ಬೆಂಗಳೂರು ಮೆಟ್ರೋ ದರ ಏರಿಕೆ ವಿವಾದದ ಬೆನ್ನಲ್ಲೇ ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ಮತ್ತೊಂದು ದೊಡ್ಡ ಶಾಕ್ ಬಂದಿದೆ. ಹೌದು, 28,405 ಕೋಟಿ ರೂ. ವೆಚ್ಚದ ರೆಡ್ ಲೈನ್ ಯೋಜನೆಯ ಡಿಪಿಆರ್ (ವಿವರವಾದ ಯೋಜನಾ ವರದಿ) ಮರುಪರಿಶೀಲನೆಗೆ ಸೂಚನೆ ನೀಡಲಾಗಿದ್ದು, ಅನುಮೋದನೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ ಎಂದು ಕೇಳಿ ಬಂದಿದೆ.
ಡಬಲ್ ಡೆಕ್ಕರ್ ಫ್ಲೈಓವರ್ ವ್ಯವಸ್ಥೆ ಮಾಡಿದರೆ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಬಹುದು ಎಂಬ ಕಾರಣದಿಂದ, ಕೇಂದ್ರ ಸರ್ಕಾರ ಆಯ್ದ ಜಂಕ್ಷನ್‌ಗಳಲ್ಲಿ ಮಾತ್ರ ಡಬಲ್ ಡೆಕ್ಕರ್ ವ್ಯವಸ್ಥೆ ಮಾಡಲು ಸೂಚಿಸಿದೆಯಂತೆ. ಇದರಿಂದಾಗಿ ಸಂಪೂರ್ಣ ಯೋಜನೆಗೆ ತಾತ್ಕಾಲಿಕ ತಡೆ ಬಿದ್ದಿದೆ. ಸರ್ಜಾಪುರ – ಹೆಬ್ಬಾಳ ಮೆಟ್ರೋ ಕಾರಿಡಾರ್ ಯೋಜನೆಗೆ ಕೇಂದ್ರ ತಡೆ ನೀಡಿರುವುದರಿಂದ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ನಡುವೆ ಮತ್ತೊಂದು ಸುತ್ತಿನ ಸಮರ ಶುರುವಾಗುವ ಸಾಧ್ಯತೆ ಗೋಚರಿಸಿದೆ.
37 ಕಿ.ಮೀ ಉದ್ದದ ಈ ಮಹತ್ವಾಕಾಂಕ್ಷಿ ಯೋಜನೆ 28 ನಿಲ್ದಾಣಗಳನ್ನು ಹೊಂದಿದ್ದು, ಐಟಿ ಕಾರಿಡಾರ್ ಮತ್ತು ಉತ್ತರ ಬೆಂಗಳೂರನ್ನು ಸಂಪರ್ಕಿಸುವ ಪ್ರಮುಖ ಮಾರ್ಗವಾಗಲಿದೆ ಎಂದು ಹೇಳಲಾಗಿತ್ತು. 2031ರ ವೇಳೆಗೆ ಪೂರ್ಣಗೊಳ್ಳಬೇಕಿದ್ದ ಈ ಯೋಜನೆ ಈಗ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ. ಈ ಹಿಂದೆ ಯೋಜನಾ ವೆಚ್ಚ ಹೆಚ್ಚಾಗಿದೆ ಎಂದು ಕೇಂದ್ರ ಸರ್ಕಾರ ಡಿಪಿಆರ್‌ನ್ನು ವಾಪಸ್ ಕಳಿಸಿತ್ತು. ಇದೀಗ ಮತ್ತೊಮ್ಮೆ ರಾಜ್ಯ ಸರ್ಕಾರದ ಯೋಜನೆಗೆ ಬ್ರೇಕ್ ಹಾಕಿರುವುದರಿಂದ, ಮೆಟ್ರೋ ದರ ಏರಿಕೆ ವಿವಾದದ ಬೆನ್ನಲ್ಲೇ ಮತ್ತೊಂದು ದೊಡ್ಡ ಸವಾಲು ಎದುರಾಗುತ್ತಿದೆ.
ಮೆಟ್ರೋ 3ನೇ ಹಂತದ ರೆಡ್ ಲೈನ್ ಯೋಜನೆಗೆ ಕೇಂದ್ರದ ಆಕ್ಷೇಪ, ಬೆಂಗಳೂರಿನ ಸಾರಿಗೆ ವ್ಯವಸ್ಥೆಯ ಭವಿಷ್ಯವನ್ನು ಮತ್ತಷ್ಟು ಗೊಂದಲದಲ್ಲಿ ನಿಲ್ಲಿಸಿದೆ. ಪ್ರಯಾಣಿಕರು ನಿರೀಕ್ಷಿಸಿದ್ದ ಸುಗಮ ಸಂಚಾರಕ್ಕೆ ಇನ್ನೂ ಹೆಚ್ಚು ಸಮಯ ಬೇಕಾಗುವ ಸಾಧ್ಯತೆ ಇದೆ. ಕೇಂದ್ರದ ತಡೆ ನಿರ್ಧಾರದಿಂದಾಗಿ ರೆಡ್ ಲೈನ್ ಯೋಜನೆಗೆ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಸ್ಪಷ್ಟವಾಗಿದೆ. ರಾಜ್ಯ ಸರ್ಕಾರ ಮುಂದಿನ ನಿರ್ಧಾರವನ್ನು ಹೇಗೆ ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.