ಬೆಂಗಳೂರು ನಗರದಲ್ಲಿ ಸಾಕು ನಾಯಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಜಿಬಿಎ (ನಗರಪಾಲಿಕೆ) ಅಂದಾಜು ಪ್ರಕಾರ, ಈಗಾಗಲೇ 1 ಲಕ್ಷ 15 ಸಾವಿರಕ್ಕೂ ಹೆಚ್ಚು ಸಾಕು ನಾಯಿಗಳು ಮನೆಗಳಲ್ಲಿ ಸಾಕಲ್ಪಡುತ್ತಿವೆ. ಈ ಹಿನ್ನೆಲೆಯಲ್ಲಿ, ಪ್ರಾಣಿ ಹಿಂಸೆ 1960ರ ಕಾಯ್ದೆಯ ಪ್ರಕಾರ ಸಾಕು ನಾಯಿಗಳ ಸಾಕುವಿಕೆಗೆ ಹೊಸ ನಿಯಮಗಳನ್ನು ಜಾರಿಗೆ ತರಲು ಜಿಬಿಎ ಚಿಂತನೆ ನಡೆಸುತ್ತಿದೆ.
ಹೊಸ ನಿಯಮದ ಪ್ರಕಾರ, ಇನ್ಮುಂದೆ ಮನೆಯಲ್ಲಿ ನಾಯಿ ಸಾಕಲು ಲೈಸನ್ಸ್ ಕಡ್ಡಾಯವಾಗಲಿದೆ. ಪ್ರತಿ ಸಾಕು ನಾಯಿ ಮಾಲೀಕರು ಜಿಬಿಎಯಿಂದ ಪರವಾನಗಿ ಪಡೆಯಬೇಕು. ಜೊತೆಗೆ, ಪ್ರತಿ ವರ್ಷ ಪರವಾನಗಿ ನವೀಕರಣಕ್ಕೆ ನಿಗದಿತ ಶುಲ್ಕ ಪಾವತಿಸಬೇಕಾಗುತ್ತದೆ. ನಾಯಿಗಳ ತಳಿ ಆಧಾರದ ಮೇಲೆ ಪರವಾನಗಿ ಶುಲ್ಕ ನಿಗದಿ ಮಾಡುವ ಯೋಜನೆ ಇದೆ. ನಾಯಿ ಸಾಕುವವರು ಜಿಬಿಎ ನಿಯೋಜಿತ ಪಶುವೈದ್ಯರಿಂದ ದೃಢೀಕರಣ ಪಡೆಯಬೇಕು. ಪ್ರತಿ ಸಾಕು ನಾಯಿ ಮಾಲೀಕರು ತಮ್ಮ ಖರ್ಚಿನಲ್ಲಿ ನಾಯಿಗೆ ಮೈಕ್ರೋ ಚಿಪ್ ಅಳವಡಿಸಬೇಕು.
ಜೊತೆಗೆ, ರೆಬೀಸ್ ಲಸಿಕೆ ಹಾಕಿಸುವುದು ಕಡ್ಡಾಯ. ಲಸಿಕೆ ಹಾಕಿದ ಬಗ್ಗೆ ನೊಂದಾಯಿತ ಪಶುವೈದ್ಯರಿಂದ ಪ್ರಮಾಣ ಪತ್ರ ಪಡೆಯಬೇಕು. 12 ತಿಂಗಳಿಗಿಂತ ಹೆಚ್ಚಿನ ವಯಸ್ಸಿನ ನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ಮಾಡಿಸುವುದು ಕಡ್ಡಾಯವಾಗಲಿದೆ. ಮನೆಗಳಲ್ಲಿ ಮೂರು ನಾಯಿಗಳಿಗಿಂತ ಹೆಚ್ಚು ಸಾಕಲು ಅವಕಾಶ ಇರುವುದಿಲ್ಲ. ಮೂರು ನಾಯಿಗಳಿಗಿಂತ ಹೆಚ್ಚಾಗಿ ಸಾಕಿದರೆ, ಅಧಿಕಾರಿಗಳು ಅವುಗಳನ್ನು ವಶಕ್ಕೆ ಪಡೆದು ಪ್ರಾಣಿಧಾಮಕ್ಕೆ ಕಳುಹಿಸಲಿದ್ದಾರೆ.
ಸಾಕು ನಾಯಿಗಳ ಆವರಣವನ್ನು ಸ್ವಚ್ಛತೆ ಕಾಪಾಡುವುದು, ನೆರೆಹೊರೆಯವರಿಗೆ ತೊಂದರೆ ಆಗದಂತೆ ನೋಡಿಕೊಳ್ಳುವುದು ಮಾಲೀಕರ ಜವಾಬ್ದಾರಿ. ನಾಯಿಗಳನ್ನು ವಾಕಿಂಗ್‌ಗೆ ಕರೆದುಕೊಂಡು ಹೋಗುವಾಗ ಕತ್ತಿಗೆ ಹಗ್ಗ ಅಥವಾ ಚೈನ್ ಅಳವಡಿಸಬೇಕು. ವಾಕಿಂಗ್ ವೇಳೆ ನಾಯಿ ರಸ್ತೆಯಲ್ಲಿ ಗಲೀಜು ಮಾಡಿದರೆ, ಅದನ್ನು ಮಾಲೀಕರು ಸ್ವತಃ ತೆಗೆಯಬೇಕು. ಒಂದು ವೇಳೆ ನಾಯಿ ತಪ್ಪಿಸಿಕೊಂಡು ನಗರಪಾಲಿಕೆ ಅಧಿಕಾರಿಗಳ ವಶಕ್ಕೆ ಸಿಕ್ಕಿದರೆ, 72 ಗಂಟೆಯೊಳಗೆ ಬಿಡಿಸಿಕೊಂಡರೆ ₹1000 ದಂಡ ಪಾವತಿಸಬೇಕು. 72 ಗಂಟೆಯ ನಂತರ ಪ್ರತಿ ದಿನ ₹200 ದಂಡ ಪಾವತಿಸಬೇಕಾಗುತ್ತದೆ. ಬಿಡಿಸಿಕೊಳ್ಳದಿದ್ದರೆ ನಾಯಿಯನ್ನು ಪ್ರಾಣಿದಯಾ ಸಂಘಕ್ಕೆ ಹಸ್ತಾಂತರಿಸಲಾಗುತ್ತದೆ.
ಅಪಾರ್ಟ್‌ಮೆಂಟ್‌ಗಳಲ್ಲಿ ಉಗ್ರ ಸ್ವಭಾವದ ನಾಯಿಗಳನ್ನು ಸಾಕಲು ನಿಷೇಧ ಹೇರಲಾಗುತ್ತಿದೆ. ಹೀಗಾಗಿ, ಸಾಕು ನಾಯಿಗಳನ್ನು ಸಾಕುವವರು ಹೊಸ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಈ ನಿಯಮಗಳು ಸಾಕು ನಾಯಿಗಳ ಸುರಕ್ಷತೆ, ಸಾರ್ವಜನಿಕ ಆರೋಗ್ಯ ಹಾಗೂ ನೆರೆಹೊರೆಯ ಶಾಂತಿ ಕಾಪಾಡುವ ಉದ್ದೇಶದಿಂದ ಜಾರಿಗೆ ತರಲಾಗುತ್ತಿವೆ.