ಧಾರವಾಡದಲ್ಲಿ ವಸತಿ ಸಚಿವ ಜಮೀರ್ ಅಹ್ಮದ್ ಅವರು ಹಲವು ಪ್ರಮುಖ ವಿಷಯಗಳ ಬಗ್ಗೆ ಮಾತನಾಡಿದರು. ಹೌದು ಮೊದಲಿಗೆ, ಜನವರಿ 24ರಂದು ಹುಬ್ಬಳ್ಳಿಯಲ್ಲಿ ನಡೆಯಲಿರುವ ಮನೆ ಹಂಚಿಕೆ ಕಾರ್ಯಕ್ರಮದ ಬಗ್ಗೆ ಅವರು ಮಾಹಿತಿ ನೀಡಿದರು. “ನಮ್ಮ ಸರ್ಕಾರದ ವಸತಿ ಇಲಾಖೆಯ ವತಿಯಿಂದ 42,350 ಮನೆಗಳನ್ನು ಬಡವರಿಗೆ ಉಚಿತವಾಗಿ ನೀಡಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ್ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ, ಹಾಗೂ ಹಲವು ಸಚಿವರು ಭಾಗವಹಿಸಲಿದ್ದಾರೆ. ಜೊತೆಗೆ ಜನಸಾಮಾನ್ಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು” ಎಂದು ಅವರು ಹೇಳಿದರು.
ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರದ ಬಗ್ಗೆ ಮಾತನಾಡಿದ ಜಮೀರ್ ಅಹ್ಮದ್, “ಬಿಜೆಪಿಯವರು ನವೆಂಬರ್ ಕ್ರಾಂತಿ ಎಂದು ಹೇಳಿಕೊಂಡಿದ್ದರು. ಆದರೆ ಯಾವುದೇ ಕ್ರಾಂತಿ ನಡೆದಿಲ್ಲ. ನವೆಂಬರ್ ಮುಗಿತು, ಡಿಸೆಂಬರ್ ಮುಗಿತು, ಸಂಕ್ರಾಂತಿ ಕೂಡ ಮುಗಿತು. ಈಗ ಯುಗಾದಿ ಬಾಕಿ ಇದೆ. ಸಿಎಂ ಕುರ್ಚಿಯಲ್ಲಿ ಸಿದ್ದರಾಮಯ್ಯ ಅವರು ಕೂತಿದ್ದಾರೆ. ಅವರನ್ನು ಬದಲಾವಣೆ ಮಾಡುವುದು ನಮ್ಮಿಂದ ಸಾಧ್ಯವಿಲ್ಲ, ಅದು ಪಕ್ಷದ ಹೈಕಮಾಂಡ ನಿರ್ಧಾರ. ಮಲ್ಲಿಕಾರ್ಜುನ್ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರ ನಿರ್ಧಾರಕ್ಕೆ ನಾವು ಬದ್ಧ” ಎಂದು ಸ್ಪಷ್ಟಪಡಿಸಿದರು.
ಅವರು ಇನ್ನೂ ಮುಂದೆ, “ಬಿಜೆಪಿಯ ಪದ್ದತಿ ಎಲ್ಲರಿಗೂ ಗೊತ್ತಿದೆ. ವರ್ಷಕ್ಕೊಮ್ಮೆ ಸಿಎಂ ಬದಲಾವಣೆ ಮಾಡುವುದು ಅವರ ಪಕ್ಷದಲ್ಲಿ ಸಾಮಾನ್ಯ. 2008 ರಿಂದ 2013ರವರೆಗೆ ಯಡಿಯೂರಪ್ಪ, ಸದಾನಂದಗೌಡ, ಜಗದೀಶ್ ಶಟ್ಟರ್ ಮೂವರು ಸಿಎಂ ಆಗಿದ್ದರು. 2019ರಲ್ಲಿ ಇಬ್ಬರು ಸಿಎಂ ಆಗಿದ್ದರು. ಕರ್ನಾಟಕದಲ್ಲಿ ಬಿಜೆಪಿಗೆ ಜನರು ಯಾವತ್ತೂ ಬಹುಮತ ನೀಡಿಲ್ಲ, ಬರಿ ಆಪರೇಶನ್ ಕಮಲ ಮೂಲಕ ಅಧಿಕಾರಕ್ಕೆ ಬಂದಿದ್ದಾರೆ” ಎಂದು ಹೇಳಿದರು.
ಧಾರವಾಡ ಸತ್ತೂರು ಬಳಿ ಕೆಎಚ್‌ಬಿ ಅಧಿಕಾರಿಗಳ ಹಣ ದುರ್ಬಳಕೆ ಪ್ರಕರಣದ ಬಗ್ಗೆ ಮಾತನಾಡಿದ ಸಚಿವರು, “ಕಾಮಗಾರಿ ಆಗದೆ 5 ಕೋಟಿ ರೂಪಾಯಿ ಬಿಲ್ ಮಾಡಿರುವ ಪ್ರಕರಣ ಮಾಧ್ಯಮಗಳಲ್ಲಿ ವರದಿಯಾಗಿದೆ. ಕೆಎಚ್‌ಬಿ ಎಇಇ ರಾಮಣ್ಣ ನಂದಿ ಅವರು ಗುತ್ತಿಗೆದಾರರಿಗೆ ಕಾಮಗಾರಿ ಮುಗಿಯುವ ಮುನ್ನವೇ ಬಿಲ್ ನೀಡಿದ್ದಾರೆ. ಈ ಬಗ್ಗೆ ಕಮಿಷನರ್‌ಗೆ ಕರೆ ಮಾಡಿ ವಿಚಾರಣೆ ನಡೆಸುವಂತೆ ಸೂಚನೆ ನೀಡಿದ್ದೇನೆ. ಅಕ್ರಮ ಸಾಬೀತಾದರೆ ಕ್ರಮ ಕೈಗೊಳ್ಳಬೇಕು. ಎಇಇ ಇನ್ವಾಲ್ವ್ ಆಗಿದ್ದರೆ ಅವನನ್ನು ಅಮಾನತು ಮಾಡಬೇಕು” ಎಂದು ಸ್ಪಷ್ಟ ಸೂಚನೆ ನೀಡಿದರು.