ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ಪವಿತ್ರಾ ಗೌಡಗೆ ನ್ಯಾಯಾಲಯದಿಂದ ಮತ್ತೊಮ್ಮೆ ಹಿನ್ನಡೆಯಾಗಿದೆ. ನಟ ದರ್ಶನ್ ಅವರ ಜನ್ಮದಿನದಂದೇ ಪವಿತ್ರಾ ಗೌಡ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದ್ದು, ಅವರಿಗೆ ಜೈಲೇ ಗತಿಯಾಗಿದೆ.
ಕಳೆದ ಒಂದು ವರ್ಷದಿಂದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ಪವಿತ್ರಾ ಗೌಡ, ಎರಡನೇ ಬಾರಿಯ ಜೈಲುವಾಸದಲ್ಲಿ ಇಂದಿಗೆ ಬರೋಬ್ಬರಿ 185 ದಿನಗಳನ್ನು ಪೂರೈಸಿದ್ದಾರೆ. ಒಟ್ಟಾರೆಯಾಗಿ ಅವರು 374 ದಿನಗಳಿಂದ ಸೆರೆಮನೆಯಲ್ಲಿದ್ದಾರೆ. ಮಗಳ ವಿದ್ಯಾಭ್ಯಾಸದ ಕಾರಣ ನೀಡಿ ಹೊರಬರಲು ಪವಿತ್ರಾ ಗೌಡ ನಡೆಸಿದ ಪ್ರಯತ್ನಕ್ಕೆ ನ್ಯಾಯಾಲಯ ಈಗ ತಣ್ಣೀರೆರಚಿದೆ.
ಮಗಳ ಪರೀಕ್ಷೆಯ ಕಾರಣ ನೀಡಿ ಮನವಿ!!
ಪವಿತ್ರಾ ಗೌಡ ಪರ ವಕೀಲರು 57ನೇ ಸೆಷನ್ಸ್ ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಸಿ, "ಪವಿತ್ರಾ ಗೌಡ ಅವರ ಮಗಳು ಈಗ ಹತ್ತನೇ ತರಗತಿಯಲ್ಲಿದ್ದಾಳೆ. ಬೋರ್ಡ್ ಪರೀಕ್ಷೆಗಳು ಹತ್ತಿರ ಬರುತ್ತಿರುವ ಈ ನಿರ್ಣಾಯಕ ಸಮಯದಲ್ಲಿ ಮಗಳಿಗೆ ಮಾನಸಿಕ ಸ್ಥೈರ್ಯ ತುಂಬಲು ತಾಯಿಯ ಅವಶ್ಯಕತೆ ಇದೆ. ಆದ್ದರಿಂದ ಮಾನವೀಯ ನೆಲೆಯ ಮೇಲೆ ಜಾಮೀನು ನೀಡಬೇಕು" ಎಂದು ವಾದಿಸಿದ್ದರು.
ಸರ್ಕಾರಿ ಅಭಿಯೋಜಕರ ತೀವ್ರ ಆಕ್ಷೇಪ!!
ಆದರೆ, ಈ ವಾದಕ್ಕೆ ಸರ್ಕಾರಿ ಅಭಿಯೋಜಕರು ಕಟುವಾಗಿ ಆಕ್ಷೇಪ ವ್ಯಕ್ತಪಡಿಸಿದರು. "ಇದು ಇಡೀ ದೇಶವನ್ನೇ ಬೆಚ್ಚಿಬೀಳಿಸಿದ ಕೊಲೆ ಪ್ರಕರಣ. ಪ್ರಸ್ತುತ ವಿಚಾರಣೆ ನಡೆಯುತ್ತಿರುವ ಈ ಹಂತದಲ್ಲಿ ಪ್ರಮುಖ ಆರೋಪಿಗೆ ಜಾಮೀನು ನೀಡಿದರೆ ಸಾಕ್ಷ್ಯಗಳ ಮೇಲೆ ಪ್ರಭಾವ ಬೀರಬಹುದು. ಪರೀಕ್ಷೆಯ ನೆಪವನ್ನಷ್ಟೇ ಮುಂದಿಟ್ಟುಕೊಂಡು ಹೊರಬರಲು ಪ್ರಯತ್ನಿಸಲಾಗುತ್ತಿದೆ" ಎಂದು ಪ್ರಾಸಿಕ್ಯೂಷನ್ ವಾದ ಮಂಡಿಸಿತು.
