Apr 29, 2026 Languages : ಕನ್ನಡ | English

ಜೂನ್ 4ಕ್ಕೆ ರಾಕಿ ಭಾಯ್ ಬರಲ್ಲ, ಪಚ್ಚ ಬರ್ತಾನೆ - ಸೋದರಳಿಯನ ಲಾಂಚ್‌ಗೆ ಸುದೀಪ್ ಹಾಕಿರೋ ಮಾಸ್ಟರ್ ಪ್ಲಾನ್ ಇಲ್ಲಿದೆ!!

ಸ್ಯಾಂಡಲ್‌ವುಡ್‌ನಲ್ಲಿ ಡೇಟ್ಸ್‌ಗಳ ಆಟ ಜೋರಾಗಿದೆ! ರಾಕಿಂಗ್ ಸ್ಟಾರ್ ಯಶ್ ಅವರ 'ಟಾಕ್ಸಿಕ್' ಸಿನಿಮಾ ಜೂನ್ 4ಕ್ಕೆ ಬರಲ್ಲ ಅನ್ನೋದು ಕನ್ಫರ್ಮ್ ಆಗಿದ್ದೇ ತಡ, ಕಿಚ್ಚ ಸುದೀಪ್ ಆ ಜಾಗಕ್ಕೆ ಟವೆಲ್ ಹಾಕಿದ್ದಾರೆ. ಹೌದು, ಸುದೀಪ್ ಅವರ ಸೋದರಳಿಯ ಸಂಚಿತ್ ಸಂಜೀವ್ ನಟನೆಯ ಚೊಚ್ಚಲ ಸಿನಿಮಾ 'ಮ್ಯಾಂಗೋ ಪಚ್ಚ' ಈಗ ಜೂನ್ ಮೊದಲ ವಾರ ಅಬ್ಬರಿಸಲು ಸಜ್ಜಾಗಿದೆ.

ಕಿಚ್ಚ ಸುದೀಪ್ ಕೊಟ್ಟ ಬಿಗ್ ಸರ್ಪ್ರೈಸ್ | Photo Credit: KicchaSudeep
ಕಿಚ್ಚ ಸುದೀಪ್ ಕೊಟ್ಟ ಬಿಗ್ ಸರ್ಪ್ರೈಸ್ | Photo Credit: KicchaSudeep

ಯಶ್ ಡೇಟ್ ಮೇಲೆ ಸುದೀಪ್ ಕಣ್ಣು

ಯಶ್ ಅವರ 'ಟಾಕ್ಸಿಕ್' ಸಿನಿಮಾ ಜೂನ್ 4ಕ್ಕೆ ಬಿಡುಗಡೆಯಾಗಬೇಕಿತ್ತು. ಆದರೆ ಸಿನಿಮಾ ದೊಡ್ಡ ಮಟ್ಟದಲ್ಲಿ ಮೂಡಿಬರಲಿ ಎಂಬ ಕಾರಣಕ್ಕೆ ಯಶ್ ರಿಲೀಸ್ ಡೇಟ್ ಅನ್ನು ಮುಂದೂಡಿದ್ದಾರೆ. ಅತ್ತ ಜೂನ್ 4 ಫ್ರೀ ಆಗ್ತಿದ್ದಂತೆ ಇತ್ತ ಕಿಚ್ಚ ಅಲರ್ಟ್ ಆಗಿದ್ದಾರೆ. ಸಂಚಿತ್ ಸಂಜೀವ್ ಅವರನ್ನು ಹೀರೋ ಆಗಿ ಲಾಂಚ್ ಮಾಡ್ತಿರೋ 'ಮ್ಯಾಂಗೋ ಪಚ್ಚ' ಚಿತ್ರವನ್ನು ಜೂನ್ 5 ರಂದು ತೆರೆಗೆ ತರುವುದಾಗಿ ಸುದೀಪ್ ಅಧಿಕೃತವಾಗಿ ಘೋಷಿಸಿದ್ದಾರೆ.

ಏನಿದು 'ಮ್ಯಾಂಗೋ ಪಚ್ಚ' ಕಹಾನಿ?

ಇದು ಮೈಸೂರಿನ ಸುತ್ತ ನಡೆಯುವ ಸಖತ್ ಕ್ರೈಂ ಥ್ರಿಲ್ಲರ್ ಕಥೆ. 2001 ರಿಂದ 2011ರ ಅವಧಿಯಲ್ಲಿ ಮೈಸೂರಿನಲ್ಲಿ ನಡೆದ ಘಟನೆಗಳನ್ನು ಇಟ್ಟುಕೊಂಡು ರೆಟ್ರೋ ಶೈಲಿಯಲ್ಲಿ ಈ ಸಿನಿಮಾ ಮಾಡಲಾಗಿದೆ. ಕಿಚ್ಚ ಸುದೀಪ್ ಅವರ 'ಸುಪ್ರಿಯಾನ್ವಿ' ಮತ್ತು 'ಕೆಆರ್‌ಜಿ ಸ್ಟುಡಿಯೋಸ್' ಜಂಟಿಯಾಗಿ ಈ ಚಿತ್ರವನ್ನು ನಿರ್ಮಾಣ ಮಾಡಿವೆ. ಸುದೀಪ್ ಅವರೇ ಟ್ವೀಟ್ ಮಾಡಿ, "ಪ್ರಶಾಂತ ಹೇಗೆ ಮಾವು ಪಚ್ಚ ಆಗುತ್ತಾನೆ ಅನ್ನೋದೇ ಈ ಜರ್ನಿ" ಅಂತ ಕುತೂಹಲ ಹೆಚ್ಚಿಸಿದ್ದಾರೆ.

