ಸ್ಯಾಂಡಲ್‌ವುಡ್‌ನ ಸಲಗ ದುನಿಯಾ ವಿಜಯ್ ನಟನೆಯ 'ಲ್ಯಾಂಡ್‌ಲಾರ್ಡ್' ಸಿನಿಮಾ ಇತ್ತೀಚೆಗೆ ತೆರೆಗೆ ಬಂದಿದೆ. ನಟ ದುನಿಯಾ ವಿಜಯ್, ರಚಿತಾ ರಾಮ್ ಹಾಗೂ ವಿಜಯ್ ಪುತ್ರಿ ರಿತಾನ್ಯಾ ಅಭಿನಯಿಸಿರುವ ಈ ಚಿತ್ರವು ಸಾಮಾಜಿಕ ಅಸಮಾನತೆ ಮತ್ತು ಜಾತಿ ಶೋಷಣೆ ವಿಷಯವನ್ನು ಹೊತ್ತು ಬಂದಿದೆ. ಜನವರಿ 23ರಂದು ಅದ್ಧೂರಿಯಾಗಿ ಬಿಡುಗಡೆಯಾದ ಈ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ. ವಿಶೇಷವಾಗಿ ದುನಿಯಾ ವಿಜಯ್ ಮತ್ತು ರಚಿತಾ ರಾಮ್ ಅವರ ನಟನೆಗೆ ಪ್ರೇಕ್ಷರಿಂದ ಆಪಾರ ಮೆಚ್ಚುಗೆ ವ್ಯಕ್ತವಾಗಿದೆ ಎನ್ನಬಹುದು.
ತೆರಿಗೆ ವಿನಾಯ್ತಿ ಘೋಷಣೆ
ಚಿತ್ರದ ಆಶಯವನ್ನು ತಿಳಿಸಲು ನಟ ದುನಿಯಾ ವಿಜಯ್ ಮತ್ತು ತಂಡ ಸಿಎಂ ಸಿದ್ಧರಾಮಯ್ಯ ಅವರನ್ನು ಭೇಟಿ ಮಾಡಿದ್ದರು. ನಂತರ ಸಿಎಂ ಸಿದ್ದರಾಮಯ್ಯ ಅವರು 'ಲ್ಯಾಂಡ್‌ಲಾರ್ಡ್' ಚಿತ್ರಕ್ಕೆ 100% ತೆರಿಗೆ ವಿನಾಯ್ತಿ ನೀಡುವಂತೆ ತೆರಿಗೆ ಇಲಾಖೆಗೆ ಸೂಚನೆ ನೀಡಿದರು. ಸರ್ಕಾರದ ಈ ನಿರ್ಧಾರವನ್ನು ಚಿತ್ರತಂಡ ಸಿಹಿ ಸುದ್ದಿಯಾಗಿ ಸ್ವೀಕರಿಸಿತು.
ಚೇತನ್ ಅಹಿಂಸಾ ವಿರೋಧ
ಆದರೆ ಈ ನಿರ್ಧಾರಕ್ಕೆ ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಅವರು ಇದೀಗ ಅಸಮಧಾನ ವ್ಯಕ್ತಪಡಿಸಿದ್ದಾರೆ. ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಅವರು, "ಸಂಪರ್ಕ ಹೊಂದಿರುವವರಿಗೆ ಮಾತ್ರ ಲಾಭ ನೀಡುವುದು ಪ್ರಜಾಸತ್ತಾತ್ಮಕ ನ್ಯಾಯ ತತ್ವಕ್ಕೆ ಧಕ್ಕೆ ತರುತ್ತದೆ. ಬೇರೆ ಚಿತ್ರಗಳು ಅರ್ಹವಲ್ಲವೇ? ಪ್ರತಿಯೊಂದು ಚಿತ್ರಗಳಿಗೆ ತೆರಿಗೆ ವಿನಾಯ್ತಿ ನೀಡಬೇಕು, ಇಲ್ಲವೇ ಯಾವುದಕ್ಕೂ ನೀಡಬಾರದು" ಎಂದು ಬರೆದುಕೊಂಡಿದ್ದಾರೆ. ಚೇತನ್ ಅವರ ಅಭಿಪ್ರಾಯದಲ್ಲಿ ಸರ್ಕಾರದ ಈ ಕ್ರಮ ಪಕ್ಷಪಾತದಂತಿದೆ.