ನ್ಯಾಯಾಲಯದ ಕಠಿಣ ನಿಲುವು!!
ಉಭಯ ಕಡೆಯ ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶರಾದ ಐ.ಪಿ. ನಾಯಕ್ ಅವರು ಪವಿತ್ರಾ ಗೌಡ ಅವರ ಅರ್ಜಿಯನ್ನು ವಜಾ ಮಾಡಿದರು. "ಜಾಮೀನು ನೀಡಲು ಮಗಳ ಪರೀಕ್ಷೆಯು ಬಲವಾದ ಅಥವಾ ಸಮರ್ಥನೀಯ ಕಾರಣವಲ್ಲ" ಎಂದು ಅಭಿಪ್ರಾಯಪಟ್ಟ ನ್ಯಾಯಾಲಯ, ಯಾವುದೇ ರಿಲೀಫ್ ನೀಡಲು ನಿರಾಕರಿಸಿತು.
ಮನೆಯೂಟವೂ ಮರಿಚೀಕೆ!!
ಕೇವಲ ಜಾಮೀನು ಮಾತ್ರವಲ್ಲ, ಈ ಹಿಂದೆ ಪವಿತ್ರಾ ಗೌಡ ಕೇಳಿದ್ದ 'ಮನೆಯೂಟ'ದ ಸೌಲಭ್ಯಕ್ಕೂ ಹೈಕೋರ್ಟ್ ಬ್ರೇಕ್ ಹಾಕಿದೆ. ಜೈಲಿನ ಊಟದಿಂದ ಚರ್ಮರೋಗ ಮತ್ತು ಫುಡ್ ಪಾಯಿಸನ್ ಆಗುತ್ತಿದೆ ಎಂದು ಅವರು ದೂರಿದ್ದರು. ಆದರೆ, "ಕಾನೂನಿನ ಮುಂದೆ ಎಲ್ಲರೂ ಸಮಾನರು" ಎಂದು ಅಭಿಪ್ರಾಯಪಟ್ಟ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠವು ಸೆಷನ್ಸ್ ಕೋರ್ಟ್ ನೀಡಿದ್ದ ಮನೆಯೂಟದ ಆದೇಶಕ್ಕೆ ತಡೆ ನೀಡಿದೆ.
ಒಂದು ಸುಂದರ ಸಂಸಾರ ಮತ್ತು ಒಬ್ಬ ಸೂಪರ್ ಸ್ಟಾರ್‌ನ ವೃತ್ತಿಜೀವನ ಹಳಿ ತಪ್ಪಲು ಕಾರಣರಾದ ಪವಿತ್ರಾ ಗೌಡ, ಈಗ ತಮ್ಮ ಕರ್ಮದ ಫಲವನ್ನು ಜೈಲಿನಲ್ಲಿಯೇ ಅನುಭವಿಸುವಂತಾಗಿದೆ. ನಟ ದರ್ಶನ್ ಅವರ ಅಭಿಮಾನಿಗಳು ಅವರ ಹುಟ್ಟುಹಬ್ಬವನ್ನು ಆಚರಿಸುತ್ತಿರುವ ಹೊತ್ತಲ್ಲೇ, ಇತ್ತ ಪವಿತ್ರಾ ಗೌಡ ಜೈಲಿನ ಕಂಬಿ ಎಣಿಸುವಂತಾಗಿರುವುದು ಚರ್ಚೆಗೆ ಗ್ರಾಸವಾಗಿದೆ.