Mar 1, 2026 Languages : ಕನ್ನಡ | English

ಉದಯಪುರದಲ್ಲಿ ರಶ್ಮಿಕಾ-ವಿಜಯ್ ಮದ್ವೆ - ಈ ಹೋಟೆಲ್ ನ ಒಂದು ದಿನದ ಬಾಡಿಗೆ ಕೇಳಿದರೆ ಶಾಕ್ ಆಗ್ತಿರಾ!!

ದಕ್ಷಿಣ ಭಾರತದ ಚಿತ್ರರಂಗದ ಮೋಸ್ಟ್ ರೋಮ್ಯಾಂಟಿಕ್ ಜೋಡಿ ಎಂದೇ ಖ್ಯಾತಿ ಪಡೆದಿರುವ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ಮದುವೆ ಸುದ್ದಿ ಈಗ ಅಧಿಕೃತಗೊಂಡಿದೆ. ಅಭಿಮಾನಿಗಳು ಪ್ರೀತಿಯಿಂದ 'VIROSH' (ವಿರೋಶ್) ಎಂದು ಕರೆಯುವ ಈ ಜೋಡಿ, ರಾಜಸ್ಥಾನದ ಉದಯಪುರದಲ್ಲಿ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಸಂಚಲನ ಸೃಷ್ಟಿಯಾಗಿದೆ.

ಉದಯಪುರದ ಏಕಾಯಾ ರೆಸಾರ್ಟ್‌ನಲ್ಲಿ VIROSH ಮದುವೆ!!
ಉದಯಪುರದ ಏಕಾಯಾ ರೆಸಾರ್ಟ್‌ನಲ್ಲಿ VIROSH ಮದುವೆ!!

ಮೂರು ದಿನಗಳ ವೈಭವದ ಮದುವೆ ಸಂಭ್ರಮ

ವರದಿಗಳ ಪ್ರಕಾರ, ಫೆಬ್ರವರಿ 24 ರಿಂದ 26 ರವರೆಗೆ ಮೂರು ದಿನಗಳ ಕಾಲ ಈ ಮದುವೆ ಸಮಾರಂಭಗಳು ಜರುಗಲಿವೆ. ಫೆಬ್ರವರಿ 24 ರಂದೇ ಅತಿಥಿಗಳ ಆಗಮನ ಆರಂಭವಾಗಿದ್ದು, ಫೆಬ್ರವರಿ 26 ರಂದು ಈ ಜೋಡಿ ಹಸೆಮಣೆ ಏರಲಿದೆ. ಈಗಾಗಲೇ ರಶ್ಮಿಕಾ ಮತ್ತು ವಿಜಯ್ ಭಾರೀ ಭದ್ರತೆಯೊಂದಿಗೆ ಉದಯಪುರ ತಲುಪಿದ್ದು, ವಿವಾಹದ ಸಂಭ್ರಮ ಕಳೆಗಟ್ಟಿದೆ. ಕರ್ನಾಟಕದ ಕೊಡಗಿನ ಕುವರಿ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ನಡುವೆ ಹಲವು ವರ್ಷಗಳಿಂದ ಇದ್ದ ಪ್ರೀತಿಯ ಗುಸುಗುಸು ಸುದ್ದಿಗೆ ಕೊನೆಗೂ ಅಧಿಕೃತ ಮುದ್ರೆ ಬಿದ್ದಿದೆ.

ಅರಾವಳಿ ಬೆಟ್ಟಗಳ ಮಡಿಲಲ್ಲಿ 'ಏಕಾಯಾ' ರೆಸಾರ್ಟ್

ಮದುವೆಗಾಗಿ ಉದಯಪುರದ ಜನಜಂಗುಳಿಯಿಂದ ದೂರವಿರುವ, ಅತ್ಯಂತ ಪ್ರಶಾಂತವಾದ 'ಮೆಮೆಂಟೋಸ್ ಬೈ ಐಟಿಸಿ ಹೋಟೆಲ್ಸ್, ಏಕಾಯಾ' ಎಂಬ ಐಷಾರಾಮಿ ರೆಸಾರ್ಟ್ ಅನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಅರಾವಳಿ ಬೆಟ್ಟಗಳ ಹಚ್ಚ ಹಸಿರಿನ ನಡುವೆ ಇರುವ ಈ ಹೋಟೆಲ್ ರಾಜವೈಭವದ ಶೈಲಿಯನ್ನು ಮರುಸೃಷ್ಟಿಸುತ್ತದೆ. ಮದುವೆಗಾಗಿ ಈ ಹೋಟೆಲ್‌ನ ಒಟ್ಟು 117 ಕೊಠಡಿಗಳನ್ನು ಸಂಪೂರ್ಣವಾಗಿ ಬುಕ್ ಮಾಡಲಾಗಿದೆ.

