ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯತೆ ಗಳಿಸಲು ಅಥವಾ ಸಾಹಸ ಪ್ರದರ್ಶಿಸಲು ಯುವಕರು ಮಾಡುತ್ತಿರುವ ಬೈಕ್ ಸ್ಟಂಟ್‌ಗಳು ಎಷ್ಟು ಅಪಾಯಕಾರಿ ಎಂಬುದಕ್ಕೆ ಮುಂಬೈನಲ್ಲಿ ನಡೆದ ಈ ಘಟನೆ ಸಾಕ್ಷಿಯಾಗಿದೆ. ಬೈಕ್ ಸವಾರನೊಬ್ಬ ತನ್ನ ಪ್ರೇಯಸಿಯನ್ನು ಹಿಂದೆ ಕುರಿಸಿಕೊಂಡು 'ಧೂಮ್' ಸಿನಿಮಾ ಶೈಲಿಯಲ್ಲಿ ವೀಲಿಂಗ್ ಮಾಡಲು ಹೋಗಿ, ಆಕೆಯ ಪ್ರಾಣಕ್ಕೆ ಸಂಕಷ್ಟ ತಂದೊಡ್ಡಿದ್ದಾನೆ.
ಘಟನೆಯ ವಿವರ
ನವದೆಹಲಿಯ ವರದಿಗಳ ಪ್ರಕಾರ, ಫೆಬ್ರವರಿ 16ರಂದು ರಾತ್ರಿ ಯುವಕ ಮತ್ತು ಯುವತಿಯೊಬ್ಬರು ಬೈಕ್‌ನಲ್ಲಿ ಸುತ್ತಾಡಲು ಹೊರಟಿದ್ದರು. ಆರಂಭದಲ್ಲಿ ಇಬ್ಬರೂ ಸಂಚಾರವನ್ನು ಎಂಜಾಯ್ ಮಾಡುತ್ತಿದ್ದರು. ಆದರೆ, ಯುವಕನಿಗೆ ಇದ್ದಕ್ಕಿದ್ದಂತೆ ತನ್ನ ಬೈಕ್ ಚಾಲನಾ ಕೌಶಲವನ್ನು ತೋರಿಸುವ ಹಂಬಲ ಉಂಟಾಯಿತು. ಆತ ತನ್ನ ಹಿಂದೆ ಕುಳಿತಿದ್ದ ಪ್ರೇಯಸಿಗೆ ಯಾವುದೇ ಸುಳಿವು ನೀಡದೆ, ವೇಗವಾಗಿ ಬೈಕ್‌ನ ಮುಂಭಾಗದ ಚಕ್ರವನ್ನು ಮೇಲೆತ್ತಿ ವೀಲಿಂಗ್ (Wheeling) ಮಾಡಿದ್ದಾನೆ.
ಚಕ್ರದ ನಡುವೆ ಸಿಲುಕಿದ ಯುವತಿ
ಯುವಕ ದಿಢೀರನೆ ವೀಲಿಂಗ್ ಮಾಡಿದ ಕಾರಣ, ಹಿಂದೆ ಕುಳಿತಿದ್ದ ಯುವತಿ ಸಮತೋಲನ ಕಳೆದುಕೊಂಡಿದ್ದಾಳೆ. ಬೈಕ್‌ನ ವೇಗ ಮತ್ತು ಸ್ಟಂಟ್‌ನ ತೀವ್ರತೆಗೆ ಆಕೆ ಸೀಟಿನಿಂದ ಕೆಳಕ್ಕೆ ಜಾರಿದ್ದಾಳೆ. ದುರದೃಷ್ಟವಶಾತ್, ಆಕೆಯ ಕಾಲುಗಳು ಮತ್ತು ದೇಹದ ಅರ್ಧ ಭಾಗವು ವೇಗವಾಗಿ ಸುತ್ತುತ್ತಿದ್ದ ಹಿಂದಿನ ಚಕ್ರ ಮತ್ತು ಸೀಟಿನ ನಡುವಿನ ಸಣ್ಣ ಜಾಗದಲ್ಲಿ ಸಿಲುಕಿಕೊಂಡಿವೆ. ಇದರಿಂದಾಗಿ ಆಕೆಯ ಗುಪ್ತಾಂಗ ಹಾಗೂ ದೇಹದ ಕೆಳಭಾಗಕ್ಕೆ ಗಂಭೀರವಾದ ಗಾಯಗಳಾಗಿವೆ.
