ಆರೋಗ್ಯಕರ ಜೀವನಶೈಲಿಗೆ ಸಮತೋಲಿತ ಆಹಾರ ಅತ್ಯಂತ ಮುಖ್ಯ. ಕಡಿಮೆ ಖರ್ಚಿನಲ್ಲಿ ಹೆಚ್ಚು ಪೌಷ್ಟಿಕಾಂಶ ನೀಡುವ ಆಹಾರವೆಂದರೆ ಮೊಟ್ಟೆ. ಆದರೆ “ದಿನಕ್ಕೆ ಎಷ್ಟು ಮೊಟ್ಟೆ ತಿಂದರೆ ಸುರಕ್ಷಿತ?” ಎಂಬ ಪ್ರಶ್ನೆ ಅನೇಕರ ಮನಸ್ಸಿನಲ್ಲಿ ಗೊಂದಲ ಮೂಡಿಸುತ್ತದೆ. ಈ ಕುರಿತು ಹಾರ್ವರ್ಡ್ ಮತ್ತು ಸ್ಟ್ಯಾನ್‌ಫೋರ್ಡ್ ನಂತಹ ಪ್ರತಿಷ್ಠಿತ ಸಂಸ್ಥೆಗಳಲ್ಲಿ ತರಬೇತಿ ಪಡೆದ ಹಾಗೂ ಏಮ್ಸ್ (AIIMS) ನ ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ. ಸೌರಭ್ ಸೇಥಿ ಅವರು ಸ್ಪಷ್ಟನೆ ನೀಡಿದ್ದಾರೆ ಎಂದು ಕೇಳಿ ಬಂದಿದೆ.
ಹೌದು ಅವರ ಪ್ರಕಾರ, ಸಾಮಾನ್ಯ ವ್ಯಕ್ತಿ ದಿನಕ್ಕೆ 1 ರಿಂದ 2 ಮೊಟ್ಟೆಗಳನ್ನು ಸೇವಿಸುವುದು ಸುರಕ್ಷಿತ ಮತ್ತು ಪ್ರಯೋಜನಕಾರಿ. ಸರಿಯಾದ ಪ್ರಮಾಣದಲ್ಲಿ ಮೊಟ್ಟೆ ಸೇವನೆಯಿಂದ ದೇಹಕ್ಕೆ ಅಗತ್ಯವಿರುವ ಎಲ್ಲಾ ಅಮೈನೋ ಆಮ್ಲಗಳು ದೊರೆಯುತ್ತವೆ. ಇದು ಸ್ನಾಯುಗಳ ಬೆಳವಣಿಗೆಗೆ, ತೂಕ ನಿಯಂತ್ರಣಕ್ಕೆ, ಮತ್ತು ಒಟ್ಟಾರೆ ಆರೋಗ್ಯಕ್ಕೆ ಸಹಕಾರಿ.
ಹಸಿ ಮೊಟ್ಟೆ ಸೇವನೆ ಮಾಡುವವರ ಸಂಖ್ಯೆ ಹೆಚ್ಚಾಗಿದ್ದರೂ, ಡಾ. ಸೇಥಿ ಅವರ ಅಭಿಪ್ರಾಯದಲ್ಲಿ ಇದು ತಪ್ಪು ಪದ್ಧತಿ. ಹಸಿ ಮೊಟ್ಟೆಯಿಂದ ‘ಸಾಲ್ಮೊನೆಲ್ಲಾ’ ಎಂಬ ಬ್ಯಾಕ್ಟೀರಿಯಾ ಸೋಂಕು ತಗುಲುವ ಅಪಾಯವಿದೆ. ಜೊತೆಗೆ, ಹಸಿ ಮೊಟ್ಟೆಯಲ್ಲಿರುವ ಪ್ರೋಟೀನ್ ದೇಹಕ್ಕೆ ಸರಿಯಾಗಿ ಹೀರಿಕೊಳ್ಳುವುದಿಲ್ಲ. ಬೇಯಿಸಿದ ಮೊಟ್ಟೆಯಲ್ಲಿರುವ ಪೋಷಕಾಂಶಗಳನ್ನು ದೇಹವು ವೇಗವಾಗಿ ಮತ್ತು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತದೆ. ಆದ್ದರಿಂದ ಯಾವಾಗಲೂ ಮೊಟ್ಟೆಯನ್ನು ಚೆನ್ನಾಗಿ ಬೇಯಿಸಿ ತಿನ್ನುವುದು ಉತ್ತಮ ಎಂದು ಸಲಹೆ ಸೂಚಿಸಿದ್ದಾರೆ ಎನ್ನಲಾಗುತ್ತಿದೆ.