ಕಟ್ಟುನಿಟ್ಟಾದ 'ನೋ-ಫೋನ್ ಪಾಲಿಸಿ' ಮತ್ತು ಭದ್ರತೆ

ಈ ವಿವಾಹವು ಅತ್ಯಂತ ಖಾಸಗಿಯಾಗಿ ನಡೆಯಲಿದ್ದು, ಕೇವಲ 230 ಆಪ್ತ ಕುಟುಂಬದ ಸದಸ್ಯರು ಮತ್ತು ವಿಶೇಷ ಗಣ್ಯರಿಗೆ ಮಾತ್ರ ಆಮಂತ್ರಣ ನೀಡಲಾಗಿದೆ. ಮದುವೆಯ ಫೋಟೋಗಳು ಲೀಕ್ ಆಗಬಾರದೆಂಬ ಉದ್ದೇಶದಿಂದ ಅತಿಥಿಗಳಿಗೆ ಮೊಬೈಲ್ ಬಳಕೆಯನ್ನು ನಿರ್ಬಂಧಿಸಲಾಗಿದ್ದು, 'ನೋ-ಫೋನ್ ಪಾಲಿಸಿ' ಜಾರಿಗೆ ತರಲಾಗಿದೆ. ಭಾರೀ ಭದ್ರತೆಯ ನಡುವೆ ಈ ಕಾರ್ಯಕ್ರಮ ನಡೆಯಲಿದೆ.

ಐಷಾರಾಮಿ ಹೋಟೆಲ್‌ನ ದರ ಮತ್ತು ಸೌಲಭ್ಯಗಳು

ಈ ಹೋಟೆಲ್‌ನ ಐಷಾರಾಮಿ ಸೌಲಭ್ಯಗಳು ಈಗ ಚರ್ಚೆಯ ವಿಷಯವಾಗಿದೆ. ಇಲ್ಲಿನ ಬಾಡಿಗೆ ದರಗಳು ಸಾಮಾನ್ಯರಿಗೆ ಬಲು ದುಬಾರಿ:

  • ವಿಲ್ಲಾ (Villa): 4 ಜನರು ಉಳಿಯಬಹುದಾದ ವಿಲ್ಲಾ ಬಾಡಿಗೆ ಒಂದು ರಾತ್ರಿಗೆ ಸುಮಾರು ₹35,499 (ತೆರಿಗೆ ಹೊರತುಪಡಿಸಿ).
  • ಸೂಟ್ (Suite): ಪರ್ಸನಲ್ ಸ್ವಿಮ್ಮಿಂಗ್ ಪೂಲ್ ಮತ್ತು ಸುಂದರವಾದ ಗೆಜೆಬೋ ಹೊಂದಿರುವ ಅತ್ಯಂತ ಐಷಾರಾಮಿ ಸೂಟ್‌ನ ಬೆಲೆ ಒಂದು ರಾತ್ರಿಗೆ ಬರೋಬ್ಬರಿ ₹71,499 (ತೆರಿಗೆ ಹೊರತುಪಡಿಸಿ).

ಇತ್ತೀಚೆಗಷ್ಟೇ ಸೋಷಿಯಲ್ ಮೀಡಿಯಾದಲ್ಲಿ ಒಂದೇ ರೀತಿಯ ಪೋಸ್ಟ್ ಹಂಚಿಕೊಳ್ಳುವ ಮೂಲಕ ಮದುವೆ ವಿಚಾರವನ್ನು ಖಚಿತಪಡಿಸಿದ್ದ ಈ ಜೋಡಿಗೆ ಈಗ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಕೊಡಗಿನ ಕುವರಿ ತೆಲುಗು ಮನೆಯ ಸೊಸೆಯಾಗಿ ಹೋಗುತ್ತಿರುವುದು ಕನ್ನಡಿಗರಿಗೂ ಹೆಮ್ಮೆಯ ಹಾಗೂ ಕುತೂಹಲದ ವಿಷಯವಾಗಿದೆ.

Latest News