ಸಿಎಂ ಸಿದ್ಧರಾಮಯ್ಯ ಪ್ರತಿಕ್ರಿಯೆ
ದುನಿಯಾ ವಿಜಯ್ ಭೇಟಿ ಬಳಿಕ ಸಿಎಂ ಸಿದ್ಧರಾಮಯ್ಯ ಅವರು ಸಹ ತಮ್ಮ ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿ, "ಸಾಮಾಜಿಕ ಅಸಮಾನತೆ ಮತ್ತು ಜಾತಿ ಶೋಷಣೆ ವಿಷಯಾಧಾರಿತ 'ಲ್ಯಾಂಡ್‌ಲಾರ್ಡ್' ಚಿತ್ರಕ್ಕೆ ತೆರಿಗೆ ವಿನಾಯ್ತಿ ನೀಡಿದ್ದೇನೆ. ಸಮಾಜದಲ್ಲಿ ಪರಿವರ್ತನೆ ತರಲು ಸಿನೆಮಾ ಅತ್ಯಂತ ಪರಿಣಾಮಕಾರಿ ಮಾಧ್ಯಮ. ಸಾಮಾಜಿಕ ಕಳಕಳಿಯ ಚಿತ್ರಗಳನ್ನು ಮಾಡಿದಾಗ ಸರ್ಕಾರವಾಗಿ ಬೆಂಬಲ ನೀಡುವುದು ನಮ್ಮ ನೈತಿಕ ಹೊಣೆ. ಮುಂದಿನ ದಿನಗಳಲ್ಲಿ ಇಂತಹ ಇನ್ನಷ್ಟು ಚಿತ್ರಗಳು ಮೂಡಿಬರಲು ಈ ನಿರ್ಧಾರ ಸ್ಪೂರ್ತಿಯಾಗಲಿದೆ" ಎಂದು ಹೇಳಿದ್ದಾರೆ.
'ಲ್ಯಾಂಡ್‌ಲಾರ್ಡ್' ಸಿನಿಮಾ ಒಂದು ಸಾಮಾಜಿಕ ಸಂದೇಶವನ್ನು ಸಾರುವ ಪ್ರಯತ್ನ ಮಾಡಿದೆ. ಸರ್ಕಾರದ ತೆರಿಗೆ ವಿನಾಯ್ತಿ ನಿರ್ಧಾರಕ್ಕೆ ಚಿತ್ರತಂಡ ಸಂತೋಷಪಟ್ಟರೆ, ಕೆಲವರು ಪಕ್ಷಪಾತದ ಕ್ರಮವೆಂದು ವಿರೋಧ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ, ಈ ಸಿನಿಮಾ ಸಾಮಾಜಿಕ ಚರ್ಚೆಗೆ ಕಾರಣವಾಗಿದ್ದು, ತೆರಿಗೆ ವಿನಾಯ್ತಿ ನಿರ್ಧಾರವು ಜನರಲ್ಲಿ ವಿಭಿನ್ನ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದೆ. ಈ ವಿಷಯ ಮುಂದಿನ ದಿನಗಳಲ್ಲಿ ಯಾವ ರೀತಿ ಬೆಳವಣಿಗೆ ಪಡೆದುಕೊಳ್ಳುತ್ತದೆ, ಹಾಗೇನೇ ಯಾವ ಯಾವ ಮಾತುಗಳು ಹೊರ ಹೊಮ್ಮುತ್ತವೆ ಎಂದು ಕಾದು ನೋಡೋಣ.