ಸಿಲಿಕಾನ್ ಸಿಟಿ ಜನರು ನುಗ್ಗೆಕಾಯಿ ಖರೀದಿಸಲು ಹಿಂದೆ ಸರಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಾರುಕಟ್ಟೆಯಲ್ಲಿ ಜೋಡಿ ನುಗ್ಗೆಕಾಯಿ 100 ರೂ. ದಾಟಿದ್ದು, ಒಂದು ಕೆಜಿ ಬೆಲೆ ಹೋಲ್‌ಸೇಲ್‌ನಲ್ಲಿ 500 ರೂ. ಹಾಗೂ ರಿಟೇಲ್‌ನಲ್ಲಿ 600 ರೂ. ತಲುಪಿದೆ.
ಹಿಂದೆ ಪ್ರತಿದಿನ ಬೆಂಗಳೂರಿಗೆ 100 ಟನ್ ನುಗ್ಗೆಕಾಯಿ ಸರಬರಾಜಾಗುತ್ತಿದ್ದರೆ, ಇದೀಗ ವಾತಾವರಣ ಬದಲಾವಣೆಯಿಂದ ಬೆಳೆ ಕಡಿಮೆಯಾಗಿ 30 ರಿಂದ 40 ಟನ್ ಮಾತ್ರ ಸಪ್ಲೈ ಆಗುತ್ತಿದೆ. ಇದರ ಪರಿಣಾಮವಾಗಿ ಶೇಕಡಾ 60% ಪೊರೈಕೆ ಕುಸಿತ ಕಂಡುಬಂದಿದೆ.
ಟೊಮೇಟೊ ಬೆಲೆ ಅರ್ಧ ಶತಕ ತಲುಪಿದ್ದು, ಉಳಿದ ತರಕಾರಿಗಳೂ ನಿಧಾನವಾಗಿ ಶತಕ ಬಾರಿಸುತ್ತಿವೆ. ಚಳಿ-ಮಳೆ ನಡುವೆಯೂ ತರಕಾರಿ ಬೆಲೆ ಏರಿಕೆಯಿಂದ ಸಾಮಾನ್ಯ ಗ್ರಾಹಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ವ್ಯಾಪಾರಿಗಳ ಪ್ರಕಾರ, ತಮಿಳುನಾಡಿನಿಂದ ನುಗ್ಗೆಕಾಯಿ ಸರಬರಾಜು ಆಗುವವರೆಗೂ ದರದಲ್ಲಿ ಯಾವುದೇ ಕಡಿತವಾಗುವುದಿಲ್ಲ. ಈಗಾಗಲೇ ಅಲ್ಲಿ ರೈತರು ಹೆಚ್ಚಾಗಿ ಬೆಳೆ ಬೆಳೆದಿದ್ದು, ಜನವರಿ-ಫೆಬ್ರವರಿಯಲ್ಲಿ ಬೆಲೆ ಸ್ವಲ್ಪ ಮಟ್ಟಿಗೆ ಇಳಿಯುವ ಸಾಧ್ಯತೆ ಇದೆ.
ಪ್ರಸ್ತುತ ಬೆಲೆ ಏರಿಕೆಯಿಂದ ಗ್ರಾಹಕರು ನುಗ್ಗೆಕಾಯಿ ಖರೀದಿಸಲು ಮುಂದಾಗುತ್ತಿಲ್ಲ. ಹೀಗಾಗಿ ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿತ ಕಂಡುಬಂದಿದ್ದು, ನುಗ್ಗೆಕಾಯಿ ಸಾಮಾನ್ಯ ಜನರ ಅಡುಗೆ ಮನೆಯಿಂದ ದೂರವಾಗುತ್ತಿದೆ.