Feb 16, 2026 Languages : ಕನ್ನಡ | English

ಮದುವೆ ಸುದ್ದಿ ನಡುವೆ ಒಟ್ಟಿಗೆ ತೆರೆ ಮೇಲೆ ಮಿಂಚಲು ಸಜ್ಜಾದ ವಿಜಯ್ ರಶ್ಮಿಕಾ - ಬಿಡುಗಡೆ ದಿನಾಂಕ ಘೋಷಣೆ!!

ಟಾಲಿವುಡ್‌ನ ಜನಪ್ರಿಯ ನಟ ವಿಜಯ್ ದೇವರಕೊಂಡ ಹಾಗೂ ನಟಿ ರಶ್ಮಿಕಾ ಮಂದಣ್ಣ ಅವರ ಮದುವೆ ವದಂತಿಗಳು ಜೋರಾಗಿರುವ ನಡುವೆಯೇ, ಈ ಜೋಡಿ ಮತ್ತೊಮ್ಮೆ ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿರುವುದು ಅಭಿಮಾನಿಗಳಿಗೆ ಸಂತೋಷ ತಂದಿದೆ. ‘ರಣಬಾಲಿ’ ಎಂಬ ಹೊಸ ಚಿತ್ರಕ್ಕೆ ಗಣರಾಜ್ಯೋತ್ಸವದ ಅಂಗವಾಗಿ ಮೈತ್ರಿ ಮೂವಿ ಮೇಕರ್ಸ್ ಫಸ್ಟ್ ಲುಕ್ ಬಿಡುಗಡೆ ಮಾಡಿದ್ದು, ಈ ವರ್ಷವೇ ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ ಎಂದು ಘೋಷಿಸಲಾಗಿದೆ.

ಮದುವೆ ವದಂತಿಗಳ ನಡುವೆ ವಿಜಯ್-ರಶ್ಮಿಕಾ ಹೊಸ ಸಿನಿಮಾ ಅಭಿಮಾನಿಗಳಿಗೆ ಖುಷಿ
ಮದುವೆ ವದಂತಿಗಳ ನಡುವೆ ವಿಜಯ್-ರಶ್ಮಿಕಾ ಹೊಸ ಸಿನಿಮಾ ಅಭಿಮಾನಿಗಳಿಗೆ ಖುಷಿ

ಹೌದು, ಈ ಚಿತ್ರವನ್ನು ನಿರ್ದೇಶಕ ರಾಹುಲ್ ಅವರು ನಿರ್ದೇಶನ ಮಾಡುತ್ತಿದ್ದು, ಇತಿಹಾಸದ ಹಿನ್ನೆಲೆಯೊಂದಿಗೆ ಬ್ರಿಟಿಷ್ ಆಳ್ವಿಕೆಯ ಭೀಕರತೆ, ಆರ್ಥಿಕ ಶೋಷಣೆ ಹಾಗೂ ಜನರ ಸಂಕಷ್ಟಗಳನ್ನು ಚಿತ್ರಿಸಲಾಗಿದೆ ಎಂದು ಕೇಳಿ ಬಂದಿದೆ. ವಿಶೇಷವಾಗಿ ಬ್ರಿಟಿಷ್ ಅಧಿಕಾರಿ ರಿಚರ್ಡ್ ಟೆಂಪಲ್ ಅವರಂತಹ ಆಡಳಿತಗಾರರು ಉದ್ದೇಶಪೂರ್ವಕವಾಗಿ ಪ್ರದೇಶಗಳನ್ನು ಬರದ ಭೂಮಿಗಳನ್ನಾಗಿಸಿದ ಪರಿಣಾಮ ಜನರು ಅನುಭವಿಸಿದ ನರಕಯಾತನೆಗಳನ್ನು ತೋರಿಸಲು ಸಜ್ಜಾಗಿದ್ದಾರೆ. 

