ಬೆಂಗಳೂರಿನ ಜೆ.ಪಿ. ನಗರದಲ್ಲಿರುವ ಒಂದು ಖಾಸಗಿ ಕಂಪನಿಯ ಪ್ರಕಟಣೆ ಕನ್ನಡ ಹೃದಯಗಳಲ್ಲಿ ಸಿಡಿಲು ಸಿಡಿಸಿದೆ. ಸ್ಕಿಲ್ಸ್ ಸೋನಿಕ್ಸ್ ಎಂಬ ಕಂಪನಿಯು 'ನಾನ್ ಕನ್ನಡ್ ಎಚ್ಆರ್' ಬೇಕು ಎಂದು ನೌಕರಿ.ಕಾಂನಲ್ಲಿ ಪೋಸ್ಟ್ ಮಾಡಿದ್ದು ಸಿಡಿಮರವಾಗಿ ಬಂತು. ಕನ್ನಡ ನೆಲದಲ್ಲಿ ಕಂಪನಿ ಇಟ್ಟುಕೊಂಡು, ಕನ್ನಡಿಗರನ್ನು ಉದ್ಯೋಗದಿಂದ ದೂರವಿಡುವ ಈ ಪ್ರಯತ್ನ ಸ್ಥಳೀಯರ ಕೋಪವನ್ನು ಕೆರಳಿಸಲು ಸಾಕಾಗಿತ್ತು.
ಸೋಶಿಯಲ್ ಮೀಡಿಯಾ, ವಿಶೇಷವಾಗಿ ಎಕ್ಸ್ (ಟ್ವಿಟರ್) ಪ್ಲ್ಯಾಟ್ಫಾರ್ಮ್, ಈ ಕಂಪನಿಯ ವಿರುದ್ಧ ಸಿಡಿದೆದ್ದಿತು. ಕನ್ನಡಿಗರು ಒಂದಾಗಿ ಆಕ್ರೋಶ ವ್ಯಕ್ತಪಡಿಸಿದರು. ರೂಪೇಶ್ ರಾಜಣ್ಣ ಅವರಂತಹ ಸಮಾಜ ಸೇವಕರು ಕಂಪನಿಗೆ ಎಚ್ಚರಿಕೆ ನೀಡಿದರೆ, ಯುವ ಕರ್ನಾಟಕ ವೇದಿಕೆ ಸಂಘಟಿತ ಪ್ರತಿಭಟನೆಗೆ ಸಿದ್ಧತೆ ನಡೆಸಿತು. ಜನರ ಭಾವನೆಗಳ ಆಳವನ್ನು ಅರಿತ ಕಂಪನಿ, ತೀವ್ರ ವಿಮರ್ಶೆಯ ನಡುವೆಯೇ ತಲೆಕೆಳಗಾದರು. ಆ ಪ್ರಕಟಣೆಯನ್ನು ಹಿಂಪಡೆದುಕೊಂಡು, ಸಾರ್ವಜನಿಕರಿಂದ ಕ್ಷಮೆಯಾಚಿಸಲು ಒಪ್ಪಿಕೊಂಡರು ಏನ್ ದು ಕೇಳಿ ಬಂದಿದೆ.
ಆದರೆ ಈ ಘಟನೆ, ಕರ್ನಾಟಕದಲ್ಲಿ ಬಹುಕಾಲದಿಂದ ಸುಳಿದಾಡುತ್ತಿರುವ ಒಂದು ದೊಡ್ಡ ಪ್ರಶ್ನೆಯನ್ನು ಮತ್ತೆ ಮೇಲೆತ್ತಿದೆ. ಖಾಸಗಿ ವಲಯದಲ್ಲಿ ಸ್ಥಳೀಯ ಕನ್ನಡಿಗರಿಗೆ ಮೀಸಲಾತಿ ಅವಶ್ಯಕವೇ? ಆಂಧ್ರಪ್ರದೇಶ ರಾಜ್ಯದಲ್ಲಿ ಖಾಸಗಿ ಕಂಪನಿಗಳಲ್ಲಿ 75% ನೌಕರಿಗಳನ್ನು ಸ್ಥಳೀಯರಿಗೆ ಮೀಸಲಿಡುವ ಕಾನೂನು ಚರ್ಚೆಯಲ್ಲಿದೆ. ಇದೇ ರೀತಿಯ ಮಾದರಿ ಕರ್ನಾಟಕಕ್ಕೂ ಬರಬೇಕು ಎನ್ನುವ ಆಗ್ರಹವೂ ಹೆಚ್ಛಾಗುತ್ತಿದೆ.
ಆದರೆ, ಖ್ಯಾತ ಉದ್ಯಮಿ ಕಿರಣ್ ಮಜುಂದಾರ್ ಶಾ ಅವರು ಈ ಕಲ್ಪನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. "ಈ ರೀತಿಯ ನಿಯಮಗಳಿಗೆ ನಾನು ಒಪ್ಪುವುದಿಲ್ಲ. ಯಾರಿಗೆ ಪ್ರತಿಭೆ ಇದೆಯೋ ಅಂತವರಿಗೆ ಅವಕಾಶ ಸಿಗಬೇಕು" ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಪ್ರತಿಭೆ ಮತ್ತು ಸಾಮರ್ಥ್ಯವೇ ಮುಖ್ಯ, ಭಾಷೆ ಅಥವಾ ಸ್ಥಳೀಯತೆ ಅಲ್ಲ ಎಂಬುದು ಅವರ ವಾದದ ಸಾರಾಂಶ ಎಂದು ಹೇಳಬಹುದು.
ಈ ಘಟನೆಯಿಂದ ಎರಡು ವಿಷಯ ಸ್ಪಷ್ಟವಾಗಿವೆ. ಒಂದು, ಕರ್ನಾಟಕದ ಮಣ್ಣು ಮತ್ತು ಮನೆಯನ್ನು ತಿರಸ್ಕರಿಸುವ ಎಲ್ಲ ಪ್ರಯತ್ನಗಳಿಗೂ ಬಲವಾದ ಸಾಮಾಜಿಕ ಪ್ರತಿರೋಧ ಇದೆ. ಎರಡು, ರಾಜ್ಯದ ಭವಿಷ್ಯದ ಕಾರ್ಮಿಕ ನೀತಿಯನ್ನು ರೂಪಿಸುವ ಬಗ್ಗೆ ಗಂಭೀರವಾದ, ಬಹುಮುಖ ಚರ್ಚೆಯ ಅಗತ್ಯವಿದೆ. ಪ್ರತಿಭೆ ಮತ್ತು ಸ್ಥಳೀಯತೆ - ಈ ಎರಡರ ನಡುವೆ ಸಮತೋಲನ ಕಂಡುಕೊಳ್ಳುವುದು ರಾಜ್ಯದ ಮುಂದಿನ ಪಯಣದ ಕೀಲಿಕೈ ಆಗಬಹುದು. ಈ ರೀತಿ ಕೆಲಸಕ್ಕೆ ಮುಂದಾಗುವ ಕಂಪನಿಗೆ ಇದು ಎಚ್ಚರಿಕೆ ಗಂಟೆಯಾಗಿದೆ.