ಸಾಮಾನ್ಯ ಜನರಿಗೆ ದಿನಕ್ಕೆ 1-2 ಮೊಟ್ಟೆ, ಜಿಮ್ ಅಥವಾ ಕ್ರೀಡಾಪಟುಗಳಿಗೆ ವೈದ್ಯರ ಸಲಹೆ ಮೇರೆಗೆ 2 ಕ್ಕಿಂತ ಹೆಚ್ಚು, ವಯಸ್ಸಾದವರಿಗೆ ದಿನಕ್ಕೆ 1 ಮೊಟ್ಟೆ ಶಿಫಾರಸು ಮಾಡಲಾಗಿದೆ. ಆದರೆ ರಕ್ತದೊತ್ತಡ ಅಥವಾ ತೀವ್ರ ಕೊಲೆಸ್ಟ್ರಾಲ್ ಸಮಸ್ಯೆ ಇರುವವರು ಮೊಟ್ಟೆಯ ಹಳದಿ ಭಾಗ ಸೇವಿಸುವ ಮೊದಲು ವೈದ್ಯರನ್ನು ಸಂಪರ್ಕಿಸಬೇಕು.
ಮೊಟ್ಟೆಯ ಪ್ರಯೋಜನಗಳು ಅನೇಕ. ಇದು ಉತ್ತಮ ಗುಣಮಟ್ಟದ ಪ್ರೋಟೀನ್ ಮೂಲವಾಗಿದ್ದು, ಸ್ನಾಯುಗಳನ್ನು ಬಲಪಡಿಸುತ್ತದೆ. ಹಳದಿ ಭಾಗದಲ್ಲಿರುವ ಲುಟೀನ್ ಮತ್ತು ಜಿಯಾಕ್ಸಾಂಥಿನ್ ಕಣ್ಣಿನ ಆರೋಗ್ಯಕ್ಕೆ ವರದಾನ. ಸಂಶೋಧನೆಗಳ ಪ್ರಕಾರ, ಮೊಟ್ಟೆಯು HDL (ಒಳ್ಳೆಯ ಕೊಲೆಸ್ಟ್ರಾಲ್) ಹೆಚ್ಚಿಸುವುದರಿಂದ ಹೃದಯದ ಆರೋಗ್ಯಕ್ಕೂ ಸಹಕಾರಿ. ಜೊತೆಗೆ, ಬಿ-ಕಾಂಪ್ಲೆಕ್ಸ್ ವಿಟಮಿನ್‌ಗಳು ಮೆದುಳಿನ ಚುರುಕುತನ ಮತ್ತು ನರಮಂಡಲದ ಆರೋಗ್ಯವನ್ನು ಕಾಪಾಡುತ್ತವೆ.
ಆದರೆ ಅತಿಯಾದ ಸೇವನೆ ಬೇಡ. ಮಧುಮೇಹ ಅಥವಾ ಹೃದಯ ಸಂಬಂಧಿ ಕಾಯಿಲೆ ಇರುವವರು ವೈದ್ಯರ ಸಲಹೆ ಮೇರೆಗೆ ಪ್ರಮಾಣವನ್ನು ನಿರ್ಧರಿಸಬೇಕು. ಮೊಟ್ಟೆಯನ್ನು ಎಣ್ಣೆಯಲ್ಲಿ ಕರಿಯುವ ಬದಲು ಬೇಯಿಸಿ ಅಥವಾ ಕಡಿಮೆ ಎಣ್ಣೆಯ ಆಮ್ಲೆಟ್ ರೂಪದಲ್ಲಿ ಸೇವಿಸುವುದು ಉತ್ತಮ. ಬೆಳಿಗ್ಗೆ ತಿಂಡಿಯ ಸಮಯದಲ್ಲಿ ಮೊಟ್ಟೆ ತಿಂದರೆ ದಿನವಿಡೀ ಶಕ್ತಿ ದೊರೆಯುತ್ತದೆ ಎಂದು ಹೇಳಿದ್ದಾರೆ ಎನ್ನಲಾಗುತ್ತಿದೆ. ಮೊಟ್ಟೆ ಆರೋಗ್ಯಕ್ಕೆ ಅಮೂಲ್ಯವಾದ ಆಹಾರ. ಆದರೆ ಮಿತ ಪ್ರಮಾಣದಲ್ಲಿ, ಸರಿಯಾದ ರೀತಿಯಲ್ಲಿ ಸೇವಿಸಿದರೆ ಮಾತ್ರ ಅದು ನಿಜವಾದ ಪೌಷ್ಟಿಕಾಂಶವನ್ನು ನೀಡುತ್ತದೆ ಎನ್ನುವುದು ಅವರ ಮಾತು.