರಣವು ದಾವಣಗೆರೆ ಸೇರಿದಂತೆ ರಾಜ್ಯದಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಬೆಳವಣಿಗೆಗಳು ಹೊರಬರುವ ನಿರೀಕ್ಷೆ ವ್ಯಕ್ತವಾಗಿದೆ. 

Latest News