ವಿಡಿಯೋ ವೈರಲ್ ಮತ್ತು ಎಚ್ಚರಿಕೆ!!
ಈ ಘಟನೆಯು ಇವರ ಹಿಂದೆ ಬರುತ್ತಿದ್ದ ಇತರ ವಾಹನ ಸವಾರರ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ತಾನು ಮಾಡಿದ ತಪ್ಪಿನಿಂದ ಪ್ರೇಯಸಿ ನರಳುತ್ತಿರುವುದನ್ನು ಕಂಡ ಯುವಕ ತಕ್ಷಣ ಬೈಕ್ ನಿಲ್ಲಿಸಿ, ಆಕೆಯನ್ನು ರಕ್ಷಿಸಲು ಮುಂದಾಗಿದ್ದಾನೆ. ತಕ್ಷಣವೇ ಆಕೆಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ ಎಂದು ವರದಿಯಾಗಿದೆ. ಈ ವಿಡಿಯೋ ಸದ್ಯ ಆನ್‌ಲೈನ್‌ನಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಯುವಕನ ಬೇಜವಾಬ್ದಾರಿ ತನಕ್ಕೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಸಾರ್ವಜನಿಕ ರಸ್ತೆಗಳಲ್ಲಿ ವೀಲಿಂಗ್ ಮತ್ತು ಅಪಾಯಕಾರಿ ಸ್ಟಂಟ್‌ಗಳನ್ನು ಮಾಡುವುದು ಕಾನೂನುಬಾಹಿರ ಹಾಗೂ ಪ್ರಾಣಕ್ಕೆ ಕುತ್ತು ತರುವ ಕೆಲಸ. ನಿಮ್ಮ ಒಂದು ಕ್ಷಣದ ಹುಚ್ಚಾಟ ಇನ್ನೊಬ್ಬರ ಜೀವನವನ್ನೇ ಬಲಿ ತೆಗೆದುಕೊಳ್ಳಬಹುದು. ಕ್ಷಣಿಕ ಜನಪ್ರಿಯತೆಗಾಗಿ ಸಾರ್ವಜನಿಕ ರಸ್ತೆಗಳಲ್ಲಿ ಮಾಡುವ ಇಂತಹ ಬೈಕ್ ಸ್ಟಂಟ್‌ಗಳು ಕೇವಲ ಹುಚ್ಚಾಟವಲ್ಲ, ಅದು ಅಕ್ಷಮ್ಯ ಅಪರಾಧ. ಶಿಸ್ತುಬದ್ಧ ಚಾಲನೆ ಪ್ರತಿಯೊಬ್ಬ ಸವಾರನ ಜವಾಬ್ದಾರಿಯಾಗಿದೆ. ಈ ಘಟನೆಯು "ವೇಗಕ್ಕಿಂತ ಸುರಕ್ಷತೆ ಮುಖ್ಯ" ಎಂಬ ಪಾಠವನ್ನು ಕಠಿಣವಾಗಿ ಕಲಿಸಿದೆ. ಯುವಜನತೆ ಸಾಮಾಜಿಕ ಜಾಲತಾಣಗಳ ಪ್ರಭಾವಕ್ಕೆ ಒಳಗಾಗಿ ತಮ್ಮ ಮತ್ತು ಇತರರ ಅಮೂಲ್ಯ ಪ್ರಾಣದ ಜೊತೆ ಆಟವಾಡಬಾರದು. ಕಾನೂನಿನ ಚೌಕಟ್ಟಿನಲ್ಲಿ ಸಂಚರಿಸುವುದು ಮತ್ತು ಸುರಕ್ಷತಾ ನಿಯಮಗಳನ್ನು ಪಾಲಿಸ ಬೇಕು.