ಕೆಪಿಸಿಸಿ ಅಧ್ಯಕ್ಷರಾಗಿ ಆರು ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದ ಹಿನ್ನೆಲೆಯಲ್ಲಿ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಂಗಳವಾರ ರಾತ್ರಿ ಬೆಂಗಳೂರಿನಲ್ಲಿ ಆಯೋಜಿಸಿದ್ದ ಔತಣಕೂಟ ರಾಜಕೀಯ ವಲಯದಲ್ಲಿ ಭಾರಿ ಕುತೂಹಲವನ್ನ ಮೂಡಿಸಿತು. ಈ ಔತಣಕೂಟದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸಚಿವರು ಹಾಗೂ ಶಾಸಕರು ಭಾಗವಹಿಸುವ ಮೂಲಕ ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿನ ಒಗ್ಗಟ್ಟನ್ನು ಪ್ರದರ್ಶಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡುವ ಮೂಲಕ ಡಿ.ಕೆ. ಶಿವಕುಮಾರ್ ಅವರಿಗೆ ಅಭಿನಂದನೆ ಸಲ್ಲಿಸಿದರು. "ಡಿ.ಕೆ. ಶಿವಕುಮಾರ್ ಅವರ ಸಂಘಟನಾ ಚಾತುರ್ಯ, ಸೈದ್ಧಾಂತಿಕ ಬದ್ಧತೆ ಮತ್ತು ಕಠಿಣ ಶ್ರಮ ಪಕ್ಷದ ಯುವ ನಾಯಕರಿಗೆ ಮಾದರಿಯಾಗಿದೆ. ವಿರೋಧ ಪಕ್ಷದವರು ಹಲವು ರೀತಿಯ ಕಿರುಕುಳ ನೀಡಿದರೂ ಅವರು ಪಕ್ಷಕ್ಕೆ ನಿಷ್ಠರಾಗಿ ಉಳಿದಿದ್ದಾರೆ," ಎಂದು ಶ್ಲಾಘಿಸಿದರು.
@CMofKarnataka @siddaramaiah greets @DKShivakumar completing 6 years as KPCC president at a dinner hosted by the latter at @ITCGardenia #Bengaluru
— Hirehalli Bhyraiah Devaraj (@swaraj76) March 10, 2026
A host of @INCKarnataka leaders including ministers are taking part in it.@XpressBengaluru@AshwiniMS_TNIE pic.twitter.com/QKGlKnSBQo
ಅಲ್ಲದೆ, ನನಗಿಂತ ಕಿರಿಯರಾದ ಶಿವಕುಮಾರ್ ಅವರಿಗೆ ಉಜ್ವಲವಾದ ರಾಜಕೀಯ ಭವಿಷ್ಯವಿದೆ. 2028ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವುದೇ ನಮ್ಮೆಲ್ಲರ ಗುರಿಯಾಗಿದೆ. ಇದಕ್ಕಾಗಿ ನಡೆಯುವ ಪಕ್ಷದ ಸಂಘಟನೆ ಮತ್ತು ಹೋರಾಟದಲ್ಲಿ ನಾನು ಅವರ ಜೊತೆಯಿರುತ್ತೇನೆ ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದ್ದಾರೆ.
ಐಟಿಸಿ ಗಾರ್ಡೇನಿಯಾ ಹೋಟೆಲ್‌ನಲ್ಲಿ ನಡೆದ ಈ ಔತಣಕೂಟವು, ಪಕ್ಷದ ನಾಯಕರ ನಡುವೆ ಸೌಹಾರ್ದತೆ ಇದೆ ಎಂಬುದನ್ನು ತೋರಿಸಿಕೊಟ್ಟಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಸಚಿವರು ಮತ್ತು ಶಾಸಕರು ಉಪಸ್ಥಿತರಿದ್ದು, ಇದು ಪಕ್ಷದೊಳಗೆ ಅಸಮಾಧಾನವಿಲ್ಲ ಎಂಬ ಸಂದೇಶವನ್ನು ನೀಡಲು ಪ್ರಯತ್ನಿಸಲಾಯಿತು. ವಿಶೇಷವಾಗಿ, ತಮ್ಮ ಬೆಂಬಲಕ್ಕೆ ಪಕ್ಷದ ಬಹುತೇಕ ಶಾಸಕರು ಇದ್ದಾರೆ ಎಂಬುದನ್ನು ಸಾಬೀತುಪಡಿಸಲು ಡಿ.ಕೆ. ಶಿವಕುಮಾರ್ ಈ ವೇದಿಕೆಯನ್ನು ಬಳಸಿಕೊಂಡರು ಎಂಬ ಮಾತುಗಳು ಕೇಳಿಬರುತ್ತಿವೆ.
ಸಿದ್ದರಾಮಯ್ಯ ಅವರ ಪೋಸ್ಟ್ ಮತ್ತು ಈ ಔತಣಕೂಟವನ್ನು ರಾಜಕೀಯ ವಿಶ್ಲೇಷಕರು ವಿವಿಧ ರೀತಿಯಲ್ಲಿ ನೋಡುತ್ತಿದ್ದಾರೆ. ಒಂದು ಕಡೆ 2028ರ ಚುನಾವಣೆವರೆಗೂ ಸಿದ್ದರಾಮಯ್ಯ ಮತ್ತು ಡಿಕೆಶಿ ಜೋಡಿಯೇ ಮುನ್ನಡೆಸುತ್ತದೆ ಎಂಬ ಒಗ್ಗಟ್ಟಿನ ಸಂದೇಶ ರವಾನೆಯಾಗಿದ್ದರೆ, ಮತ್ತೊಂದು ಕಡೆ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳು ಸ್ವಲ್ಪ ಕಾಲ ತಾಳ್ಮೆಯಿಂದ ಇರಬೇಕು ಎಂಬ ಸೂಕ್ಷ್ಮ ಸಂದೇಶವನ್ನು ಮುಖ್ಯಮಂತ್ರಿಗಳು ರವಾನಿಸಿದ್ದಾರೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.
ಈ ಔತಣಕೂಟವು ರಾಜ್ಯ ಕಾಂಗ್ರೆಸ್‌ನಲ್ಲಿನ ಆಂತರಿಕ ಸಮನ್ವಯವನ್ನು ಎತ್ತಿ ತೋರಿಸುವ ಜೊತೆಗೆ, ಮುಂದಿನ ಚುನಾವಣಾ ಸಿದ್ಧತೆಗೆ ಪಕ್ಷವನ್ನು ಸಜ್ಜುಗೊಳಿಸುವ ಪ್ರಯತ್ನವಾಗಿದೆ. ದೆಹಲಿ ಭೇಟಿಯ ನಂತರ ಬಂದಿರುವ ಡಿಕೆಶಿ, ಮುಖ್ಯಮಂತ್ರಿಯಾಗುವ ಗುರಿಯನ್ನು ಹೊಂದಿದ್ದರೂ, ಸದ್ಯಕ್ಕೆ ಪಕ್ಷದ ಒಗ್ಗಟ್ಟಿನ ಹಿತದೃಷ್ಟಿಯಿಂದ ಸಿದ್ದರಾಮಯ್ಯ ಅವರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುತ್ತಿದ್ದಾರೆ.