ಸಂಚಿತ್ ಸಂಜೀವ್ ಲಾಂಚ್‌ಗೆ ವೇದಿಕೆ ಸಿದ್ಧ

ಸಂಚಿತ್ ಸಂಜೀವ್ ಅವರಿಗೆ ಇದು ಮೊದಲ ಸಿನಿಮಾ. ಈ ಹಿಂದೆ 'ಜಿಮ್ಮಿ' ಅನ್ನೋ ಸಿನಿಮಾ ಮಾಡಬೇಕಿತ್ತಾದರೂ ಕಾರಣಾಂತರಗಳಿಂದ ಅದು ಲೇಟ್ ಆಗ್ತಿದೆ. ಈಗ 'ಮ್ಯಾಂಗೋ ಪಚ್ಚ' ಮೂಲಕ ಮಾವನ ಹಾದಿಯಲ್ಲೇ ಮಿಂಚಲು ಸಂಚಿತ್ ರೆಡಿಯಾಗಿದ್ದಾರೆ. ಈ ಸಿನಿಮಾದ ಹಾಡುಗಳು ಈಗಾಗಲೇ ಸೂಪರ್ ಹಿಟ್ ಆಗಿವೆ.

'ಅರಗಿಣಿಯೇ' ಹಾಡಿಗೆ ಸುದೀಪ್ ಮಗಳು ಸಾನ್ವಿ ಧನಿಯಾಗಿರೋದು ವಿಶೇಷ. ಚರಣ್ ರಾಜ್ ಅವರ ಮ್ಯೂಸಿಕ್ ಮತ್ತು ಶೇಖರ್ ಚಂದ್ರ ಅವರ ಕ್ಯಾಮೆರಾ ವರ್ಕ್ ಸಿನಿಮಾದ ಮೆರುಗು ಹೆಚ್ಚಿಸಿದೆ.

ಸ್ಟಾರ್ ಕಾಸ್ಟ್ ಕೂಡ ಸಖತ್ ಆಗಿದೆ

ಈ ಚಿತ್ರದಲ್ಲಿ ಸಂಚಿತ್‌ಗೆ ಜೋಡಿಯಾಗಿ ಕಾಜಲ್ ಕುಂದರ್ ನಟಿಸಿದ್ದು, ಮಯೂರ್ ಪಟೇಲ್, ಭಾವನಾ, ಹರಿಣಿ ಶ್ರೀಕಾಂತ್ ಮತ್ತು ವಿಜಯ್ ರಾಘವೇಂದ್ರ ಅವರ ಅಳಿಯ ಜೈ ಗೋಪಿನಾಥ್ ಕೂಡ ಪ್ರಮುಖ ಪಾತ್ರಗಳಲ್ಲಿದ್ದಾರೆ. ಅಂದಹಾಗೆ, ಒಂದು ಸಣ್ಣ ಗಾಸಿಪ್ ಪ್ರಕಾರ ನಟರಾಕ್ಷಸ ಡಾಲಿ ಧನಂಜಯ್ ಕೂಡ ಈ ಚಿತ್ರದಲ್ಲಿ ಗೆಸ್ಟ್ ಅಪಿಯರೆನ್ಸ್ ಮಾಡಿದ್ದಾರಂತೆ.

ಹಿಂದೆ 'ಟಾಕ್ಸಿಕ್' ಮಾರ್ಚ್ 19ಕ್ಕೆ ಬರಲ್ಲ ಅಂದಾಗ ಅದರ ಲಾಭವನ್ನು 'ಲವ್ ಮಾಕ್ಟೇಲ್ 3' ಪಡಕೊಂಡಿತ್ತು. ಈಗ ಜೂನ್ 4ಕ್ಕೆ ಬರಲ್ಲ ಅಂದಾಗ ಸುದೀಪ್ ಮೈಸೂರಿನ ಪಚ್ಚನನ್ನು ಕಳಿಸ್ತಿದ್ದಾರೆ.   ಯಶ್ ಫ್ಯಾನ್ಸ್‌ಗೆ ನಿರಾಸೆಯಾದರೂ, ಸುದೀಪ್ ಅವರ ಸೋದರಳಿಯನ ಎಂಟ್ರಿಯಿಂದ ಸ್ಯಾಂಡಲ್‌ವುಡ್‌ನಲ್ಲಿ ಜೂನ್ ತಿಂಗಳು ರಂಗೇರೋದು ಗ್ಯಾರಂಟಿ.

Latest News