ನಟಿ ಮೃಣಾಲ್ ಠಾಕೂರ್ ಮತ್ತು ನಟ ಧನುಷ್ ಅವರ ವಿವಾಹದ ಬಗ್ಗೆ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆ ನಡೆದಿತ್ತು. ಫೆಬ್ರವರಿ 14ರಂದು ವ್ಯಾಲೆಂಟೈನ್ಸ್ ಡೇ ದಿನವೇ ಇಬ್ಬರೂ ಮದುವೆಯಾಗಲಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿದ್ದವು. ಆದರೆ ಈಗ ಈ ಎಲ್ಲ ಸುದ್ದಿಗಳಿಗೆ ಮೃಣಾಲ್ ಠಾಕೂರ್ ಸ್ಪಷ್ಟನೆ ನೀಡಿದ್ದಾರೆ.
ಮುಂಬೈನಲ್ಲಿ ತಮ್ಮ ಹೊಸ ಚಿತ್ರದ ಪ್ರಚಾರದ ವೇಳೆ ಮೃಣಾಲ್ ಈ ವಿಚಾರಕ್ಕೆ ಪ್ರತಿಕ್ರಿಯಿಸಿದರು. “ನಾನು ಮದುವೆಯಾಗುತ್ತಿದ್ದೇನೆಂಬುದು ನನಗೂ ಗೊತ್ತಿಲ್ಲ!” ಎಂದು ಅವರು ಹಾಸ್ಯವಾಗಿ ಹೇಳಿದರು. ಈ ವದಂತಿಗಳು ಕೇಳಿ ತಾನೂ ನಗುತ್ತೇನೆ ಎಂದು ತಿಳಿಸಿದರು. ಫೆಬ್ರವರಿ 14ರ ವಿವಾಹ ಸುದ್ದಿ ಏಪ್ರಿಲ್ ಫೂಲ್ ಜೋಕ್ ಆಗಿಬಿಡುತ್ತದೆ ಎಂದು ತಮಾಷೆ ಮಾಡಿದರು. ಚಿತ್ರದಲ್ಲಿ ‘ಅರೇಂಜ್ಡ್ ಮ್ಯಾರೇಜ್’ ವಿಷಯವಿರುವ ಹಿನ್ನೆಲೆ, ನಿಮ್ಮ ಮನೆಲ್ಲೂ ಮದುವೆ ಚರ್ಚೆ ನಡೆಯುತ್ತಿದೆಯೇ ಎಂದು ಕೇಳಿದಾಗ ಮೃಣಾಲ್ ನೇರವಾಗಿ ಉತ್ತರಿಸಿದರು. “ನಿನ್ನೆ ನಾನೇ ಅಪ್ಪನಿಗೆ ಒಬ್ಬ ಹುಡುಗ ನೋಡಲು ಹೇಳಿದ್ದೆ. ಅವರು ಯಾರೂ ಮನಸ್ಸಿನಲ್ಲಿ ಇಲ್ಲ ಎಂದರು,” ಎಂದು ಹೇಳಿದರು. ಅಂದರೆ, ಈಗಾಗಲೇ ಮದುವೆ ನಿಶ್ಚಯವಾಗಿಲ್ಲ ಎಂಬುದನ್ನು ಅವರು ಸ್ಪಷ್ಟಪಡಿಸಿದರು.
ವೈಯಕ್ತಿಕ ಜೀವನವೂ ವೃತ್ತಿಜೀವನದಷ್ಟು ಮುಖ್ಯವೆಂದು ಮೃಣಾಲ್ ಹೇಳಿದರು. “ಕೆವಲ ಮದುವೆಗಾಗಿ ಮದುವೆಯಾಗಬಾರದು. ಸರಿಯಾದ ಸಮಯದಲ್ಲಿ, ಸರಿಯಾದ ವ್ಯಕ್ತಿಯನ್ನು ಭೇಟಿಯಾದಾಗ ಮಾತ್ರ ಜೀವನದ ನಿರ್ಧಾರ ತೆಗೆದುಕೊಳ್ಳಬೇಕು,” ಎಂದರು. ತಮಗೆ ಮನಸ್ಸಿಗೆ ಶಾಂತಿ ನೀಡುವ, ಆರಾಮವಾಗಿರಿಸುವ ವ್ಯಕ್ತಿಯೇ ಜೀವನ ಸಂಗಾತಿಯಾಗಬೇಕು ಎಂಬ ಅಭಿಪ್ರಾಯ ಹಂಚಿಕೊಂಡರು.
“ನಾನು ತುಂಬಾ ಅಭಿವ್ಯಕ್ತಿಶೀಲ ವ್ಯಕ್ತಿ. ನಾನು ನಿಜವಾಗಿಯೂ ಪ್ರೀತಿಯಲ್ಲಿ ಬಿದ್ದರೆ, ಅದನ್ನು ಹೆಮ್ಮೆಯಿಂದ ಜಗತ್ತಿಗೆ ಹೇಳುತ್ತೇನೆ,” ಎಂದು ಮೃಣಾಲ್ ಆತ್ಮವಿಶ್ವಾಸದಿಂದ ಹೇಳಿದರು. ಮದುವೆ ಆದಾಗ ಖಂಡಿತವಾಗಿ ಅಧಿಕೃತವಾಗಿ ಘೋಷಿಸುತ್ತೇನೆ ಎಂದೂ ಸ್ಪಷ್ಟಪಡಿಸಿದರು. ಧನುಷ್ ಜೊತೆಗಿನ ವಿವಾಹ ಸುದ್ದಿ ಕೇವಲ ವದಂತಿ ಮಾತ್ರವೆಂದು ಮೃಣಾಲ್ ಠಾಕೂರ್ ಹಾಸ್ಯಮಯವಾಗಿ ತಳ್ಳಿಹಾಕಿದ್ದಾರೆ. ಈಗಿನಷ್ಟರಲ್ಲಿ ಅವರು ತಮ್ಮ ಸಿನಿಮಾಗಳ ಮತ್ತು ವೃತ್ತಿಜೀವನದ ಮೇಲೆ ಗಮನ ಹರಿಸಿದ್ದಾರೆ.