ನಟ ವಿಜಯ್ ದೇವರಕೊಂಡ ಈ ಚಿತ್ರದಲ್ಲಿ ರಣಬಾಲಿ ಎಂಬ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ರಶ್ಮಿಕಾ ಮಂದಣ್ಣ ಜಯಮ್ಮ ಪಾತ್ರದಲ್ಲಿ ನಟಿಸಿದ್ದಾರೆ. ಹಾಲಿವುಡ್ ನಟ 'ಆರ್ನೋಲ್ಡ್ ವೋಸ್ಲೂ' ಪ್ರತಿನಾಯಕ ಸರ್ ಥಿಯಡೋರ್ ಹೆಕ್ಟರ್ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಫಸ್ಟ್ ಲುಕ್‌ನಲ್ಲಿ ವಿಜಯ್ ದೇವರಕೊಂಡ ಕುದುರೆಯ ಮೇಲೆ ಸವಾರಿ ಮಾಡುತ್ತಾ ಬ್ರಿಟಿಷ್ ಅಧಿಕಾರಿಯನ್ನು ರೈಲು ಹಳಿಗಳ ಮೇಲೆ ಎಳೆದುಕೊಂಡು ಹೋಗುವ ದೃಶ್ಯ ಭಾರೀ ಗಮನ ಸೆಳೆದಿದೆ. ಇದೇ ವೇಳೆ ರಶ್ಮಿಕಾ ಅವರ ಪಾತ್ರದ ಸಣ್ಣ ಝಲಕ್ ಕೂಡ ಬಿಡುಗಡೆಯಾಗಿದೆ.

ಈ ಸಿನಿಮಾ ಸೆಪ್ಟೆಂಬರ್ 11ರಂದು ತೆರೆ ಕಾಣಲಿದ್ದು, ಇತಿಹಾಸ, ಹೋರಾಟ ಮತ್ತು ಜನರ ಆಕ್ರೋಶವನ್ನು ಒಳಗೊಂಡಿರುವ ಕಥೆ ವಿಜಯ್ ದೇವರಕೊಂಡ ಅವರ ಕರಿಯರ್‌ನಲ್ಲಿ ವಿಭಿನ್ನ ಪ್ರಯತ್ನವಾಗಲಿದೆ ಎಂಬ ನಿರೀಕ್ಷೆ ಮೂಡಿಸಿದೆ. ಜೊತೆಗೆ, ಪರದೆಯ ಮೇಲೆ ಮತ್ತೆ ವಿಜಯ್-ರಶ್ಮಿಕಾ ಜೋಡಿಯನ್ನು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ಇದಕ್ಕೂ ಮೀರಿಸಿ, ಇಬ್ಬರ ಮದುವೆ ಕುರಿತ ವದಂತಿಗಳು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿವೆ. ಒಟ್ಟಿಗೆ ಕಾಣಿಸಿಕೊಂಡಿರುವುದು, ಒಂದೇ ಸ್ಥಳಗಳಲ್ಲಿ ರಜೆ ಕಳೆಯುತ್ತಿರುವುದು ಹಾಗೂ ಮತ್ತೆ ಒಂದೇ ಸಿನಿಮಾದಲ್ಲಿ ನಟಿಸುತ್ತಿರುವುದು ಈ ಗಾಸಿಪ್‌ಗಳಿಗೆ ಬಲ ನೀಡಿದೆ. ಫೆಬ್ರವರಿಯಲ್ಲಿ ಮದುವೆ ನಡೆಯಲಿದೆ ಎಂಬ ಮಾತುಗಳಿದ್ದರೂ, ಇಬ್ಬರೂ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮೌನ ವಹಿಸಿದ್ದಾರೆ. ರಶ್ಮಿಕಾ ಇತ್ತೀಚೆಗೆ “ಸಮಯ ಬಂದಾಗ ಮಾತನಾಡುತ್ತೇನೆ” ಎಂದಿರುವುದು ಅಭಿಮಾನಿಗಳ ಕುತೂಹಲವನ್ನು ಇನ್ನಷ್ಟು ಹೆಚ್ಚಿಸಿದೆ.

Latest News