Dec 12, 2025 Languages : ಕನ್ನಡ | English

ಹೆಣ್ಣುಮಗಳ ಬಗ್ಗೆ ಅಗೌರವ ತೋರಿರುವ ಸಿದ್ದರಾಮಯ್ಯನವರ ವಿರುದ್ಧ ಕೇಸ್ ದಾಖಲಾಗಬೇಕು - ಪ್ರತಾಪ್ ಸಿಂಹ

ಕೋಲಾರ ಜಿಲ್ಲೆಯ ಕೆಜಿಎಫ್‌ನಲ್ಲಿ ನಡೆದ ಭೀಮ ನಡಿಗೆ ಕಾರ್ಯಕ್ರಮದ ನಂತರ ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತೀವ್ರ ಟೀಕೆ ನಡೆಸಿದರು. ಕೇಂದ್ರದ ವಿತ್ತ ಸಚಿವೆ ಕುರಿತು ಸಿದ್ದರಾಮಯ್ಯ ಏಕವಚನದಲ್ಲಿ ಮಾತನಾಡಿದುದನ್ನು ಅವರು ಖಂಡಿಸಿದರು. “ನೀವು ಒಬ್ಬ ಹಣಕಾಸು ಸಚಿವರಾಗಿ ಕೇಂದ್ರದ ಹಣಕಾಸು ಸಚಿವರ ಹೆಸರು ಗೊತ್ತಿಲ್ಲವೇ? ಗೊತ್ತಿದ್ದರೂ ಈ ರೀತಿ ಉಢಾಪೆ ಮಾತಾಡಿದ್ರಾ” ಎಂದು ಪ್ರಶ್ನಿಸಿದ ಪ್ರತಾಪ್ ಸಿಂಹ, ಮಹಿಳಾ ಸಚಿವೆಯ ಬಗ್ಗೆ ಅವಮಾನಕಾರಿ ಭಾಷೆ ಬಳಸಿರುವುದರಿಂದ ಸಮಾಜಕ್ಕೆ ತಪ್ಪು ಸಂದೇಶ ಹೋಗುತ್ತಿದೆ ಎಂದು ಆರೋಪಿಸಿದರು.

ಕೋಲಾರ ಕೆಜಿಎಫ್‌ನಲ್ಲಿ ಪ್ರತಾಪ್ ಸಿಂಹ – ಸಿದ್ದರಾಮಯ್ಯ ವಿರುದ್ಧ ತೀವ್ರ ಟೀಕೆ
ಕೋಲಾರ ಕೆಜಿಎಫ್‌ನಲ್ಲಿ ಪ್ರತಾಪ್ ಸಿಂಹ – ಸಿದ್ದರಾಮಯ್ಯ ವಿರುದ್ಧ ತೀವ್ರ ಟೀಕೆ

ಅವರು ದ್ವೇಷ ಭಾಷಣ ಬಿಲ್ ಕುರಿತು ಮಾತನಾಡಿ, “ದ್ವೇಷ ಬಾಷಣ ಬಿಲ್ ಪಾಸ್ ಆದರೆ ಮೊದಲ ಪ್ರಕರಣ ಸಿದ್ದರಾಮಯ್ಯ ಅವರ ಮೇಲೆ ಹಾಕಬೇಕು. ದೇಶದ ಹೆಣ್ಣುಮಗಳ ಬಗ್ಗೆ ಅಗೌರವ ತೋರಿರುವ ಸಿದ್ದರಾಮಯ್ಯ ವಿರುದ್ಧ ಕೇಸ್ ದಾಖಲಿಸಬೇಕು” ಎಂದು ಹೇಳಿದರು. ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಅವರು “ಅಪ್ಪ ಇನ್ನೂ ಎರಡುವರೆ ವರ್ಷ ಮುಂದುವರೆಯುತ್ತಾರೆ” ಎಂದು ಹೇಳಿದ್ದಕ್ಕೆ ಪ್ರತಾಪ್ ಸಿಂಹ ಪ್ರತಿಕ್ರಿಯಿಸಿದರು. “ಅಪ್ಪ ಮುಂದುವರೆದರೆ ತನ್ನ ಜೋಳಿಗೆ ತುಂಬುತ್ತೆ ಅಂದುಕೊಂಡೊದ್ದಾರೆ. ಸಿದ್ದರಾಮಯ್ಯ ತಮ್ಮ ಮಗನಷ್ಟೇ ಅಲ್ಲ ಹಲವರಿಂದ ಈರೀತಿ ಹೇಳಿಸುತ್ತಿದ್ದಾರೆ. ಹಾಗೆ ಹೇಳಿ ಕೆಲವರ ಮಂತ್ರಿ ಪದವಿಯೇ ಹೋಗಿದೆ” ಎಂದು ವ್ಯಂಗ್ಯವಾಡಿದರು.

