ಮಂಗಳೂರಿನ ಬಾರೆಬೈಲು ಜಾರಂದಾಯ ಬಂಟ ಹಾಗೂ ವಾರಾಜಿ ಪಂಜುರ್ಲಿ ದೈವಸ್ಥಾನದಲ್ಲಿ ನಡೆದ ಹರಕೆ ನೇಮೋತ್ಸವವು ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ನಟ ರಿಷಬ್ ಶೆಟ್ಟಿ ಹಾಗೂ ಹೊಂಬಾಳೆ ಫಿಲಂಸ್ ವತಿಯಿಂದ ನಡೆದ ಈ ನೇಮೋತ್ಸವದಲ್ಲಿ ದೈವ ನರ್ತಕರ ನಡೆ ಕುರಿತು ತುಳುನಾಡ ದೈವಾರಾಧಕರಲ್ಲಿ ಅಸಮಾಧಾನ ವ್ಯಕ್ತವಾಗಿದೆ.
ಎಣ್ಣೆಬೂಳ್ಯ ಪದ್ದತಿ ವೇಳೆ ವಿವಾದ
ನೇಮೋತ್ಸವ ಆರಂಭಕ್ಕೂ ಮುನ್ನ ದೈವಸ್ಥಾನದಲ್ಲಿ ದೈವ ಎಣ್ಣೆಬೂಳ್ಯ ನೀಡುವ ಸಂಪ್ರದಾಯ ಪಾಲಿಸಲಾಯಿತು. ಈ ವೇಳೆ ದೈವ ನರ್ತಕರು ತುಳುನಾಡ ದೈವಾರಾಧನೆ ಸಂಪ್ರದಾಯ ಮೀರಿ ವರ್ತಿಸಿದ ಬಗ್ಗೆ ಅಸಮಾಧಾನ ವ್ಯಕ್ತವಾಯಿತು. ರಿಷಬ್ ಶೆಟ್ಟಿಯ ಎರಡೂ ಕಾಂತಾರ ಸಿನಿಮಾಗಳಲ್ಲಿ ಮಾರ್ಗದರ್ಶಕರಾಗಿದ್ದ ನರ್ತಕರೊಬ್ಬರ ವಿರುದ್ಧ ಈ ಅಸಮಾಧಾನ ಹೆಚ್ಚಾಗಿದೆ.
ರಿಷಬ್ ಶೆಟ್ಟಿ ಮಡಿಲಲ್ಲಿ ಮಲಗಿದ ಸನ್ನಿವೇಶ
ಬಾರೆಬೈಲು ಹರಕೆ ನೇಮೋತ್ಸವದಲ್ಲಿ ದೈವ ನರ್ತಕರು ಎಣ್ಣೆಬೂಳ್ಯ ಸ್ವೀಕರಿಸಿದ ಸಂದರ್ಭದಲ್ಲಿ, ನಟ ರಿಷಬ್ ಶೆಟ್ಟಿ ಮಡಿಲಲ್ಲಿ ಮಲಗಿ ಭಾವುಕ ಸನ್ನಿವೇಶಕ್ಕೆ ಸಾಕ್ಷಿಯಾದರು. ಆದರೆ ಈ ಘಟನೆ ತುಳುನಾಡ ದೈವಾರಾಧಕರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಯಿತು. ದೈವಾರಾಧನೆಯ ಕಟ್ಟಲೆಗಳನ್ನು ಮೀರಿ ದೈವ ನರ್ತನ ನಿಯಮ ಉಲ್ಲಂಘನೆ ನಡೆದಿದೆ ಎಂಬ ಆಕ್ಷೇಪಗಳು ಕೇಳಿಬಂದಿವೆ.
ದೈವ ನರ್ತಕ ಮುಖೇಶ್ ವಿರುದ್ಧ ಆಕ್ಷೇಪ
ಕಾಂತಾರ ಹಾಗೂ ಕಾಂತಾರ 1 ಸಿನಿಮಾಗಳ ಚಿತ್ರೀಕರಣದ ವೇಳೆ ರಿಷಬ್ ಶೆಟ್ಟಿಗೆ ದೈವಾರಾಧನ ಕ್ರಮಗಳ ಬಗ್ಗೆ ಮಾರ್ಗದರ್ಶನ ನೀಡಿದ್ದ ದೈವ ನರ್ತಕ ಮುಖೇಶ್ ಈ ವಿವಾದದ ಕೇಂದ್ರಬಿಂದುವಾಗಿದ್ದಾರೆ. ಕಾಂತಾರ ಮೊದಲ ಸಿನಿಮಾಗೆ ಸೈಮಾ ಪ್ರಶಸ್ತಿ ಬಂದಾಗಲೂ ಪ್ರಶಸ್ತಿ ಸ್ವೀಕರಿಸಿದ್ದ ಮುಖೇಶ್, ಇತ್ತೀಚಿನ ಬಾರೆಬೈಲು ನೇಮೋತ್ಸವದಲ್ಲೂ ಪಂಜುರ್ಲಿ ದೈವದ ನರ್ತಕರಾಗಿದ್ದರು. ಇದೀಗ ಅವರ ನಡೆ ಕುರಿತು ಸಾಮಾಜಿಕ ತಾಣಗಳಲ್ಲಿ ಭಾರೀ ಚರ್ಚೆ ನಡೆಯುತ್ತಿದೆ.
ಸಾಮಾಜಿಕ ತಾಣಗಳಲ್ಲಿ ಪರ-ವಿರೋಧ ಚರ್ಚೆ
ದೈವ ನರ್ತಕರಾದ ಮುಖೇಶ್ ಅವರ ನಡೆ ಕುರಿತು ಸಾಮಾಜಿಕ ತಾಣಗಳಲ್ಲಿ ಭಾರೀ ಪರ-ವಿರೋಧ ಚರ್ಚೆ ನಡೆಯುತ್ತಿದೆ. ಹಲವರು ದೈವಾರಾಧನೆಯ ಕಟ್ಟಲೆಗಳನ್ನು ಮೀರಿ ವರ್ತಿಸಿದ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದರೆ, ಇನ್ನು ಕೆಲವರು ಮುಖೇಶ್ ಅವರ ಪರವಾಗಿ ಪೋಸ್ಟ್ ಮಾಡುತ್ತಿದ್ದಾರೆ. ತುಳುನಾಡಿನ ದೈವಾರಾಧನೆ ಸಂಪ್ರದಾಯದ ಗೌರವ ಕಾಪಾಡಬೇಕೆಂಬ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ.