ದಕ್ಷಿಣ ಭಾರತದ ಚಿತ್ರರಂಗದ ಅತ್ಯಂತ ಪ್ರೀತಿಯ ಜೋಡಿಗಳಾದ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರು ಇಂದು ಅಧಿಕೃತವಾಗಿ ವಿವಾಹವಾಗಿದ್ದಾರೆ. ಉದಯಪುರದಲ್ಲಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ಅದ್ಧೂರಿ ವಿವಾಹ ಇಂದು ಜರುಗಿದೆ. ವರ್ಷಗಳಿಂದ ನಡೆಯುತ್ತಿದ್ದ ಪ್ರೀತಿಯ ಚರ್ಚೆಗಳಿಗೆ ಈ ಮದುವೆ ಮಂಗಳ ಹಾಡಿದೆ. ಕುಟುಂಬದವರು ಮತ್ತು ಆಪ್ತ ಗೆಳೆಯರ ಸಮ್ಮುಖದಲ್ಲಿ ಈ ಜೋಡಿ ವಿವಾಹದ ಸಂಪ್ರದಾಯಗಳನ್ನು ಪೂರೈಸಿದೆ. ರಿಯಲ್ ಲೈಫ್‌ನಲ್ಲಿ ಒಂದಾದ 'ಗೀತಾ ಗೋವಿಂದಂ' ಜೋಡಿಯನ್ನು ನೋಡಿ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಶುಭಾಶಯಗಳ ಮಳೆ ಸುರಿಸುತ್ತಿದ್ದಾರೆ.
ತೆಲುಗು ಸಂಪ್ರದಾಯದಂತೆ ಮದುವೆ
ವಿಶ್ವಾಸಾರ್ಹ ಮೂಲಗಳ ಮಾಹಿತಿಯ ಪ್ರಕಾರ, ವಿಜಯ್ ಮತ್ತು ರಶ್ಮಿಕಾ ಅವರ ವಿವಾಹವು ಇಂದು ಬೆಳಿಗ್ಗೆ ಸರಿಯಾಗಿ 10:10ಕ್ಕೆ ತೆಲುಗು ಸಂಪ್ರದಾಯದಂತೆ ಜರುಗಿದೆ. ಬಹಳ ದಿನಗಳಿಂದ ತಮ್ಮ ಪ್ರೇಮ ಸಂಬಂಧವನ್ನು ಗೌಪ್ಯವಾಗಿಟ್ಟಿದ್ದ ಈ ಜೋಡಿ, ಇಂದು ವೇದ ಶಾಸ್ತ್ರೋಕ್ತವಾಗಿ ಹಸೆಮಣೆ ಏರಿದ್ದಾರೆ. ರಶ್ಮಿಕಾ ಅವರ ಕುಟುಂಬದವರು ವಿಜಯ್ ದೇವರಕೊಂಡ ಮತ್ತು ಅವರ ಕುಟುಂಬವನ್ನು ಸಾಂಪ್ರದಾಯಿಕವಾಗಿ ಬರಮಾಡಿಕೊಂಡರು. ತೆಂಗಿನಕಾಯಿ, ವೀಳ್ಯದೆಲೆ, ಹಣ್ಣು-ಹಂಪಲು ಮತ್ತು ಅರಿಶಿನ-ಕುಂಕುಮ ನೀಡಿ ಗೌರವಿಸುವ ಮೂಲಕ ವಿವಾಹದ ವಿಧಿವಿಧಾನಗಳು ಆರಂಭವಾದವು.
ಹಳೆಯ ಕಾಲದ ಸೊಬಗು ಮತ್ತು ವಿಶೇಷ ಥೀಮ್
ಈ ಮದುವೆಯ ಮತ್ತೊಂದು ವಿಶೇಷವೆಂದರೆ ಅದರ ಹಳೆಯ ಕಾಲದ ಥೀಮ್. ದಶಕಗಳ ಹಿಂದೆ ಮದುವೆಗಳು ಎಷ್ಟು ಸರಳವಾಗಿ ಮತ್ತು ಸಂಪ್ರದಾಯಬದ್ಧವಾಗಿ ನಡೆಯುತ್ತಿದ್ದವೋ, ಅದೇ ಮಾದರಿಯನ್ನು ಇಲ್ಲಿ ಮರುಸೃಷ್ಟಿಸಲಾಗಿತ್ತು. ಯಾವುದೇ ಅಬ್ಬರವಿಲ್ಲದೆ, ಪ್ರಕೃತಿಗೆ ಹತ್ತಿರವಾದ ಮತ್ತು ಸಂಪ್ರದಾಯಕ್ಕೆ ಒತ್ತು ನೀಡುವ ಪ್ರಿಮಲ್ ಥೀಮ್ ಎಲ್ಲರ ಗಮನ ಸೆಳೆಯಿತು. ರಶ್ಮಿಕಾ ಅವರು ಧರಿಸಿದ್ದ ಮದುವೆಯ ಉಡುಪು ಕೂಡ ಸಂಪ್ರದಾಯ ಮತ್ತು ಐಷಾರಾಮಿ ಶೈಲಿಯ ಸುಂದರ ಸಮ್ಮಿಲನವಾಗಿತ್ತು. ಈ ವಿಶೇಷ ಮುಹೂರ್ತಕ್ಕಾಗಿ ಅವರು ಅತ್ಯಂತ ಕಾಳಜಿಯಿಂದ ಆರಿಸಿದ ವಸ್ತ್ರಗಳನ್ನು ಧರಿಸಿದ್ದರು.
ಕೊಡವ ಸಂಪ್ರದಾಯದ ಎರಡನೇ ವಿವಾಹ
ತೆಲುಗು ಸಂಪ್ರದಾಯದಂತೆ ಬೆಳಿಗ್ಗೆ ಮದುವೆ ಮುಗಿದ ನಂತರ, ಸಂಜೆ ಮತ್ತೊಂದು ವಿಶೇಷ ಸಮಾರಂಭ ಆಯೋಜಿಸಲಾಗಿದೆ. ರಶ್ಮಿಕಾ ಮಂದಣ್ಣ ಅವರು ಕೊಡಗಿನವರಾದ ಕಾರಣ, ಅವರ ಸಂಸ್ಕೃತಿಯನ್ನು ಗೌರವಿಸಲು ಸಂಜೆ ಕೊಡವ ಶೈಲಿಯ ಮದುವೆ ನಡೆಯಲಿದೆ. ಈ ಮೂಲಕ ಎರಡು ವಿಭಿನ್ನ ಸಂಸ್ಕೃತಿಗಳನ್ನು ವಿಜಯ್ ಮತ್ತು ರಶ್ಮಿಕಾ ಗೌರವಿಸುತ್ತಿದ್ದಾರೆ. ಎರಡು ರಾಜ್ಯಗಳ ಸಂಪ್ರದಾಯಗಳನ್ನು ಒಂದೇ ವೇದಿಕೆಯಲ್ಲಿ ಆಚರಿಸುವ ಮೂಲಕ ಈ ಜೋಡಿ ಮಾದರಿಯಾಗಿದೆ. ಇಂದು ಸಂಜೆ ಈ ನವಜೋಡಿಯ ಕನಸಿನ ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಅಧಿಕೃತವಾಗಿ ಬಿಡುಗಡೆಯಾಗುವ ನಿರೀಕ್ಷೆಯಿದೆ.