ರಾಜ್ಯದ ಗ್ಯಾರಂಟಿ ಯೋಜನೆಗಳ ಬಗ್ಗೆ ಪ್ರತಾಪ್ ಸಿಂಹ ತೀವ್ರ ಟೀಕೆ ನಡೆಸಿದರು. “ನಿನ್ನ ಹೆಂಡತಿಗೂ ಪ್ರೀ ಅಂತ ಹೇಳಿ ಬರೀ ತಮಟೆ ಹೊಡೆಯುತ್ತಿದ್ದಾರೆ. ಹಾಲಿನ ಬಿಲ್ ಜಾಸ್ತಿ ಆಯ್ತು, ಬಸ್ ವ್ಯವಸ್ಥೆ ಹಾಳಾಯ್ತು, ಗೃಹ ಲಕ್ಷ್ಮಿ ಹಣ ಬರ್ತಿಲ್ಲ. ಹೀಗೆ ರಾಜ್ಯದ ಅರ್ಥ ವ್ಯವಸ್ಥೆ ಹಾಳುಮಾಡಿದ್ರು” ಎಂದು ಅವರು ಆರೋಪಿಸಿದರು. “ಎಂಟು ಲಕ್ಷ ಕೋಟಿ ಸಾಲ ಮಾಡಿದ ಕುಖ್ಯಾತಿ ಸಿದ್ದರಾಮಯ್ಯ ಅವರಿಗಿದೆ. ಹದಿನಾರು ಬಾರಿ ಬಜೆಟ್ ಮಂಡಿಸಿದ ವಿಶ್ವದ ಕುಖ್ಯಾತ ಅರ್ಥಶಾಸ್ತ್ರಜ್ಞ ಸಿದ್ದರಾಮಯ್ಯ ಸತ್ತ ಸರ್ಕಾರದ ಮುಖ್ಯಮಂತ್ರಿ” ಎಂದು ಪ್ರತಾಪ್ ಸಿಂಹ ಟೀಕಿಸಿದರು.

ಅವರು ಸರ್ಕಾರದ ಸ್ಥಿತಿ ಕುರಿತು ಮಾತನಾಡಿ, “ಸರ್ಕಾರ ಸತ್ತುಹೋಗಿದೆ. ಸತ್ತ ಸರ್ಕಾರದ ಹೆಣವನ್ನು ಸಿದ್ದರಾಮಯ್ಯ ಮುಂದೆ ಹೊರುತ್ತಿದ್ದಾರೆ, ಡಿಕೆ ಶಿವಕುಮಾರ್ ಹಿಂದೆ ಹೊರುತ್ತಿದ್ದಾರೆ. ಈಗ ಡಿಕೆ ಶಿವಕುಮಾರ್ ಮುಂದೆ ಹೊರಬೇಕು ಅಂತ ಆಸೆ ಇದೆ, ಆದರೆ ಸಿದ್ದರಾಮಯ್ಯ ನಾನೇ ಹೊರಬೇಕು ಎನ್ನುತ್ತಿದ್ದಾರೆ. ಆದರೂ ಯಾರೇ ಹೊರಲಿ ಸರ್ಕಾರ ಮಾತ್ರ ಸತ್ತೋಗಿದೆ” ಎಂದು ಹೇಳಿದರು. ರಾಜ್ಯದ ಜನರು ಸರ್ಕಾರವನ್ನು ತೊಲಗಿಸಲು ತೀರ್ಮಾನ ಮಾಡಿದ್ದಾರೆ ಎಂದು ಪ್ರತಾಪ್ ಸಿಂಹ ಹೇಳಿದರು. “ನೂರ ನಲವತ್ತು ಸೀಟು ಕೊಟ್ಟ ಜನರು ಮಾಡಿದ ತಪ್ಪಿಗೆ ಜನರು ಅನುಭವಿಸಬೇಕು. ಮೈಮರೆತ ನಾವು ಬಿಜೆಪಿಯವರು ಅನುಭವಿಸಬೇಕು” ಎಂದು ಅವರು ವ್ಯಂಗ್ಯವಾಡಿದರು. 

Latest News